ಸಮಗ್ರ ಸುದ್ದಿ

ಬೆಂಗಳೂರು ಪೇಟೆಯ ವೈಟ್ ಟಾಪಿಂಗ್ ರಸ್ತೆಯಲ್ಲಿ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ : ಕೃಷ್ಣ ಬೈರೇಗೌಡ

Share

ಬೆಂಗಳೂರು:ಬೆಂಗಳೂರು ಪೇಟೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವೈಟ್ ಟಾಪಿಂಗ್ ರಸ್ತೆಯಲ್ಲಿ ಪ್ರಥಮ ಬಾರಿಗೆ ‘ಫೈರ್ ಹೈಡ್ರೆಂಟ್’ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತ್ವರಿತವಾಗಿ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಟ್ಯಾಂಕ್ ಬಂಡ್ ರಸ್ತೆ ಹಾಗೂ ರಂಗಸ್ವಾಮಿ ಟೆಂಪಲ್ ರಸ್ತೆ (ಆರ್.ಟಿ. ಸ್ಟ್ರೀಟ್) ಗಳಲ್ಲಿ ನೂತನವಾಗಿ ನಿರ್ಮಿಸಿರುವ ವೈಟ್ ಟಾಪಿಂಗ್ ರಸ್ತೆಗಳನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಬಿ-ಸ್ಮೈಲ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಾದ ಟ್ಯಾಂಕ್ ಬಂಡ್ ರಸ್ತೆ ಹಾಗೂ ಆರ್.ಟಿ. ಸ್ಟ್ರೀಟ್ ಅನ್ನು ಸಾರ್ವಜನಿಕರ ಬಳಕೆಗೆ ಅಧಿಕೃತವಾಗಿ ಸಮರ್ಪಿಸಲಾಗಿದೆ. ಭವಿಷ್ಯದಲ್ಲಿ ಪದೇಪದೇ ರಸ್ತೆ ಅಗೆಯುವ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ, ಬಿಡಬ್ಲ್ಯೂಎಸ್‌ಎಸ್‌ಬಿಯ ನೀರು ಸರಬರಾಜು ಹಾಗೂ ಒಳಚರಂಡಿ ಮಾರ್ಗಗಳ ವ್ಯವಸ್ಥೆ, ಸಮಗ್ರ ಪಾದಚಾರಿ ಮಾರ್ಗ ನಿರ್ಮಾಣ ಮತ್ತು ಯುಟಿಲಿಟಿ ಡಕ್ಟ್ ಜಾಲವನ್ನು ಏಕಕಾಲದಲ್ಲಿ ಅಳವಡಿಸಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ನಗರದಲ್ಲಿ ಮೊದಲ ಹಂತದಲ್ಲಿ ಒಟ್ಟು 196 ಕಿ.ಮೀ. ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಎರಡನೇ ಹಂತದಲ್ಲಿ 120 ಕಿ.ಮೀ. ರಸ್ತೆ ಕಾಮಗಾರಿಯ ಪೈಕಿ, 60 ಕಿ.ಮೀ ಪೂರ್ಣಗೊಂಡಿದ್ದು, ಬಾಕಿ 60 ಕಿ.ಮೀ. ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಮೂರನೇ ಹಂತದಲ್ಲಿ ₹ 3,000 ಕೋಟಿ ವೆಚ್ಚದಲ್ಲಿ 250 ಕಿ.ಮೀ. ಹೊಸದಾಗಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಡಿಸೆಂಬರ್ ಒಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಲವೊಂದು ತಾತ್ಕಾಲಿಕ ತೊಂದರೆಗಳು ಉಂಟಾಗಬಹುದು. ಆದರೆ, ಒಂದು ಬಾರಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣವಾದ ನಂತರ 25 ವರ್ಷಗಳಿಗೂ ಹೆಚ್ಚು ಬಾಳಿಕೆ ಬರುತ್ತದೆ. ಇದರಿಂದ ಸರ್ಕಾರದ ನಿರ್ವಹಣಾ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಹೆಚ್ಚಿನ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದ್ದು, ಕಾಮಗಾರಿಗಳಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಗರದ ಸಾರ್ವಜನಿಕ ಶೌಚಾಲಯಗಳ ಕುರಿತು ವಿವಿಧ ಸಾರ್ವಜನಿಕ ಸಂಘ-ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು, ಉತ್ತಮ ಸ್ಥಿತಿಯಲ್ಲಿರುವ, ದುರಸ್ತಿ ಅಗತ್ಯವಿರುವ ಹಾಗೂ ಅತ್ಯಂತ ಹದಗೆಟ್ಟ ಸ್ಥಿತಿಯಲ್ಲಿರುವ ಶೌಚಾಲಯಗಳ ಕುರಿತು ವರದಿ ಸಲ್ಲಿಸಿವೆ. ಈ ವರದಿಯ ಆಧಾರದ ಮೇಲೆ ಶೌಚಾಲಯಗಳ ಗುಣಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಕಡೆ ಹೊಸ ಶೌಚಾಲಯಗಳನ್ನು ನಿರ್ಮಿಸಲಾಗುವುದು ಹಾಗೂ ದುರಸ್ತಿ ಅಗತ್ಯವಿರುವ ಶೌಚಾಲಯಗಳನ್ನು ನವೀಕರಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಆಧುನಿಕ ವಿನ್ಯಾಸದ ಶೌಚಾಲಯಗಳನ್ನು ನಿರ್ಮಿಸಿ ನಗರದ ಇತರ ಭಾಗಗಳಲ್ಲಿಯೂ ಇದೇ ಮಾದರಿಯನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಪಾದಚಾರಿ ಮಾರ್ಗಗಳ ಮೇಲೆ ನಿರ್ಮಾಣವಾಗಿರುವ ಕೆಲವು ಸಾರ್ವಜನಿಕ ಶೌಚಾಲಯಗಳನ್ನು ತೆರವುಗೊಳಿಸಲಾಗುತ್ತಿದೆ. ಉಳಿದ ಕೆಲವು ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ತೆರವು ಕಾರ್ಯ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಶೌಚಾಲಯಗಳ ಅಗತ್ಯ ಇರುವುದರಿಂದ ಎಲ್ಲ ಶೌಚಾಲಯಗಳನ್ನು ಒಂದೇ ಬಾರಿಗೆ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

*ಶಾಸಕರಾದ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಗಾಂಧಿನಗರ ಹಾಗೂ ಮೆಜೆಸ್ಟಿಕ್ ಪ್ರದೇಶವು ನಗರದ ಅತ್ಯಂತ ಹಳೆಯ ಭಾಗವಾಗಿದ್ದು, ಹಲವು ವರ್ಷಗಳಿಂದ ಈ ಭಾಗದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ರೀತಿಯಲ್ಲಿ ಮೂಲಸೌಕರ್ಯಗಳನ್ನೊಳಗೊಂಡ ಆಧುನಿಕ ರಸ್ತೆಗಳನ್ನು ಇತರೆ ಪ್ರದೇಶಗಳಲ್ಲಿಯೂ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಗಾಂಧಿನಗರ ಪೇಟೆ ಪ್ರದೇಶದಲ್ಲಿ ರಸ್ತೆಗಳು ಕಿರಿದಾಗಿರುವುದರಿಂದ ಅಗ್ನಿಶಾಮಕ ವಾಹನಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಅಗ್ನಿ ಅವಘಡ ಸಂಭವಿಸಿದಾಗ ತಕ್ಷಣ ನೀರು ಪೂರೈಸಿ ಬೆಂಕಿ ನಂದಿಸಲು ಅನುಕೂಲವಾಗುವಂತೆ ಹೊಸದಾಗಿ ನಿರ್ಮಿಸಲಾಗುತ್ತಿರುವ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಫೈರ್ ಹೈಡ್ರೆಂಟ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಎರಡು ಪ್ರಮುಖ ವಾಣಿಜ್ಯ ಸಂಪರ್ಕ ರಸ್ತೆಗಳ ವಿವರ:

ಟ್ಯಾಂಕ್ ಬಂಡ್ ರಸ್ತೆ (ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್ ವರೆಗೆ):

ಟ್ಯಾಂಕ್ ಬಂಡ್ ರಸ್ತೆ (ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್ ವರೆಗೆ) ಯನ್ನು 8.74 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 418 ಮೀಟರ್ ಉದ್ದದ ಈ ಪ್ರಮುಖ ರಸ್ತೆಯಲ್ಲಿ 10.5 ಮೀಟರ್ ಅಗಲದ 180 ಎಂಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ. ಬೃಹತ್ 1000 ಎಂಎಂ ವ್ಯಾಸದ ಮೆಳೆ ನೀರು ಚರಂಡಿ, ಪಾದಚಾರಿ ಸ್ನೇಹಿ ಫುಟ್‌ಪಾತ್ ಮತ್ತು ಚೇಂಬರ್‌ಗಳ ಮೂಲಕ ಸಮಗ್ರ ಯುಟಿಲಿಟಿ ಡಕ್ಟ್ಗಳನ್ನು (Power & OFC) ಅಳವಡಿಸಿ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ.

ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ವಿನೂತನ “eeze” ಪ್ರಿಕಾಸ್ಟ್ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಮೆಟ್ರೋ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರ ಅತಿ ಹೆಚ್ಚಿನ ದಟ್ಟಣೆಯನ್ನು ಹೊಂದಿರುವ ಈ ಕೇಂದ್ರ ಭಾಗದಲ್ಲಿ, ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ವಿನೂತನ ಸಾರ್ವಜನಿಕ ಶೌಚಾಲಯ ಸಂಕೀರ್ಣ ‘eeze’ ಅನ್ನು ಸ್ಥಾಪಿಸಲಾಗಿದೆ. ಇದರ ತಳಪಾಯದಿಂದ ಹಿಡಿದು ಸಂಪೂರ್ಣ ಕಟ್ಟಡವನ್ನು ಸಂಪೂರ್ಣವಾಗಿ ಪ್ರಿಕಾಸ್ಟ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದ್ದು, ದುರ್ವಾಸನೆಯನ್ನು ತಡೆಗಟ್ಟಲು ಇದರಲ್ಲಿ ವಿಶಿಷ್ಟವಾದ Percolated ಪರಿಕಲ್ಪನೆಯನ್ನು ಅಳವಡಿಸಲಾಗಿದೆ. ಈ ಸುಸಜ್ಜಿತ ಶೌಚಾಲಯದಲ್ಲಿ ಪುರುಷರು, ಮಹಿಳೆಯರು, ಮಂಗಳಮುಖಿಯರು(Transgenders) ಮತ್ತು ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆಗಳಿದ್ದು, ಸುಗಮ ಪ್ರವೇಶಕ್ಕಾಗಿ ರ‍್ಯಾಂಪ್ (Ramp) ಸೌಲಭ್ಯವನ್ನೂ ಒದಗಿಸಲಾಗಿದೆ.

ಆರ್.ಟಿ. ರಸ್ತೆ (ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆವರೆಗೆ):

ಆರ್.ಟಿ. ರಸ್ತೆ (ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆವರೆಗೆ) ಯನ್ನು 2.52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ, ವಾಣಿಜ್ಯ ಕೇಂದ್ರವಾಗಿರುವ ಈ ಪ್ರದೇಶದಲ್ಲಿ 645 ಮೀಟರ್ ಉದ್ದದ ರಸ್ತೆಗೆ 3 ಮೀಟರ್ ಅಗಲದ 150 ಎಂಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ. ರಸ್ತೆಯ ಅಂದವನ್ನು ಹೆಚ್ಚಿಸಲು ಬೂದು ಮತ್ತು ಕೆಂಪು ಬಣ್ಣದ ಜಿಗ್-ಜಾಗ್ ಪೇವರ್‌ಗಳೊಂದಿಗೆ ಬಫರ್ ವಲಯವನ್ನು ನಿರ್ಮಿಸಲಾಗಿದೆ.

ಬೆಂಗಳೂರು ಪೇಟೆಯಲ್ಲಿ ಪ್ರಥಮ – ವಿನೂತನ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ:

ಆರ್.ಟಿ. ರಸ್ತೆಯ ಅತ್ಯಂತ ಪ್ರಮುಖ ಅಂಶವೆಂದರೆ, ಇಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ‘ಫೈರ್ ಹೈಡ್ರೆಂಟ್’ (Fire Hydrant) ಜಾಲ, ಐತಿಹಾಸಿಕ ‘ಬೆಂಗಳೂರು ಪೇಟೆ’ ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನಗಳ ಪ್ರವೇಶಕ್ಕೆ ತೀವ್ರ ಅಡಚಣೆಯಾಗಿ ಅಪಾರ ಹಾನಿ ಸಂಭವಿಸಿದ ಉದಾಹರಣೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಮತ್ತು ತಕ್ಷಣದ ತುರ್ತು ಸ್ಪಂದನೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಇಂತಹ ಜೀವ ರಕ್ಷಕ ಮೂಲಸೌಕರ್ಯವನ್ನು ಅಳವಡಿಸುತ್ತಿರುವುದು ಇದೇ ಮೊದಲು ಮತ್ತು ಇದೊಂದು ವಿನೂತನ ಪರಿಕಲ್ಪನೆಯಾಗಿದೆ.

ಈ ಎರಡೂ ರಸ್ತೆಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಪುರಾತನ ಶೈಲಿಯ (Antique finish) ಎಲ್‌ಇಡಿ ಬೀದಿ ದೀಪಗಳು ಮತ್ತು ಥರ್ಮೋಪ್ಲಾಸ್ಟಿಕ್ ರಸ್ತೆ ಗುರುತುಗಳನ್ನು (Road Marking) ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ಹಾಗೂ ಸುರಕ್ಷತೆಯನ್ನು ಒದಗಿಸಲಾಗಿದೆ.

ಈ ವಿಶೇಷ ಆಯುಕ್ತರಾದ ನಿತೀಶ್, ಆಯುಕ್ತರಾದ ಜಗದೀಶ್, ಅಪರ ಆಯುಕ್ತರಾದ ವೆಂಕಟಾ ಚಲಪತಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಮಾದೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page