ಸಮಗ್ರ ಸುದ್ದಿ

ಬಿಎಂಟಿಸಿ ಬಿಡಿ ಭಾಗಗಳ ಖರೀದಿ ಅಕ್ರಮಉನ್ನತ ಮಟ್ಟದ ತನಿಖೆ: 8 ಮಂದಿ ಸಸ್ಪೆಂಡ್- ಬೈರತಿ ಸುರೇಶ್

Share

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ ಬಿಡಿ ಭಾಗಗಳ ಖರೀದಿಯಲ್ಲಿ ನಡೆದಿರುವ ನ್ಯೂನತೆಗಳ ಬಗ್ಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿದ್ದು, ಮುಂದಿನ ಅಕ್ಟೋಬರ್ ಅಂತ್ಯದ ವೇಳೆಗೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಎಂಟಿಸಿ ಬಸ್ ಬಿಡಿ ಭಾಗಗಳ ಖರೀದಿಯಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿರುವ ಬಗ್ಗೆ ಮಾಹಿತಿಗಳು ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಭದ್ರತಾ ಜಾಗೃತಾಧಿಕಾರಿ ಪರಿಮಳಾ ಎಲ್. ನಾಯಕ್, ಸಿ.ಕೆ.ರಮ್ಯ, ಮಬೀನ್ ತಾಜ್, ಆನಂದ ಪ್ರಸಾದ್ ಮತ್ತು ಎನ್.ಆನಂದ್ ಅವರನ್ನೊಳಗೊಂಡ ಸಮಿತಿಯು ತನಿಖೆ ನಡೆಸುತ್ತಿದೆ. ಈ ಸಮಿತಿಯು ಪ್ರಾಥಮಿಕ ಹಂತದ ವರದಿಯನ್ನು ಸಲ್ಲಿಸಿದೆ ಎಂದು ಹೇಳಿದರು.

ಈ ವರದಿಯನ್ವಯ ಮೇಲ್ನೋಟಕ್ಕೆ ಕರ್ತವ್ಯಲೋಪ ಎಸಗಿರುವ ಸಹಾಯಕ ಉಗ್ರಾಣಾಧಿಕಾರಿ ಆರ್.ಎಂ.ಬಂಟನೂರಕರ್, ಉಗ್ರಾಣ ಛಾಯಾ, ಶಿಲ್ಪ, ಆರ್.ನಾಗರಾಜು, ಅಶೋಕ್, ಎಸ್.ರೂಪಾ, ಪ್ರೇಮ ನರಿಯಣ್ಣನವರ್ ಮತ್ತು ಎಸ್.ಕೆ.ರವೀಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಈ ಸಮಿತಿಯು ಕೂಲಂಕುಷ ತನಿಖೆಯನ್ನು ಮುಂದುವರಿಸಿದ್ದು, ಮುಂದಿನ ಅಕ್ಟೋಬರ್ ಅಂತ್ಯದ ವೇಳೆಗೆ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ವರದಿಯನ್ನು ಪರಿಶೀಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.


Share

You cannot copy content of this page