ಬೆಂಗಳೂರು:ಭಾಷೆಯ ಹಂಗಿಲ್ಲದೆ ಭಾವನೆಗಳನ್ನು ಜಗತ್ತಿಗೆ ತಲುಪಿಸುವ ಶಕ್ತಿ ಛಾಯಾಚಿತ್ರಕ್ಕಿದೆ. ಒಂದು ಅತ್ಯುತ್ತಮ ಛಾಯಾಚಿತ್ರದ ಹಿಂದೆ ಛಾಯಾಗ್ರಾಹಕನ ತಾಳ್ಮೆ, ತಪಸ್ಸಿನಂತಹ ನಿರಂತರ ಶ್ರಮ ಹಾಗೂ ಸಮಯ ಪ್ರಜ್ಞೆ ಅಡಗಿರುತ್ತದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ ಅವರು ಅಭಿಪ್ರಾಯಪಟ್ಟರು.
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಛಾಯಾಚಿತ್ರ ಪ್ರದರ್ಶನ, ಸ್ಪರ್ಧೆ ಹಾಗೂ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ “ಮೊದಲನೆಯದಾಗಿ ಕ್ಯಾಮೆರಾ ಕಂಡುಹಿಡಿದವರಿಗೆ ನನ್ನ ಅಭಿನಂದನೆಗಳು. ಈ ಅರ್ಥಪೂರ್ಣ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಛಾಯಾಗ್ರಾಹಕರು ಅಭಿನಂದನಾರ್ಹರು,” ಎಂದು ಶುಭ ಹಾರೈಸಿದರು.
ತಮ್ಮ ಜೀವವನ್ನೇ ಪಣಕ್ಕಿಟ್ಟು, ಸನ್ನಿವೇಶದ ಪ್ರತಿಯೊಂದು ಭಾವನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಇತಿಹಾಸವನ್ನು ಶಾಶ್ವತವಾಗಿ ದಾಖಲಿಸುವಲ್ಲಿ ಛಾಯಾಗ್ರಾಹಕರ ಪರಿಶ್ರಮ ಅತ್ಯಂತ ಅನನ್ಯವಾದದ್ದು, ಇಂದು ಛಾಯಾಗ್ರಾಹಕರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯವೆಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ಕ್ಯಾಮೆರಾ ಹುಟ್ಟು, ಬೆಳವಣಿಗೆಗೆ ಸಂಬಂಧಿಸಿದಂತೆ ನೂರು ವರ್ಷದ ಹಳೆಯ ಕ್ಯಾಮೆರಾ ಪ್ರದರ್ಶನ ಮಾಡಿರುವುದು ಉತ್ತಮ ಕೆಲಸವಾಗಿದೆ. ಮುಂದೆ ಇಂತಹ ಕಾರ್ಯಕ್ರಮಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಮಾಡಲು ಮುಂದಾಗಬೇಕು ಎಂದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅವರು ಮಾತನಾಡಿ, ಸಾವಿರ ಪದಗಳಲ್ಲಿ ಹೇಳಲಾಗದ ಸುದ್ದಿಯನ್ನು ಒಂದೇ ಒಂದು ಛಾಯಾಚಿತ್ರ ಅತ್ಯದ್ಭುತವಾಗಿ ಕಟ್ಟಿಕೊಡುತ್ತದೆ. ಇತಿಹಾಸ ದಾಖಲಿಸುವಲ್ಲಿ ಛಾಯಾಗ್ರಾಹಕರ ಪಾತ್ರ ಅಪಾರ. ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ದೊಡ್ಡ ಸವಾಲಾಗಿದ್ದು, ಕಾಲಕ್ಕೆ ತಕ್ಕಂತೆ ಛಾಯಾಗ್ರಾಹಕರು ತಾಂತ್ರಿಕವಾಗಿ ಅಪ್ಡೇಟ್ ಆಗುವುದು ಅಗತ್ಯ, ಇಂತಹ ಕಾರ್ಯಾಗಾರಗಳು ಅವರಿಗೆ ಹೆಚ್ಚಿನ ಶಕ್ತಿ ತುಂಬುತ್ತವೆ ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಅವರು ಮಾತನಾಡಿ, “ಜಗತ್ತಿಗೆ ‘ಸ್ಮೈಲ್’ ಎಂದು ಹೇಳುವ ಏಕೈಕ ವೃತ್ತಿ ಎಂದರೆ ಅದು ಛಾಯಾಗ್ರಹಣ. ಛಾಯಾಚಿತ್ರ ಪತ್ರಿಕೋದ್ಯಮವು ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದು, ಭಾಷೆಗಳ ಗಡಿಯನ್ನು ಮೀರಿ ಬೆಳೆದಿದೆ. ದೇಶಾದ್ಯಂತ 220 ಛಾಯಾಚಿತ್ರಗಳು ಈ ಪ್ರದರ್ಶನದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಅಕಾಡೆಮಿ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೃಹತ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಧೈರ್ಯ ಮತ್ತು ಜಾಣತನದ ಜೊತೆಗೆ ಕಣ್ಣು ಹಾಗೂ ಹೃದಯದ ನಡುವೆ ಕ್ಯಾಮೆರಾ ಇಟ್ಟು ಚಿತ್ರ ತೆಗೆದಾಗ ಮಾತ್ರ ಅತ್ಯುತ್ತಮ ಫೋಟೋಗಳು ಹೊರಹೊಮ್ಮಲು ಸಾಧ್ಯ,” ಎಂದರು.
**ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಡಾ. ಬಿ.ಆರ್. ಮಮತಾ** ಅವರು ಮಾತನಾಡಿ, “ಪ್ರತಿ ಛಾಯಾಚಿತ್ರವೂ ಸಹನೆ ಮತ್ತು ತಪಸ್ಸಿನ ಪ್ರತಿಫಲ. ಬರವಣಿಗೆಯನ್ನು ಮೀರಿದ ಛಾಯಾಚಿತ್ರವು ಜಾಗತಿಕವಾಗಿ ಎಲ್ಲರಿಗೂ ಅರ್ಥವಾಗುವ ಭಾಷೆಯಾಗಿದೆ,” ಎಂದು ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಕಾರ್ಯದರ್ಶಿ ಪ್ರಭಾಕರ್ ಅವರು ಮಾತನಾಡಿ, “ಫೆÇೀಟೋ ತೆಗೆದವರು ಮತ್ತು ತೆಗೆಸಿಕೊಂಡವರು ಇಲ್ಲವಾಗಬಹುದು, ಆದರೆ ಫೆÇೀಟೋ ಮತ್ತು ಅದು ದಾಖಲಿಸಿದ ಇತಿಹಾಸ ಎಂದಿಗೂ ಅಳಿಯುವುದಿಲ್ಲ. ಮಾಧ್ಯಮಗಳಲ್ಲಿ ವರದಿಗಾರರಿಗೆ ಸಿಗುವμÉ್ಟೀ ಮಾನ್ಯತೆ ಛಾಯಾಗ್ರಾಹಕರಿಗೂ ಸಿಗಬೇಕು ಎಂಬುದನ್ನು ಅರಿತು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಛಾಯಾಗ್ರಾಹಕರೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು,” ಎಂದು ಸ್ಮರಿಸಿದರು.
ಪ್ರಶಸ್ತಿ ವಿಜೇತರು:
ಪ್ರಥಮ ಬಹುಮಾನ: ಬಿನುರಾಜ್, ಕೇರಳ
ದ್ವೀತಿಯ ಬಹುಮಾನ: ಕುನಾಲ್ ಪಾಟೀಲ್, ಮಹಾರಾಷ್ಟ್ರ (ಮುಂಬೈ)
ತೃತೀಯ ಬಹುಮಾನ: ವೀರಗೋಣಿ ರಜಿನಿಕಾಂತ್, ತೆಲಂಗಾಣ
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಸದಸ್ಯರಾದ ಡಾ. ಮಮತಾ, ಅಬ್ಬಾಸ್ ಅಲ್ಲಾ, ಕಂದಾವರ ವೆಂಕಟೇಶ್ ಹಾಗೂ ಕಿರಣ್ ಅವರು ಉಪಸ್ಥಿತರಿದ್ದರು.
ಅಕಾಡೆಮಿಯ ಕಾರ್ಯದರ್ಶಿ ಎಲ್.ಪಿ. ಗಿರೀಶ್ ಅವರು ಸ್ವಾಗತಿಸಿದರೆ, ಹಿರಿಯ ಪತ್ರಕರ್ತ ನಂಜುಂಡಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಉಪ ನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ವಂದಿಸಿದರು.
