ಬೆಂಗಳೂರು: ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ಪೌರ ಕಾರ್ಮಿಕರು. ಇವರು ನಿಜವಾದ ಕರ್ಮಯೋಗಿ, ಕಾಯಕಜೀವಿಗಳು, ಸ್ವಚ್ಛತೆ ಕ್ರಾಂತಿಯ ಸರದಾರರು. ಪೌರಕಾರ್ಮಿಕರ ಭತ್ಯೆ ಏರಿಕೆ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಕೆ ಮಾಡಿ ಸಧ್ಯದಲ್ಲೇ ಆದೇಶ ಹೋರಡಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ನಿಮ್ಮೆಲ್ಲರ ಬದುಕಿನಲ್ಲಿ ನೀವು ಯಾವತ್ತಿಗೂ ಕೀಳರಿಮೆಯಿಂದ ಮಾನಸಿಕವಾಗಿ ಕುಗ್ಗಬಾರದು. ನೀವು ದೇಶಸೇವೆ ಮಾಡುತ್ತಿರುವುದಾಗಿ ಸ್ವಾಭಿಮಾನದಿಂದ ಬದುಕಿ. ಪೌರಕಾರ್ಮಿಕರಿಲ್ಲದೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದ ನಂತರ ಏನೇ ಒತ್ತಡವಿದ್ದರೂ ಸಾವಿರಾರು ಜನ ಪೌರಕಾರ್ಮಿಕರನ್ನು ಖಾಯಂ ಮಾಡಿದ್ದು, ಉಳಿದವರನ್ನು ಖಾಯಂ ಮಾಡಲಾಗುವುದು. ಬಿಡ್ಲ್ಯೂಎಸ್ ಎಸ್ ಬಿ, ನೀರು ಸರಬರಾಜು ಇಲಾಖೆಗಳಲ್ಲಿ ಖಾಯಂ ಆಗಿ ಸ್ವಾಭಿಮಾನದ ಬದುಕು ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನೀವಿಲ್ಲ ಎಂದರೆ ಮಹಾನಗರ, ಪಟ್ಟಣಗಳು ಸ್ವಚ್ಛವಾಗಿರುವುದಿಲ್ಲ” ಎಂದು ಭರವಸೆ ನೀಡಿದರು.
“ನಿಮ್ಮ ಸಂಘಟನೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುವಂತೆ ನಾನು ಬಸವಂತಪ್ಪನವರಿಗೆ ಹೇಳಿದೆ. ನಿಮ್ಮ ಅಧ್ಯಕ್ಷರುಗಳೇ ನಿಮ್ಮ ಕೆಲಸ ಖಾಯಂ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂಬ ಅಂಶವನ್ನು ನನ್ನ ಗಮನಕ್ಕೆ ತಂದರು. ಈ ವಿಚಾರವನ್ನು ಜನರ ಮುಂದೆಯೇ ಪ್ರಸ್ತಾಪಿಸಿ ಎಂದು ನಾನು ಸೂಚಿಸಿದೆ. ಕಾರಣ ನೀವು ಜಾಗೃತರಾಗಬೇಕು. ನಾನು ಇಲ್ಲಿಂದಲೇ ಅಧಿಕಾರಿಗಳಿಗೆ ಆದೇಶ ನೀಡುತ್ತಿದ್ದೇನೆ” ಎಂದು ಆತ್ಮಸ್ಥೈರ್ಯ ತುಂಬಿದರು.
ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ
“ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಕಾರಣಕ್ಕೆ ನಾವು ಪ್ರಜಾಸೇವೆ ಇಲಾಖೆ ಆರಂಭಿಸಿದ್ದೇವೆ. ಯಾವ ಸಂಘಟನೆಯ ಮಧ್ಯವರ್ತಿಗಳು ಅಗತ್ಯವಿಲ್ಲ. ನಿಮ್ಮ ಸಮಸ್ಯೆಗಳನ್ನು ಬಾಲಕೃಷ್ಣ, ಯತೀಂದ್ರ, ಮುನಿಯಪ್ಪನವರು ಹಾಗೂ ಬಸವಂತಪ್ಪನವರು ತಿಳಿಸಿದ್ದಾರೆ. ನಿಮ್ಮ ಮಂಡಳಿ, ಯೋಗ ಕ್ಷೇಮ, ಕಲ್ಯಾಣ ನಿಧಿ ವಿಚಾರದಲ್ಲಿ ನಾನು ಗಮನಹರಿಸಬೇಕಾಗಿದ್ದು, ಇದಕ್ಕಾಗಿ ಸಮಾಜಕಲ್ಯಾಣ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಬಸವಂತಪ್ಪನವರನ್ನು ಒಳಗೊಂಡಂತೆ ಸಂಪುಟ ಉಪಸಮಿತಿ ರಚಿಸಿ, ಆರ್ಥಿಕ ಇಲಾಖೆ ವಿಶ್ವಾಸ ಪಡೆದು ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.
“ಪ್ರತಿನಿತ್ಯ ನಿಮಗೆ ನೀಡುವ ಜವಾಬ್ದಾರಿಯಲ್ಲಿ 60% ಜನ ಪ್ರಾಮಾಣಿಕವಾಗಿ ಮಾಡುತ್ತೀರಿ. ಉಳಿದಷ್ಟು ಜನ ಮೈಗಳ್ಳರು, ಮಹಿಳೆಯರ ಮೇಲೆ ದರ್ಪ ತೋರುವವರು ನಿಮ್ಮಲ್ಲೇ ಇದ್ದಾರೆ. ಇದರ ಬಗ್ಗೆ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು. ನೀವುಗಳು ಇಲ್ಲದಿದ್ದರೆ ನಗರ ತಿಪ್ಪೆಗುಂಡಿಯಾಗುತ್ತದೆ ಎಂಬ ಅರಿವಿದೆ. ನೀವಿದ್ದರೆ ರಸ್ತೆ, ನಗರ ಎಲ್ಲವೂ ಸುಂದರ. ಹೀಗಾಗಿ ನಿಮ್ಮನ್ನು ಸ್ವಚ್ಛತೆಯ ರಾಯಭಾರಿಗಳು ಎಂದು ಗೌರವಯುತವಾಗಿ ಕಾಣುತ್ತಿದೆ. ನಿಮ್ಮ ಆರೋಗ್ಯಕ್ಕೆ ಗ್ಯಾರಂಟಿ ನೀಡುವುದು ನಮ್ಮ ಬದ್ಧತೆಯಾಗಿದೆ. ಸಮಾಜ ನಿಮ್ಮ ಮೇಲೆ ಅವಲಂಬಿತವಾಗಿದೆ. ನಿಮ್ಮ ಕೆಲಸ ದೇವರ ಸೇವೆಗೆ ಸಮಾನ ಎಂದು ಅಧಿಕಾರಿಗಳು ಹಾಗೂ ಸಾಮಾನ್ಯ ಜನ ಕಾಣುವಂತಾಗಬೇಕು” ಎಂದು ತಿಳಿಸಿದರು.
ಸರ್ವರಿಗೂ ಸಮಬಾಳು, ಸಮ ಪಾಲು ಎಂಬ ತತ್ವ ಪಾಲನೆ
“ಇಡೀ ದೇಶಕ್ಕೆ ನಮ್ಮ ಸರ್ಕಾರ ಹೊಸ ಸಂದೇಶ ನೀಡಿದೆ. ನಿಮ್ಮ ಪೌರಕಾರ್ಮಿಕನ ಮಗನನ್ನು ಭಗವಂತನ ಸೇವೆ ಮಾಡುವ ಮುಜರಾಯಿ ಇಲಾಖೆ ಸಚಿವರನ್ನಾಗಿ ಮಾಡಿ. ಸರ್ವರಿಗೂ ಸಮಬಾಳು, ಸಮ ಪಾಲು ಎಂಬ ತತ್ವವನ್ನು ಪಾಲಿಸಿದ್ದೇವೆ. ಒಂದು ಕಾಲದಲ್ಲಿ ದೇವಾಲಯದ ಒಳಗೆ ನಿರ್ಬಂಧ ಹೇರಲಾಗಿತ್ತು. ಅಂತಹ ತಾರತಮ್ಯ ನಿಲ್ಲಬೇಕು ಎಂದು ನಾನು ಪೌರ ಕಾರ್ಮಿಕನ ಮಗನಿಗೆ ಈ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಅವರಿಗೆ ಗೌರವ ಹಾಗೂ ಶಕ್ತಿ ಬರಬೇಕು ಎಂದು ಮೀನುಗಾರಿಕೆ, ಬಂದರು ಸಚಿವಾಲಯವನ್ನು ನೀಡಲಾಗಿದೆ” ಎಂದರು.
ಕಾಂಗ್ರೆಸ್ ಸರ್ಕಾರ ಹಾಗೂ ಪೌರ ಕಾರ್ಮಿಕರ ನಡುವೆ ಭಕ್ತ-ಭಗವಂತನ ಸಂಬಂಧ
“ನಿಮ್ಮ ಕೈಗೆ ಭದ್ರತೆ ನೀಡಬೇಕು ಎಂಬು. 2017ರಲ್ಲಿ ನಮ್ಮ ಸರ್ಕಾರ 10 ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿತ್ತು. 2023ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 12,609 ಪೌರ ಕಾರ್ಮಿಕರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿದೆ. ಒಂದು ರೂಪಾಯಿ ಭ್ರಷ್ಟಾಚಾರವಿಲ್ಲದೆ ಸರ್ಕಾರಿ ಕೆಲಸ ನೀಡಿದ್ದೇವೆ. ನಿಮಗೆ 40 ಸಾವಿರ ವೇತನ ನೀಡುವಂತೆ ಆದೇಶ ಮಾಡಿದೆವು. ಸ್ಥಳೀಯ ಸಂಸ್ಥೆಗಳಲ್ಲಿ 6 ಸಾವಿರ ಜನರನ್ನು ನೇಮಕ ಮಾಡಲಾಗಿದೆ. ಇನ್ನಷ್ಟು ನೇಮಕಾತಿ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
“ದೇವರಾಜ ಅರಸು ಅವರ ಕಾಲದಿಂದ ಪೌರ ಕಾರ್ಮಿಕರ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದರೆ ಅದು ಕಾಂಗ್ರೆಸ್ ಸರ್ಕಾರ. ಪೌರ ಕಾರ್ಮಿಕರು ಹಾಗೂ ಸರ್ಕಾರದ ನಡುವೆ ಇರುವುದು ಭಕ್ತ ಹಾಗೂ ಭಗವಂತ ನಡುವಣ ಸಂಬಂಧ. ನಿಮ್ಮ ಮನೆ ನಿರ್ಮಾಣಕ್ಕೆ 7.50 ಲಕ್ಷ ನೀಡಲು ತೀರ್ಮಾನಿಸಿದ್ದೇವೆ” ಎಂದರು.
ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೆಪಿಎಸ್ ಮಾದರಿಯಲ್ಲಿ ವಸತಿ ಶಾಲೆಗಳ ನಿರ್ಮಾಣ
“ನಿಮ್ಮ ಮಕ್ಕಳಿಗಾಗಿ ನಗರ ಪ್ರದೇಶಗಳಲ್ಲಿ ಕೆಪಿಎಸ್ ಮಾದರಿಯ ವಸತಿ ಶಾಲೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ. ನಿಮ್ಮ ಮಕ್ಕಳು ಓದಿ, ನಾಯಕರಾಗಿ ಬೆಳೆದು, ಹೊಸ ಉದ್ಯೋಗಗಳನ್ನು ಸೃಷ್ಟಿಸುವಂತಾಗಬೇಕು. ನಿಮ್ಮ ಮಕ್ಕಳು ಐಎಎಸ್ ಹಾಗೂ ಕೆಎಎಸ್ ಆಗಬೇಕು ಎಂಬುದು ನಮ್ಮ ಚಿಂತನೆ. ಈ ಸಂಬಂಧ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು. ನಿಮಗಾಗಿ ಪ್ರತ್ಯೇಕ ಭವನ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಇದನ್ನು ನಿರ್ಮಾಣ ಮಾಡುವ ಜಾಗ ನನ್ನ ತಲೆಯಲ್ಲಿದೆ. ಮುಂದಿನ ಎರಡು ತಿಂಗಳಲ್ಲಿ ಪೌರ ಭವನ ನಿರ್ಮಾಣ ಪ್ರಾರಂಭಿಸಲಾಗುವುದು. ಪ್ರತಿ ವರ್ಷ ಪೌರ ಕಾರ್ಮಿಕ ದಿನ ಕಾರ್ಯಕ್ರಮವನ್ನು ಸರ್ಕಾರದಿಂದ ನಡೆಸಲಾಗುವುದು” ಎಂದು ತಿಳಿಸಿದರು.
“ಉಪಾಹಾರ- ಊಟವಷ್ಟೇ ನಮ್ಮ ಚಿಂತನೆಯಲ್ಲ. ನಿಮ್ಮ ಬದುಕಿನ ಬಗ್ಗೆ ನಾವು ಆಲೋಚಿಸುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಕಾರ್ಮಿಕರಿಂದ ಮೂರು ಪಟ್ಟು ಬಸ್ ಟಿಕೆಟ್ ದರ ಪಡೆಯುವಾಗ ನಾವು ಕಾಂಗ್ರೆಸ್ ಪಕ್ಷದಿಂದ 1 ಕೋಟಿ ನೀಡಿ ಉಚಿತ ಪ್ರಯಾಣಕ್ಕೆ ಆಗ್ರಹಿಸಿದೆವು. ನಿಮ್ಮಲ್ಲಿ ಅನೇಕ ಆಟೋ ಚಾಲಕರು ಇದ್ದಾರೆ. ಮುಂದಿನ ವಾರ ಚಾಲಕರನ್ನು ಕರೆಸಿ ಸಮಸ್ಯೆ ಆಲಿಸಲಾಗುವುದು. ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರ ನಿಮ್ಮ ಜತೆಗೆ ನಿಲ್ಲುತ್ತೇವೆ. ನಿಮ್ಮದು ಕೇವಲ ಕಸ ತೆಗೆಯುವ ಕೈಗಳಲ್ಲ, ಕರ್ನಾಟಕವನ್ನು ಪಾಡುವ ಕೈಗಳು” ಎಂದು ಬಣ್ಣಿಸಿದರು.
