ಸಮಗ್ರ ಸುದ್ದಿ

ತುಂಗಭದ್ರಾ ಜಲಾಶಯದಿಂದ 4100 ಕ್ಯೂಸೆಕ್ ನಂತೆ‌ 90 ದಿನಗಳ ಕಾಲ‌ ನೀರು ಹರಿಸಲು ನಿರ್ಧಾರ: ಸಚಿವ ಶಿವರಾಜ್ ತಂಗಡಗಿ

Share

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರದ ಮೇಲೆ 90 ದಿನ‌‌ಗಳ ಕಾಲ 4100 ಕ್ಯೂಸೆಕ್ ನಂತೆ ಕಾಲುವೆಗಳಿಗೆ ಇಂದಿನಿಂದಲೇ ನೀರು ಹರಿಸಲು ತೀರ್ಮಾನಿಲಾಗಿದೆ ಎಂದು ಕೊಪ್ಪಳ‌‌ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ಮುನಿರಾಬಾದ್ ನ ಟಿಬಿಪಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ 82 ಟಿಎಂಸಿ ನೀರಿನ ಸಂಗ್ರಹ ಇದ್ದು, ಮುಂದಿನ ದಿನಗಳಲ್ಲಿ‌‌ 16 ಟಿಎಂಸಿ‌ ನೀರು ಜಲಾಶಯಕ್ಕೆ ಹರಿದು ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.‌ ಮುಂದಿನ‌ ತಿಂಗಳು ಸೆಪ್ಟೆಂಬರ್ ‌11ರಂದು ಮತ್ತೊಂದು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು.‌

ಜಲಾಶಯದಲ್ಲಿನ‌ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆ. 11ರಿಂದ ನ.10 ರವರೆಗೆ 4100 ಕ್ಯೂಸೆಕ್ ನಂತೆ, ಬಲದಂಡೆ ಮೇಲ್ಮಟ್ಟದ
ಕಾಲುವೆಗೆ ಆ.11ರಿಂದ ನ.10ರವರೆಗೆ 1200 ಕ್ಯೂಸೆಕ್ ನಂತೆ ನೀರನ್ನು ಹರಿಸಲಾಗುವುದು.

ತುಂಗಭದ್ರಾ‌ ಬಲದಂಡೆ ಕೆಳಮಟ್ಟದ ಕಾಲುವೆಗೆ ಆ.11ರಿಂದ ನ.10ರವರೆಗೆ 650 ಕ್ಯೂಸೆಕ್ ನಂತೆ, ರಾಯ ಬಸವಣ್ಣ ಕಾಲುವೆಗೆ ಜ.1ರಿಂದ ಡಿ.10ರವರೆಗೆ ಸರಾಸರಿ 180 ಕ್ಯೂಸೆಕ್ ನಂತೆ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ.11ರಿಂದ ನ.10ರವರೆಗೆ 25 ಕ್ಯೂಸೆಕ್ ಮತ್ತು ನದಿಗೆ ಆ.11ರಿಂದ 17ರವರೆಗೆ 500 ಕ್ಯೂಸೆಕ್ ನೀರು ಹರಿಸಲಾಗುವುದು ಎಂದು ಮಾಹಿತಿ‌ ನೀಡಿದರು.

ತೆಲಂಗಾಣದ ಪಾಲು 3 ಟಿಎಂಸಿ, ಆಂಧ್ರದ ಪಾಲು 30 ಟಿಎಂಸಿ, ಡೆಡ್ ಸ್ಟೊರೇಜ್ ಎರಡು ಟಿಎಂಸಿ‌ ಹಾಗೂ ಕುಡಿಯುವ ನೀರಿಗೆ ಬೇಕಾದ ನೀರನ್ನು ಲೆಕ್ಕ ಹಾಕಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಚರ್ಚೆ ನಡೆಸಿ‌ ಈ ಮೇಲಿನ‌ ನಿರ್ಧಾರ ಕೈಗೊಳ್ಳಲಾಗಿದೆ. ದೇವರ ಕೃಪೆಯಿಂದ ಮಳೆ‌ ಬಂದು ಜಲಾಶಯಕ್ಕೆ ನೀರು ಬರಲಿ‌ ಎಂದು ಪ್ರಾರ್ಥಿಸುತ್ತೇವೆ. ರೈತರ ಪರವಾಗಿ ನಮ್ಮ‌ ಸರ್ಕಾರ ಸದಾ ಇರಲಿದೆ‌ ಎಂದರು.‌

ಸಭೆಯಲ್ಲಿ ಸಚಿವ ನಾಗೇಂದ್ರ, ಮಾಜಿ ಸಚಿವ‌ ಎನ್.ಎಸ್. ಬೋಸ್ ರಾಜು, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್,
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಗಣೇಶ್, ಹಂಪನಗೌಡ ಬಾದರ್ಲಿ, ನಾಗರಾಜ್, ಬಸವನಗೌಡ ತುರುವಿಹಾಳ್, ಶಿವರಾಜ್ ಪಾಟೀಲ್, ಹಂಪಯ್ಯ ನಾಯಕ್, ಬಸನಗೌಡ ಬಾದರ್ಲಿ, ರೈತ ಮುಖಂಡರು ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.


Share

You cannot copy content of this page