ತುಮಕೂರು: ರಾಜ್ಯದ ಯಾವುದೇ ಭಾಗಗಳಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ, ಭೀಕರ ಬರ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ರೈತರು ಮತ್ತು ಸಾರ್ವಜನಿಕರ ನೆರವಿಗೆ ಸರ್ಕಾರ ನಿಲ್ಲಲಿದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ತಿಳಿಸಿದರು.
ಇಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೇಲುಕುಂಟೆ ಗ್ರಾಮದ ಶೇಂಗಾ ಬಿತ್ತನೆಯ ಜಮೀನಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಎಲ್ಲಿಯೂ ಸಮರ್ಪಕವಾಗಿ ಮಳೆಯಾಗದ ಕಾರಣ ಬೆಳೆಗಳು ರೈತರ ಕೈತಪ್ಪಿ ಹೋಗಿವೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಒಂದಿಷ್ಟು ಮಳೆಯಾಗಿರುವುದು ಬಿಟ್ಟರೆ ಬೇರೆ ಎಲ್ಲೂ ಮಳೆಯ ಸೂಚನೆಗಳೇ ಇಲ್ಲ. ಇಡೀ ರಾಜ್ಯದಲ್ಲಿ ಭೀಕರ ಬರ ತಲೆದೋರಿದೆ ಎಂದರು.
ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿ ಬರದ ಛಾಯೆ ಇದೆ. ರೈತರು ಕಂಗಾಲಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ನಿಲ್ಲಬೇಕು. ಆ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ ₹5 ಕೋಟಿ ಕೊಟ್ಟಿದ್ದೇವೆ. ಪ್ರತಿ ಕ್ಷೇತ್ರಕ್ಕೆ ₹1 ಕೋಟಿ ಕೊಟ್ಟಿದ್ದೇವೆ. ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಅವರಿಗೆ ಪರಿಹಾರ ಕೊಡಬೇಕು, ಅವರ ಸಹಾಯಕ್ಕೆ ನೆರವು ನೀಡುವಂತೆ ಈಗಾಗಲೇ ನಾನು ಮತ್ತು ಮುಖ್ಯಮಮತ್ರಿಗಳು ಸಂಪುಟದಲ್ಲಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಪರಿವೀಕ್ಷಣೆಗಾಗಿ ಮುಖ್ಯಮಂತ್ರಿಗಳು ಸಚಿವರುಗಳಿಗೆ ಜವಾಬ್ದಾರಿ ನೀಡಿದ್ದಾರೆ. ತುಮಕೂರಿನಲ್ಲಿ ನಾನು ಇಂದು ಮತ್ತು ನಾಳೆ ಪರಿಶೀಲನೆ ಮಾಡಿ, ಅಧಿಕಾರಿಗಳ ಜೊತೆಗೆ ವರದಿಯನ್ನು ಸಿದ್ಧಪಡಿಸುತ್ತೇವೆ. ಕರ್ನಾಟಕದ ನೆರವಿಗೆ ಧಾವಿಸುವಂತೆ ಕೋರಿ ಈಗಾಗಲೇ ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಆದರೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ. 240 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದು, ಈ ಬಗ್ಗೆ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.
ಮುಂದುವರೆದು, ಬರ ಘೋಷಣೆ ಮಾಡಬೇಕಾದರೆ ಕೇಂದ್ರದ ಕೆಲವು ನಿಯಮಗಳಿವೆ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವರದಿ ಬಂದ ಕೂಡಲೇ ನಮಗೊಂದು ಚಿತ್ರಣ ಸಿಗುತ್ತದೆ. ಆ ಬಳಿಕ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇಂದು ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲೂಕಿಗೆ ಭೇಟಿ ನೀಡಿ, ನಾಳೆ ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕಿಗೆ ಭೇಟಿ ನೀಡುತ್ತೇನೆ. ಬಳಿಕ ಅಧ್ಯಯನ ಮಾಡಿ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ತುಮಕೂರಿನಲ್ಲಿ 11 ತಾಲ್ಲೂಕುಗಳಿಗೆ ಬರ ಪರಿಹಾರದ ಮೊತ್ತ ಹೇಗೆ ವಿಭಜಿಸಲಾಗುತ್ತದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ₹5 ಕೋಟಿ ಪ್ರತಿ ಜಿಲ್ಲೆಗಳಿಗಷ್ಟೆ, ಅದನ್ನು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ನೀಡಿದ್ದೇವೆ. ತಾಲ್ಲೂಕುವಾರು ಶಾಸಕರಿಗೆ ತಲಾ ₹1 ಕೋಟಿ ಕೊಟ್ಟಿದ್ದೇವೆ. ಸಾಕಾಗಿಲ್ಲ ಎಂದಾದರೆ, ಡಿಸಿ ಮತ್ತು ಪಿಡಿಒ ಖಾತೆಗಳಲ್ಲಿ ₹329 ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ. ಅದನ್ನು ತುರ್ತು ಸಮಯದಲ್ಲಿ ಖರ್ಚು ಮಾಡುವಂತೆ ಈಗಾಗಲೇ ತಿಳಿಸಿದ್ದೇವೆ ಎಂದರು.
ರೈತರು ಇಂದು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಫಸಲ್ ಭೀಮಾ ಯೋಜನೆಯಡಿ ರೈತರು ತಮ್ಮ ವಿಮೆ ಹಣ ಇನ್ನೂ ಬಂದಿಲ್ಲ ಎಂದು ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಮಾ ಕಂಪನಿಯವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ. ರೈತರಿಗೆ ಕಷ್ಟ ಆದಾಗ ವಿಮೆ ಹಣವನ್ನು ನೀಡಬೇಕಿರುವುದು ಅವರ ಕರ್ತವ್ಯ. ಈ ಮೊದಲೇ ನಾನು ಸಭೆ ನಡೆಸಿ ವಿಮಾ ಕಂಪನಿಯವರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದೇನೆ ಎಂದು ಹೇಳಿದರು.
ಕಂತಿನ ಹಣವನ್ನು ಸರ್ಕಾರವೇ ಭರಿಸಬೇಕು ಎಂಬ ಮಾಧ್ಯಮದವರ ಮಾತಿಗೆ ಪ್ರತಿಕ್ರಿಯಿಸಿ, ರೈತರಿಗೆ ನಾವು ನೆರವು ನೀಡುವುದು,ಕಂತು ಕಟ್ಟುವುದು, ತೀರ್ಮಾನ ಮಾಡುವುದು ಒಂದು ಭಾಗ. ಆದರೆ ಕಂಪೆನಿಯವರು ಹಣ ಕೊಡಬೇಕಲ್ಲವೇ. ಕಳೆದ ವರ್ಷ 7 ಸಾವಿರ ಜನ ಕಂತು ಕಟ್ಟಿದ್ದಾರೆ. ಆದರೆ ಇನ್ಶೂರೆನ್ಸ್ ಕಂಪೆನಿಯವರು ಹಣವನ್ನು ಕೊಟ್ಟಿಲ್ಲ. ಹೀಗಾದರೆ ರೈತರಿಗೆ ಇನ್ಶೂರೆನ್ಸ್ ಮೇಲೆ ಹೇಗೆ ನಂಬಿಕೆ ಬರುತ್ತದೆ ಎಂದು ಪ್ರಶ್ನಿಸಿದರು.
ಇಡೀ ರಾಜ್ಯದಲ್ಲಿ 19 ಲಕ್ಷ ಬಾಂಗ್ಲಾವಾಸಿಗಳು ಇದ್ದಾರೆ, ಬೆಂಗಳೂರು ನಗರದಲ್ಲಿಯೇ 4.5 ಲಕ್ಷ ಇದ್ದಾರೆ ಎಂಬ ಮಾಧ್ಯಮದವರ ಮಾತಿಗೆ ಯಾವ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೀರಿ ಎಂದು ಪ್ರತಿಪ್ರಶ್ನೆಯಿಟ್ಟರು. ಮುಂದುವರೆದು, ಈ ಬಗ್ಗೆ ಸದನದಲ್ಲಿ ಹಲವು ಬಾರಿ ಉತ್ತರ ಕೊಟ್ಟಿದ್ದೇನೆ. ಆದರೆ ಯಾವ ಆಧಾರದ ಮೇಲೆ 19 ಲಕ್ಷ ಜನ ಬಾಂಗ್ಲಾವಾಸಿಗಳು ಇದ್ದಾರೆ ಎಂದು ಹೇಳಿದ್ದಾರೆ. ಇದು ಕೇವಲ ರಾಜಕೀಯ ಆರೋಪವಷ್ಟೆ ಎಂದು ಪ್ರತಿಕ್ರಿಯಿಸಿದರು.
ಚುನಾವಣೆ ಆಯೋಗದವರು ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅವರ ಡೇಟಾದಲ್ಲಿ 19 ಲಕ್ಷ ಬಾಂಗ್ಲಾವಾಸಿಗಳು ಇದ್ದಾರೆ ಎಂದಾದರೆ ಅದರ ಬಗ್ಗೆ ಕ್ರಮ ತೆಗೆದುಕೊಳ್ಳೋಣ. ಬಾಯಿಗೆ ಬಂದ ಹಾಗೆ ಡೇಟಾವನ್ನು ಹೇಳುವುದಲ್ಲ ಎಂದು ಕಿಡಿಕಾರಿದರು.
ಕೇಂದ್ರದ ವಿರುದ್ಧ ದೆಹಲಿಯಲ್ಲಿ ಮತ್ತೆ ಹೋರಾಟ ಮಾಡುವ ಸಾಧ್ಯತೆಗಳಿವೆಯಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಪರಿಸ್ಥಿತಿ ಬರಲ್ಲ ಎಂದು ಅಂದುಕೊಂಡಿದ್ದೇನೆ. ಪರಿಸ್ಥಿತಿ ಎದುರಾದರೆ ಮಾಡಲೇಬೇಕಲ್ಲವೇ. ನಮ್ಮ ರೈತರ ರಕ್ಷಣೆಗಾಗಿ ಹಣ ಕೊಡಿ ಎಂದು ಕೇಳುತ್ತೇವೆ. ಅದಕ್ಕೆ ಬೇಕಾಗಿರುವ ವರದಿ ಎಲ್ಲಾ ನೀಡುತ್ತೇವೆ. 16 ಸಾವಿರ ಹೆಕ್ಟೇರ್ ಕಡ್ಲೆಗಿಡ ಹಾಕಬೇಕಾಗಿತ್ತು, ಬರೀ 3 ಸಾವಿರ ಹೆಕ್ಟರ್ ಹಾಕಿದ್ದಾರೆ, ಅದು ಒಣಗಿಹೋಗಿದೆ. 3 ಸಾವಿರದಲ್ಲಿ 1 ಹೆಕ್ಟೇರ್ ಕೂಡ ಬರುವುದಿಲ್ಲ. ಈ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಕೊಟ್ಟಾಗ ಹಣ ಕೊಟ್ಟಿಲ್ಲ ಎಂದರೆ ನಾವು ಏನು ಮಾಡಬೇಕು. ನಾವು ಪ್ರತಿಭಟನೆಯೂ ಮಾಡಬೇಕು, ಕೋರ್ಟ್‌ಗೂ ಹೋಗಬೇಕಾಗುತ್ತದೆ ಎಂದರು.
