ಸಮಗ್ರ ಸುದ್ದಿ

ಉದ್ಯೋಗ ಖಾತ್ರಿ: ಜಾಬ್ ಕಾರ್ಡ್ ಮೇಳಕ್ಕೆ ಈಶ್ವರ ಖಂಡ್ರೆ ಸೂಚನೆ

Share

ಬೆಂಗಳೂರು: ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿಯಡಿ ಅರ್ಹ ಫಲಾನುಭವಿಗಳಿಗ ಉದ್ಯೋಗ ನೀಡಲು ಒಂದು ವಾರದೊಳಗೆ ಜಾಬ್ ಕಾರ್ಡ್ ಮೇಳ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ನಿಷ್ಕ್ರಿಯ ಉದ್ಯೋಗದ ಚೀಟಿ (ಜಾಬ್ ಕಾರ್ಡ್) ಗಳನ್ನು ರದ್ದು ಮಾಡಲಾಗಿದೆ. ಆದರೆ ಬಡ ಗ್ರಾಮೀಣ ಕುಟುಂಬಗಳಿಗೆ ಅನ್ಯಾಯವಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದ್ದಾರೆ.

ಹೊಸದಾಗಿ ಉದ್ಯೋಗ ಬಯಸುವ ಅರ್ಹ ಗ್ರಾಮೀಣ ಕುಟುಂಬಗಳ ಫಲಾನುಭವಿಗಳಿಗೆ ಅಂದರೆ ಪರಿಶಿಷ್ಟ ಜಾತಿ, ಪಂಗಡದವರು, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ನೇತೃತ್ವದ ಕುಟುಂಬದವರು, ಭೂ ರಹಿತ ಕೂಲಿ ಕಾರ್ಮಿಕರು ಸೇರಿದಂತೆ ಉದ್ಯೋಗ ಕೇಳುವ ಎಲ್ಲ ಅರ್ಹರಿಗೆ ತತ್ ಕ್ಷಣವೇ ಜಾಬ್ ಕಾರ್ಡ್ ನೀಡಲು 5927 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ವಾರದೊಳಗಾಗಿ ಜಾಬ್ ಕಾರ್ಡ್ ಮೇಳ ನಡೆಸಿ, ಉದ್ಯೋಗ ನೀಡಿ ಎಂದು ನಿರ್ದೇಶನ ನೀಡಿದ್ದಾರೆ.

ವಿ ಬಿಜಿ ರಾಮ್ ಜಿ ಅಡಿ ಕೇಂದ್ರದ ಶೇ.60ರಷ್ಟು ಅನುದಾನ 1700 ಕೋಟಿ ರೂ. ಹಾಗೂ ರಾಜ್ಯದ ಶೇ.40ರಷ್ಟು ಅನುದಾನ 1200 ಕೋಟಿ ರೂ. ಸೇರಿ ಒಟ್ಟು 2900 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಈ ಪೈಕಿ ಕೂಲಿ ನೀಡಿಕೆಗಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ 1000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.

ಹಣದ ಕೊರತೆ ಇಲ್ಲದಿದ್ದಾಗ್ಯೂ ಕೆಲವು ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿ ರಾಮ್ ಜಿ ಅನುಷ್ಠಾನ ತೃಪ್ತಿದಾಯಕವಾಗಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿರುವ ಈಶ್ವರ ಖಂಡ್ರೆ, ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿ ಒದಗಿಸುವಂತೆ ಸೂಚಿಸಿದ್ದಾರೆ.


Share

You cannot copy content of this page