ಬೆಂಗಳೂರು: ಅತ್ಯಾಧುನಿಕ ಧ್ವನಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಜಾಗತಿಕ ಕೃತಕ ಬುದ್ಧಿಮತ್ತೆ ಸಂಸ್ಥೆ ಇಲೆವನ್ ಲ್ಯಾಬ್ಸ್ (ElevenLabs) ತಂಡದೊಂದಿಗೆ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇಂದು ಸಭೆ ನಡೆಸಿದರು.
ಸಭೆಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ಧ್ವನಿ ರೂಪಾಂತರ ತಂತ್ರಜ್ಞಾನ, ಬಹುಭಾಷಾ ಧ್ವನಿ ಸೇವೆಗಳು ಹಾಗೂ ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಮೂಲಕ ರಾಜ್ಯದಲ್ಲಿ ನಾಗರಿಕ ಸೇವೆಗಳ ವಿತರಣೆಯನ್ನು ಇನ್ನಷ್ಟು ಸುಲಭ, ವೇಗದ ಹಾಗೂ ಪರಿಣಾಮಕಾರಿಯಾಗಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಸರ್ಕಾರದ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುವುದು, ಸರ್ಕಾರದೊಂದಿಗೆ ನಾಗರಿಕರ ಸಂವಹನವನ್ನು ಮತ್ತಷ್ಟು ಸರಳಗೊಳಿಸುವುದು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿರುವ ವಿಳಂಬ ಮತ್ತು ತಾಂತ್ರಿಕ ಅಡೆತಡೆಗಳನ್ನು ನಿವಾರಿಸುವಲ್ಲಿ ಈ ತಂತ್ರಜ್ಞಾನಗಳ ಬಳಕೆಯ ಸಾಧ್ಯತೆಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಪ್ರಿಯಾಂಕ್ ಖರ್ಗೆ, “ಕರ್ನಾಟಕ ಸರ್ಕಾರ ನಾಗರಿಕ ಕೇಂದ್ರಿತ, ತಂತ್ರಜ್ಞಾನ ಆಧಾರಿತ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ನಿರ್ಮಿಸಲು ಬದ್ಧವಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ತಂತ್ರಜ್ಞಾನಗಳು ಸರ್ಕಾರಿ ಸೇವೆಗಳನ್ನು ಜನಸ್ನೇಹಿಯಾಗಿಸುವುದರ ಜೊತೆಗೆ, ವಿವಿಧ ಭಾಷೆಗಳನ್ನು ಮಾತನಾಡುವ ನಾಗರಿಕರಿಗೂ ಸೇವೆಗಳನ್ನು ಸುಲಭವಾಗಿ ತಲುಪಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ನಿಟ್ಟಿನಲ್ಲಿ ಇಂತಹ ನವೋದ್ಯಮಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಅವಕಾಶಗಳನ್ನು ನಾವು ಪರಿಶೀಲಿಸುತ್ತಿದ್ದೇವೆ,” ಎಂದು ಹೇಳಿದರು.
“ಇಲೆವನ್ ಲ್ಯಾಬ್ಸ್‌ನಂತಹ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ನಿರಂತರ ಸಹಯೋಗದ ಮೂಲಕ ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಿ, ತಂತ್ರಜ್ಞಾನವನ್ನು ಜನೋಪಯೋಗಿ ಸಾಧನವನ್ನಾಗಿ ರೂಪಿಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ. ಕರ್ನಾಟಕದ ಜನರಿಗೆ ಅರ್ಥಪೂರ್ಣ, ಸುಲಭ ಮತ್ತು ಪರಿಣಾಮಕಾರಿ ಸೇವೆಗಳನ್ನು ತಲುಪಿಸಲು ಇಂತಹ ಸಹಭಾಗಿತ್ವಗಳು ಮಹತ್ವದ ಪಾತ್ರ ವಹಿಸಲಿವೆ,” ಎಂದು ಸಚಿವರು ತಿಳಿಸಿದರು.
