ಬೆಂಗಳೂರು: ರಾಜ್ಯದ ವಿವಿಧ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ವ್ಯವಸ್ಥಿತವಾಗಿ ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಯ ಉನ್ನತ ಅಧಿಕಾರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ
ಈ ಸಂಬಂಧ ಸೋಮವಾರ ವಿವಿಧ ನೀರಾವರಿ ನಿಗಮದ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಅನಗತ್ಯವಾಗಿ ಬಳಕೆ ಮಾಡಿಕೊಳ್ಳದೆ ಕುಡಿಯುವ ನೀರು ಮತ್ತು ಜಾನುವಾರಗಳಿಗೆ ಪೂರೈಕೆ ಮಾಡುವ ಪ್ರಥಮ ಆದ್ಯತೆ ನೀಡಬೇಕೆಂದು ನಿರ್ದೇಶನ ನೀಡಿದರು.
ನೀಲಾವರಿ ಸಲಹಾ ಸಮಿತಿ (ICC) ಸಭೆ
ಕಾವೇರಿ, ವಿಶ್ವೇಶ್ವರಯ್ಯ, ಹಾಗೂ ಕರ್ನಾಟಕ ನೀರಾವರಿ ನಿಗಮಗಳ ವ್ಯಾಪ್ತಿಗೆ ಬರುವ ಎಲ್ಲಾ ಜಲಾಶಯಗಳ ನೀರಾವರಿ ಸಲಹಾ ಸಮಿತಿಗಳ (ICC) ಸಭೆಗಳನ್ನು ಈ ವಾರದಲ್ಲೇ ಕರೆಯಬೇಕು. ಸನ್ನಿವೇಶಕ್ಕೆ ತಕ್ಕಂತೆ ಅಗತ್ಯವಿರುವ ನಿರ್ಣಯಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಚಿವರು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಎಸ್‌ಎನ್‌ಎ (SNA) ಖಾತೆ ವಿವರ ಸಲ್ಲಿಕೆ:
‘Special Assistance to State for Capital Investment’ ಯೋಜನೆಯಡಿ ಜಲಸಂಪನ್ಮೂಲ ಇಲಾಖೆಗೆ ಮಂಜೂರಾಗಿರುವ ರೂ. 665.38 ಕೋಟಿ ಅನುದಾನವನ್ನು ಎಸ್‌ಎನ್‌ಎ ಖಾತೆಗಳ ಮೂಲಕ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ನಿಗಮಗಳು ಕೂಡಲೇ ಖಾತೆ ತೆರೆದು ವಿವರಗಳನ್ನು ಸಲ್ಲಿಸುವಂತೆ ಸಚಿವರು ತಾಕೀತು ಮಾಡಿದರು.
*ಕ್ರಿಯಾ ಯೋಜನೆ ಸಲ್ಲಿಕೆ: *
ಪ್ರಾದೇಶಿಕ ಅಸಮತೋಲನ ನಿವಾರಣಾ ಕಾರ್ಯಕ್ರಮದ (RIRP) ಅಡಿಯಲ್ಲಿ 2026-27ನೇ ಸಾಲಿಗೆ ಒದಗಿಸಲಾಗಿರುವ ರೂ. 1,100 ಕೋಟಿ ಅನುದಾನಕ್ಕೆ ಸಂಬಂಧಿಸಿದಂತೆ, ಪ್ರೊ. ಎಂ. ಗೋವಿಂದರಾವ್ ವರದಿಯ ಶಿಫಾರಸಿನಂತೆ ಕ್ರಿಯಾ ಯೋಜನೆಯನ್ನು ಅತಿ ಶೀಘ್ರವಾಗಿ ಸಲ್ಲಿಸದ ಉಳಿದ ನಿಗಮಗಳು ಕೂಡಲೇ ಪ್ರಸ್ತಾವನೆಗಳನ್ನು ಒಪ್ಪಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಲಾಶಯಗಳ ಸ್ಥಿತಿಗತಿ
ಕೃಷ್ಣಾ ಜಲಾನಯನ ಪ್ರದೇಶ:
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಈಗಾಗಲೇ ಶೇಕಡ 90ರಷ್ಟು ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ 1.25 ಲಕ್ಷ ಕ್ಯೂಸೆಕ್ಸ್ ಒಳಹರಿವಿದ್ದು, ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ನದಿ ಪಾತ್ರಕ್ಕೆ ಈಗಾಗಲೇ ಹೆಚ್ಚುವರಿ 1.25 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.
ಕಾವೇರಿ ಜಲಾನಯನ ಪ್ರದೇಶ:
ಕಾವೇರಿ ಜಲಾಶಯಗಳಲ್ಲಿ ಒಳಹರಿವು ಗಣನೀಯವಾಗಿ ಏರಿಕೆಯಾಗಿದ್ದು, ಹಾರಂಗಿ ಶೇಕಡ 92.08, ಹೇಮಾವತಿ ಶೇಕಡ 75.52, ಕೆ.ಆರ್.ಎಸ್. ಶೇಕಡ 46.67 ಹಾಗೂ ಕಬಿನಿ ಶೇಕಡ 95.36ರಷ್ಟು ಭರ್ತಿಯಾಗಿವೆ.
ಇತರ ಜಲಾಶಯಗಳು
ವಾಣಿವಿಲಾಸ ಸಾಗರದಲ್ಲಿ ಶೇಕಡ 76.85ರಷ್ಟು ನೀರಿದೆ. ಭದ್ರಾ, ತುಂಗಭದ್ರಾ, ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ಕ್ರಮವಾಗಿ ಶೇಕಡ 64.65, 41.77, 75.34 ಮತ್ತು 45.26ರಷ್ಟು ನೀರಿನ ಸಂಗ್ರಹವಿದೆ.
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಿದ್ದರು. ಈ ವೇಳೆ ಅಧಿಕಾರಿಗಳು ಪ್ರಸ್ತುತ ಮಳೆ ಹಾಗೂ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ವಿವರಗಳು ಸೇರಿದಂತೆ ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.
