ಸಮಗ್ರ ಸುದ್ದಿ

ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಸುವರ್ಣಾವಕಾಶಮುಖ್ಯಮಂತ್ರಿಗಳ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆಯಡಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Share

ಬೆಂಗಳೂರು:ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ಅಭ್ಯರ್ಥಿಗಳಿಗೆ  “ಮುಖ್ಯಮಂತ್ರಿಗಳ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ” ಅಡಿಯಲ್ಲಿ ಕೆಪಿಎಸ್‍ಸಿ, ಕೆಇಎ ಹಾಗೂ ಇತರ ವಿವಿಧ ಆಯ್ಕೆ ಪ್ರಾಧಿಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‍ಲೈನ್ ತರಬೇತಿಯನ್ನು ಆಯೋಜಿಸಲಾಗಿದೆ.

ಸರ್ಕಾರದ 100 ದಿನಗಳ ಯೋಜನೆಯ ಭಾಗವಾಗಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಖ್ಯಾತ “ಇಂಡಿಯಾ ಫಾರ್ ಐಎಎಸ್” (India for IAS Coaching Centre, Bangalore) ಸಂಸ್ಥೆಯ ಮೂಲಕ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುತ್ತದೆ.

ಈ ಯೋಜನೆಯಡಿ ಗೆಜೆಟೆಡ್ ಪ್ರೊಬೇಷನರ್ಸ್ (Gazetted Probationers) ಸಹಾಯಕ ಪ್ರಾಧ್ಯಾಪಕರು (Assistant Professors) ಎಫ್‍ಡಿಎ (FDA), ಎಸ್‍ಡಿಎ (SDA), ಪಿಡಿಒ (PDO) ಪಿಎಸ್‍ಐ (PSI), ಪೊಲೀಸ್ ಕಾನ್ಸ್‍ಟೇಬಲ್ (PC) ವಿಎಒ (VAO), ಗ್ರೂಪ್-ಸಿ (Group C) ಮತ್ತು ಇತರ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ಲಭ್ಯವಿರಲಿದೆ.

ಆಸಕ್ತ ಅಭ್ಯರ್ಥಿಗಳು ತಮಗೆ ಇಷ್ಟವಾದ ಯಾವುದೇ 3 ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಂಡು ಉಚಿತ ತರಬೇತಿಯನ್ನು ಪಡೆದುಕೊಳ್ಳಬಹುದು.

ಈ ಮೊದಲು ಲಭ್ಯವಿದ್ದ ಸೇವಾ ಸಿಂಧು ಪೋರ್ಟಲ್ ಅನ್ನು ಇದೀಗ ಸೇವಾ ಒನ್ ಪೋರ್ಟಲ್‍ಗೆ ಬದಲಾಯಿಸಲಾಗಿದೆ.

ಆಸಕ್ತರು ಆನ್‍ಲೈನ್ ವೆಬ್‍ಸೈಟ್ :https://sevaone.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೇ ಸಂಶಯ ಅಥವಾ ತಾಂತ್ರಿಕ ತೊಂದರೆಗಳಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ: 080-24410574 ಗೆ ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ (ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ) ಸಂಪರ್ಕಿಸಬಹುದು.  

ರಾಜ್ಯದ ಅರ್ಹ ಮತ್ತು ಆಸಕ್ತ ಯುವಜನರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಎಂ. ದಯಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page