ಸಮಗ್ರ ಸುದ್ದಿ

ವಿಧಾನ ಪರಿಷತ್‍, ವಿಧಾನಸಭೆಯಲ್ಲಿಂದು ಬಿ.ಸಿ. ನಾಗೇಶ್ ಅವರಿಗೆ ಸಂತಾಪ ಸೂಚನೆ

Share

ಬೆಂಗಳೂರು: ವಿಧಾನ ಪರಿಷತ್‍ ಮತ್ತು ವಿಧಾನಸಭೆಯಲ್ಲಿಂದು ಆಗಸ್ಟ್ 18 ರಂದು ನಿಧನ ಹೊಂದಿದ ಮಾಜಿ ಸಚಿವ ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರಾಗಿದ್ದ ಬಿ.ಸಿ. ನಾಗೇಶ್ ಅವರಿಗೆ ಸಂತಾಪ ಸೂಚಿಸಲಾಯಿತು.

ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಮಾತನಾಡಿ, ಬಿ.ಸಿ.ನಾಗೇಶ್ ಅವರು ಶಾಸಕರಾಗಿ ಜಿಲ್ಲಾ ಸಚಿವರಾಗಿ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.  ಶ್ರೀಮಂತರಾಗಿದ್ದರು ಸಹ ಸಾರ್ವಜನಿಕರ  ಸೇವೆ ಸಲ್ಲಿಸಲು ರಾಜಕಾರಣಕ್ಕೆ ಬಂದಿದ್ದ ಅವರು ಪ್ರಾಮಾಣಿಕ ರಾಜಕಾರಣಿಯಾಗಿದ್ದರು.  ಇವರ ನಿಧನದಿಂದಾಗಿ ರಾಜ್ಯವು ಸರಳ ಸಜ್ಜನ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ  ಶಾಂತಿ ಕೋರಿ, ಅವರ ಕುಟುಂಬ ವರ್ಗದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.

ಸಭಾನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಮಾತನಾಡಿದ ನಂತರ ಮೃತರ ಗೌರವಾರ್ಥ ಸದಸ್ಯರುಗಳು ಒಂದು ನಿಮಿಷ ಮೌನವನ್ನು ಆಚರಿಸಿದರು.

ವಿಧಾನಪರಿಷತ್ ಸಭಾಪತಿ ಸಲೀಂ ಅಹಮ್ಮದ್ ಅವರು ಮಾತನಾಡಿ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದರು.  

ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆ ನಿರ್ಣಯವನ್ನು ಮೃತ ಗಣ್ಯರ ಕುಟುಂಬ ವರ್ಗದವರಿಗೆ ಕಳುಹಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.

ವಿಧಾನಸಭೆಯಲ್ಲಿ ಬಿ.ಸಿ.ನಾಗೇಶ್ ಅವರಿಗೆ ಸಂತಾಪ ಸೂಚನೆ:
 
ಇಂದು ಬೆಳಿಗ್ಗೆ ಪ್ರಾರಂಭವಾದ ವಿಧಾನಸಭಾ ಕಲಾಪ ಆರಂಭದಲ್ಲಿ ಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ ಅವರು ನಿನ್ನೆ ನಿಧನರಾದ ಮಾಜಿ ಸಚಿವರಾದ ಬಿ.ಸಿ.ನಾಗೇಶ್ ಅವರಿಗೆ ಸಂತಾಪ ಸೂಚನೆಯನ್ನು ಮಂಡಿಸಿ, ಮಾತನಾಡಿ, ವಿದ್ಯಾರ್ಥಿಯಾದಾಗಿನಿಂದಲೇ ಎಬಿವಿಪಿಯಲ್ಲಿ ಸಕ್ರಿಯವಾಗಿದ್ದ ನಾಗೇಶ್ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಸುಧಾರಣೆ ತಂದರು. ತಮ್ಮ ಖಾತೆಯ ಕರ್ತವ್ಯದ ಜೊತೆಗೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಸರಳ ಸಜ್ಜನ ರಾಜಕಾರಣಿ ಆಗಿದ್ದರಲ್ಲದೆ, ಪಕ್ಷಾತೀತವಾಗಿ ಎಲ್ಲರನ್ನು ವಿನಯದಿಂದ ಕಾಣುತಿದ್ದರು ಎಂದು ತಿಳಿಸಿದರು.

ನಾಗೇಶ್ ಅವರು ಸಜ್ಜನ ರಾಜಕಾರಣೆ ಎಂದೆನಿಸಿಕೊಳ್ಳಲು ಅವರ ನಡವಳಿಕೆ ಮತ್ತು ಅವರ ಆಲೋಚನೆಗಳೇ ಕಾರಣ ಎಂದು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಅಭಿಪ್ರಾಯಪಟ್ಟರು. ಸರ್ಕಾರಿ ಶಾಲೆಗಳಲ್ಲಿ ಮೌಲ್ಯಯುತ ಶಿಕ್ಷಣ ನೀಡಲು ಪ್ರಯತ್ನಿಸಿದರು. ನಾವು ವಿರೋಧ ಪಕ್ಷದಲ್ಲಿದ್ದರೂ ಕೂಡ ಅವರು ನಮ್ಮೊಂದಿಗೆ ಆತ್ಮೀಯತೆಯಿಂದಲೇ ಇದ್ದರು ಎಂದು ನೆನೆದರು.

ವಿವೇಕ ಯೋಜನೆಯಡಿ ಮಕ್ಕಳಿಗೆ ವಿವೇಕಾನಂದ ಆದರ್ಶಗಳನ್ನು ತಿಳಿಸಿಕೊಡುವ ಉದ್ದೇಶದಿಂದ 8200 ಕೊಠಡಿಗಳನ್ನು ಮಂಜೂರು ಮಾಡಿದ್ದರು ಎಂದು ಸಚಿವ ಮಧು ಬಂಗಾರಪ್ಪ ಅವರು ನಾಗೇಶ್ ಅವರ ಕಾರ್ಯವನ್ನು ನೆನೆದರು.

ಸಚಿವ ಯು.ಟಿ.ಖಾದರ್ ಅವರು ಮಾತನಾಡಿ ಪ್ರತಿಯೊಂದು ಸಾವಿನಲ್ಲೂ ಒಂದು ಸಂದೇಶ ಇರುತ್ತದೆ. ಅಧಿಕಾರ, ಆಸ್ತಿ, ಅಂತಸ್ತ ಯಾವುದೂ ಶಾಶ್ವತವಲ್ಲ. ನಾವು ಸಮಾಜಕ್ಕೆ ಮಾಡಿದ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಎಂದರು.

ವಿಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾತನಾಡಿ ಅವರ ಸಮುದಾಯದವರು ಶೇಕಡ 2 ಪ್ರಸೆಂಟ್ ಕೂಡ ಇಲ್ಲದಿದ್ದರೂ ಎರಡು ಬಾರಿ ಆಯ್ಕೆಯಾಗಿದ್ದರು. ಅವರ ಸರಳತೆ ಅವರನ್ನು ಎರಡು ಬಾರಿ ಶಾಸಕರಾಗುವಂತೆ ಮಾಡಿತ್ತು. ಶಾಲೆಗಳಲ್ಲಿ ವಿವೇಕ ಕೇಂದ್ರಗಳನ್ನು ತೆರೆದರು. ಮಕ್ಕಳ ಕಲಿಕೆ ಸರಿಯಾಗಿ ಆಗುತ್ತಿರುವ ಬಗ್ಗೆ ತಿಳಿಯಲು ಅವರು ಶಾಲೆಗಳಿಗೆ ದಿಢೀರ್ ಭೇಟಿ ನೀಡುತ್ತಿದ್ದರು. ಅವರು ಪಕ್ಷಾತೀತ ರಾಜಕಾರಣಿ ಆಗಿದ್ದರು. ಅಂತಹ ಸರಳ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿರುವುದಕ್ಕೆ ನಮ್ಮ ಪಕ್ಷದವರಿಗೆ ತುಂಬಾ ನೋವಾಗಿದೆ ಎಂದರು.

ಎಸ್. ಸುರೇಶ್ ಕುಮಾರ್ ಅವರು ಮಾತನಾಡಿ, ನಾಗೇಶ್ ಅವರು ಸ್ನೇಹಮಯಿ, ಸಜ್ಜನ ವ್ಯಕ್ತಿತ್ವವುಳ್ಳವಾಗಿದ್ದರು. ಜಾಗಿ ಮತ್ತು ಹಣದ ಬಲವಿಲ್ಲದೆ ಮೇಲೆ ಬರಲು ಆಗುವುದಿಲ್ಲ. ಆದರೆ ಇವೆರಡೂ ಬಲ ಇಲ್ಲದಿದ್ದರೂ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು. ಶಿಕ್ಷಣ ಕ್ಷೇತ್ರದಲ್ಲಿ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಮಕ್ಕಳಲ್ಲಿ ಕೌಶಲ್ಯತೆಯನ್ನು ಹೆಚ್ಚಿಸಲು ಶಿಕ್ಷಣ ಕ್ಷೇತ್ರಕ್ಕೆ ಒಂದು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.

ಅವರು ಬ್ರಾಹ್ಮಣರಾಗಿದ್ದರೂ ಕೂಡ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ವಿಚಾರದಲ್ಲಿ ಮಕ್ಕಳಿಗೆ ಕಲಬೆರಿಕೆಯಿಲ್ಲದ ಆಹಾರವನ್ನು ನೀಡಬೇಕು ಎಂದು ಹೇಳುವ ಮೂಲಕ ಮಕ್ಕಳಿಗೆ ಮೊಟ್ಟೆಯನ್ನು ನೀಡಿದರು ಎಂದು ಅರವಿಂದ್ ಬೆಲ್ಲದ್ ಅವರು ತಿಳಿಸಿದರು.

ಸುರೇಶ್ ಗೌಡ ಅವರು ಮಾತನಾಡಿ ಅವರಷ್ಟು ಸರಳ ರಾಜಕಾರಣಿಯನ್ನು ನಾನು ನೋಡಿಲ್ಲ. ಸಚಿವರಾಗಿದ್ದಾಗ ಸರ್ಕಾರ ಅವರಿಗೆ ಕಾರನ್ನು ನೀಡಿದ್ದರೂ ಕೂಡ ದೂರದ ಪ್ರಯಾಣಗಳಿಗೆ ಸಾರ್ವಜನಿಕ ಸಾರಿಗೆಗಳಾದ ಬಸ್ ಮತ್ತು ರೈಲನ್ನು ಬಳಸುತ್ತಿದ್ದರು ಎಂದರು.

ಸಚಿವ ಚಲುವರಾಯಸ್ವಾಮಿ, ಶಾಸಕರಾದ ಅರಗ ಜ್ಞಾನೇಂದ್ರ, ಚನ್ನಬಸಪ್ಪ, ಷಡಕ್ಷರಿ, ಡಾ. ರಂಗನಾಥ್, ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಸದಸ್ಯರು ನಾಗೇಶ್ ಅವರ ಅಗಲಿಕೆಗೆ ಕುರಿತು ಸಂತಾಪ ಸೂಚಿಸಿದರು. ಸದನವು ಒಂದು ನಿಮಿಷಗಳ ಮೌನಾಚಾರಣೆಯನ್ನು ಮಾಡುವ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.


Share

You cannot copy content of this page