ಸಮಗ್ರ ಸುದ್ದಿ

ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ

Share

ನವದೆಹಲಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಯಾಣಿಕರಿಗಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ ಆರಂಭಿಸುವ ಸಿಹಿ ಸುದ್ದಿ ನೀಡಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಏರ್‌ಲೈನ್ಸ್ ಅಕ್ಟೋಬರ್‌ 1ರಿಂದಲೇ ಪ್ರತಿದಿನ ವಿಮಾನ ಸಂಚಾರ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದೆ.

ಈ ಮಹಾನಗರಗಳ ‎‎ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆ ಗಮನದಲ್ಲಿಟ್ಟುಕೊಂಡು ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ (ಪ್ರತಿ ದಿನ) ಸೇವೆ ಆರಂಭಿಸುವಂತೆ ಇತ್ತೀಚೆಗೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳ ಗಮನ ಸೆಳೆದಿದ್ದರು.

ಸಚಿವರ ಮನವಿಗೆ ತ್ವರಿತ ಸ್ಪಂದನೆ ನೀಡಿರುವ ಇಂಡಿಗೋ ಸಂಸ್ಥೆ ಅಕ್ಟೋಬರ್ 1ರಿಂದಲೇ ಪ್ರತಿದಿನ ದೆಹಲಿ–ಹುಬ್ಬಳ್ಳಿ ಹಾಗೂ ದೆಹಲಿ–ಬೆಳಗಾವಿ ಮಧ್ಯೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ತಿಳಿಸಿದೆ.

‎ವಿಮಾನ ಸೇವೆ ವೇಳೆ:‎ Flight No: 6E758ರ ವಿಮಾನ ನಿತ್ಯವೂ ಸಂಜೆ 4:30ಕ್ಕೆ ದೆಹಲಿಯಿಂದ ಹೊರಟು ಸಂಜೆ 6:55ಕ್ಕೆ ಹುಬ್ಬಳ್ಳಿ ತಲುಪಲಿದೆ. Flight No: 6E2115ರ ವಿಮಾನ ಸಂಜೆ 7:30ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ.

ಅಂತೆಯೇ Flight No: 6E2511ರ ವಿಮಾನ ಬೆಳಗ್ಗೆ 6:15ಕ್ಕೆ ದೆಹಲಿಯಿಂದ ಹೊರಟು 8:40ಕ್ಕೆ ಬೆಳಗಾವಿ ತಲುಪಲಿದೆ. ‎Flight No: 6E2512‎ರ ವಿಮಾನ ಬೆಳಗ್ಗೆ 9:10ಕ್ಕೆ ಬೆಳಗಾವಿಯಿಂದ ಹೊರಟು 11:40ಕ್ಕೆ ದೆಹಲಿ ತಲುಪಲಿದೆ. ‎ಈ ಎರಡೂ ವಿಮಾನಗಳು ಅಕ್ಟೋಬರ್ 1ರಿಂದ ಪ್ರತಿದಿನ ಸಂಚಾರ ಆರಂಭಿಸಲಿವೆ.

ಉತ್ತರ ಕರ್ನಾಟಕ ಜನತೆಗೆ ಅನುಕೂಲ: ಪ್ರತಿ ದಿನವೂ ವಿಮಾನ ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರಗಳಲ್ಲಿ ವ್ಯಾಪಾರ, ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ‎ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಸಂಪರ್ಕ ವ್ಯವಸ್ಥೆಯ ಬಲವರ್ಧನೆಗೆ ನಮ್ಮ ಪ್ರಯತ್ನ ನಿರಂತರವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.


Share

You cannot copy content of this page