ಸಮಗ್ರ ಸುದ್ದಿ

ವಿಬಿಜಿರಾಮ್ ಜಿ: ಕೆಲಸ ಮಾಡದವರಿಂದ ಫೋಟೋ ತನಿಖೆಗೆ ಈಶ್ವರ್ ಖಂಡ್ರೆ ಆದೇಶ

Share

ಬೆಂಗಳೂರು: ಯಂತ್ರದಿಂದ ಉಳಿಮೆ ಮಾಡಿರುವ ಭೂಮಿಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಫಲಾನುಭವಿಗಳನ್ನು ಕೂರಿಸಿ ಫೋಟೋ ತೆಗೆದು ವಂಚಿಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತನಿಖೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಸಚಿವರ ಕಚೇರಿಯಿಂದ ಲಿಖಿತ ಸೂಚನೆ ನೀಡಿದ್ದು, ಚಾಮರಾಜನಗರ ತಾಲೂಕು, ಮಾದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲವು ಅಧಿಕಾರಿಗಳು ಉಳಿಮೆ ಮಾಡಿರುವ ಜಮೀನಿನಲ್ಲಿ ಗ್ರಾಮದ ಮಹಿಳೆಯರು ಮತ್ತು ಪುರುಷರನ್ನು ಕೂರಿಸಿ ಫೋಟೋ ತೆಗೆದು, ಮಾನವ ದಿನ (ಪಿಡಿ) ಸೃಜನೆ ಆಗಿರುವಂತೆ ದಾಖಲಿಸಿ, 382 ರೂ. ಕೂಲಿ ಬದಲಾಗಿ 100 ರೂ. ಕೊಡಲಾಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುವುದಲ್ಲದೆ, ಯೋಜನೆಯ ಮೂಲ ಉದ್ದೇಶವನ್ನೇ ನಾಶವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ನಡೆಸಿ, ಈ ರೀತಿ ಯೋಜನೆ ಉದ್ದೇಶವನ್ನೇ ಹಾಳು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಶಿಸ್ತುಕ್ರಮದ ಶಿಫಾರಸ್ಸಿನೊಂದಿಗೆ, ವಾಸ್ತವ ವರದಿಯನ್ನು 48 ಗಂಟೆಗಳ ಒಳಗಾಗಿ ಕಡತದಲ್ಲಿ ಮಂಡಿಸಲು ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಹಲವು ಭಾಗಗಳಲ್ಲಿ ಗ್ರಾಮೀಣ ಜನರು ಗುಳೆ ಹೋಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಾಗುತ್ತಿದ್ದು, ವಲಸೆ ತಡೆಯಲು ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಶಾಶ್ವತ ಆಸ್ತಿಗಳನ್ನು ಸೃಜಿಸಲು ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸ್ಥಳದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆ ಅಡಿ ಗರಿಷ್ಠ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ ಕೆಲವು ಅಧಿಕಾರಿಗಳು ಹೀಗೆ ಉದ್ದೇಶವನ್ನೇ ಹಾಳು ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Share

You cannot copy content of this page