ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ “ರಾಷ್ಟ್ರೀಯ ಲಸಿಕೆ” ದಿನದ ಅಂಗವಾಗಿ ಇದೇ ಡಿಸೆಂಬರ್ 21 ರಿಂದ 24 ರವರೆಗೆ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೋ ವಿಶೇಷ ಅಭಿಯಾನದಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆ ನೀಡುವ ಮೂಲಕ ಭಾರತವನ್ನು ಪೋಲಿಯೋ ಮುಕ್ತವಾಗಿಸಲು ಎಲ್ಲರೂ ಸಹಕರಿಸಬೇಕು ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ “ರಾಷ್ಟ್ರೀಯ ಲಸಿಕಾ” ದಿನದ ಅಂಗವಾಗಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು ಆರೋಗ್ಯ ವಿಭಾಗದಿಂದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ನಾಗರೀಕರು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೊಲಿಯೋ ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ವಿಶ್ವವನ್ನಾಗಿಸಲು ಸಹಕರಿಸಲು ವಿನಂತಿಸಿದ್ದಾರೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಟೋ ಟಿಪ್ಪರ್ ಗಳ ಮೂಲಕ ಮೈಕ್ ಅನೌನ್ಸ್ ಮೆಂಟ್, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಂದ ಜಾಥಾ ಕಾರ್ಯಕ್ರಮದ ಮೂಲಕ ಪ್ರಚಾರ, ಭಿತ್ತಿಪತ್ರ, ಬ್ಯಾನರ್ ಗಳನ್ನು ಅಳವಡಿಸುವ ಮೂಲಕ ಪ್ರಚಾರದ ಕಾರ್ಯ ನಿರ್ವಹಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯು ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರ ನೇತೃತ್ವದಲ್ಲಿ ನಡೆದಿದ್ದು, ಅಂದಾಜು 1.81 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 557 ಬೂತ್ ಗಳಲ್ಲಿ, 218 ಬಸ್ ನಿಲ್ದಾಣ/ರೈಲ್ವೆ ನಿಲ್ದಾಣ ಇತರೆ ಸಂಚಾರ ಸ್ಥಳಗಳಲ್ಲಿ, 75 ಸಂಚಾರಿ ತಂಡವು 137 ಮೇಲ್ವಿಚಾರಕರು ಹಾಗೂ ಸುಮಾರು 2,814 ಜನ ಆರೋಗ್ಯ ಸಿಬ್ಬಂದಿಗಳು, ಸ್ವಯಂ ಸೇವಕರು ಲಸಿಕೆ ಹಾಕುವ ಈ ಕಾರ್ಯದಲ್ಲಿ ತೊಡಗಲಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆರೋಗ್ಯಾಧಿಕಾರಿ ನೇತೃತ್ವದ ತಂಡವು, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ವೈದ್ಯಕೀಯ/ನರ್ಸಿಂಗ್ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ರೋಟರಿ/ ಲಯನ್ಸ್ ಕ್ಲಬ್ ಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇತರೆ ಸಂಘ-ಸಂಸ್ಥೆಗಳು ಈ ಕಾರ್ಯದಲ್ಲಿ ಭಾಗವಹಿಸಲಿವೆ ಎಂದು ಆಯುಕ್ತರು ತಿಳಿಸಿದ್ದಾರೆ.
