ಬೆಂಗಳೂರು: ರಾಜ್ಯದ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಕಳೆದ 2 ದಿನಗಳಿಂದ ಸದನದಲ್ಲಿ ಚರ್ಚೆಗಳೇ ನಡೆಯುತ್ತಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ, ಬರದ ಬಗ್ಗೆ ಚರ್ಚೆಗಳು ಆಗಬೇಕು. ಜನರ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯಬೇಕು. ಅದಕ್ಕೆ ವಿರೋಧ ಪಕ್ಷದವರು ಸಹಕರಿಸಬೇಕು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಇಂದು ವಿಧಾನಪರಿಷತ್‌ನಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧಪಕ್ಷದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಹಳ್ಳಿಗಾಡಿನಲ್ಲಿ ಕುಡಿಯಲು ನೀರಿಲ್ಲ. ಅನೇಕ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಒದಗಿಸುತ್ತಿದ್ದೇವೆ. ಜಾನುವಾರುಗಳಿಗೆ ಮೇವು ಕೂಡ ಕಡಿಮೆಯಾಗುತ್ತಿದೆ. ಅನೇಕ ಜ್ವಲಂತ ಸಮಸ್ಯೆಗಳು ರಾಜ್ಯದ ಜನತೆ ಮತ್ತು ನಮ್ಮ ಮುಂದಿದೆ. ಅದರ ಬಗ್ಗೆ ನಾವು ಚರ್ಚೆ ನಡೆಸಬೇಕು ಎಂದರು.
ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿರುವ ಬಗ್ಗೆ ವಿರೋಧ ಪಕ್ಷದವರು ಪ್ರಶ್ನೆ ಕೇಳಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ, ನೀವು ನೋಟಿಸ್ ಕೊಟ್ಟು ಪ್ರಶ್ನೆಯನ್ನು ಕೇಳಬಹುದು. ಯಾಕೆ ಅವರನ್ನು ಮತ್ತೊಮ್ಮೆ ಮಂತ್ರಿಯನ್ನಾಗಿ ಮಾಡಿದ್ದೇವೆ ಎಂಬ ಬಗ್ಗೆ ಸ್ಪಷ್ಟವಾದ ಉತ್ತರವನ್ನು ನಾವು ಕೊಡುತ್ತೇವೆ. ಸದನದ ನಿಯಮಗಳಿಗೆ ಗೌರವ ಕೊಡಬೇಕು. ನಾವೇ ನಿಯಮ ರೂಪಿಸಿ, ಅದರ ವಿರುದ್ಧವೇ ನಡೆದುಕೊಂಡರೆ ಅದೆಷ್ಟು ಸರಿ ಎಂದು ಪ್ರಶ್ನಿಸಿದರು.
ಇದು ಹಿರಿಯರ ಮನೆ. ‘House of Elders’ ಎಂದು ಕರೆಯುತ್ತಾರೆ. ಈ ಮನೆಯಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತದೆ. ಇಲ್ಲಿ ನಡೆಯುವಂತಹ ವಿದ್ಯಮಾನಗಳು ಕೆಳಗಿನ ಮನೆಗಿಂತಲೂ ವಿಭಿನ್ನವಾಗಿರುತ್ತದೆ. ಈ ಸದನಕ್ಕೆ ಬಹಳ ಗೌರವವಿದೆ. ನಾವು ಅದನ್ನು ಕಾಪಾಡಬೇಕು. ನಾನು ವಿರೋಧ ಪಕ್ಷದ ನಾಯಕರಿಗೆ ಮತ್ತು ಎಲ್ಲ ಗೌರವಾನ್ವಿತ ಸದಸ್ಯರಿಗೆ ಮನವಿ ಮಾಡುವುದೇನೆಂದರೆ, ನೀವು ನೋಟಿಸ್ ಕೊಟ್ಟು ಪ್ರಶ್ನೆ ಮಾಡಿ, ಚರ್ಚೆ ಮಾಡಿ. ನಿಮಗೆ ಏನೆಲ್ಲಾ ಮಾಹಿತಿ ಇದೆಯೋ ಅದನ್ನೆಲ್ಲಾ ಹೇಳಿ. ನಾವು ಉತ್ತರವನ್ನು ಕೊಡುತ್ತೇವೆ ಎಂದು ತಿಳಿಸಿದರು.
ಬರ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ಮನವಿಯನ್ನು ಕೊಡಬೇಕು. ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ತಿಳಿಸಬೇಕು. 75 ವರ್ಷ ಬಳಿಕ ಇಂತಹ ಭೀಕರ ಬರ ಬಂದಿದೆ. ಕೇಂದ್ರವು ನಿಯಮಾವಳಿಗಳನ್ನು ಮಾಡಿದೆ. ಆ ನಿಯಮಾವಳಿಗಳ ಪ್ರಕಾರ ನಾವು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬಹುದು. ಈಗಾಗಲೇ ನಾವು ಎಲ್ಲಾ ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ವರದಿ ಬಂದ ಮೇಲೆ ಕೇಂದ್ರಕ್ಕೆ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.
ಮುಂದುವರೆದು, ಆ ಬಳಿಕ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ತಂಡವನ್ನು ಇಲ್ಲಿಗೆ ಕಳಿಸಬಹುದು. ಆ ಆಧಾರದ ಮೇಲೆ ಬರ ಘೋಷಣೆ ಮಾಡಲು ಅನುಮತಿಯನ್ನು ಕೊಡಬಹುದು. ನಾವೇ ಘೋಷಣೆ ಮಾಡಿ ಎಂದರೆ ಆಗುವುದಿಲ್ಲ. ನಾವೇ ಘೋಷಣೆ ಮಾಡಿದರೆ ಪರಿಹಾರದ ಹಣ ಕೊಡುವವರು ಯಾರು? ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿಯನ್ನು ನೀಡಬೇಕು. ನಾವೆಲ್ಲರೂ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡೋಣ. ಜನರು ನಮ್ಮಿಂದ ಇದನ್ನೇ ನಿರೀಕ್ಷಿಸುತ್ತಿದ್ದಾರೆ ಎಂದರು.
