ಸಮಗ್ರ ಸುದ್ದಿ

ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಕ್ರಮ: ಸಚಿವ ಶಿವಾನಂದ ಪಾಟೀಲ

Share

ಬೆಳಗಾವಿ ಸುವರ್ಣಸೌಧ : ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಹತ್ತಿರದ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಸರ್ಕಾರವು ಕ್ರಮವಹಿಸಲಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ ಅವರು ಹೇಳಿದರು.

ವಿಧಾನ ಪರಿಷತ್ತಿನಲ್ಲಿಂದು ಪರಿಷತ್ ಸದಸ್ಯರಾದ ಭೀಮರಾಯ ಬಸವರಾಜ ಪಾಟೀಲ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 299ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಈ ಕಾರ್ಖಾನೆಯ ಪುನಶ್ಚೇತನದ ಪ್ರಕ್ರಿಯೆಯು 2022ರಿಂದಲೇ ಆರಂಭವಾಗಿದೆ. 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್.ಆರ್.ಓ.ಟಿ. ಆಧಾರದ ಮೇಲೆ ಇದ್ದಲ್ಲಿ, ಯಥಾಸ್ಥಿತಿಯಲ್ಲಿ ಖಾಸಗಿ ಅವರಿಗೆ ಗುತ್ತಿಗೆ ನೀಡಲು 2023ರಲ್ಲಿ ದಿನಪತ್ರಿಕೆಯಲ್ಲಿ ಟೆಂಡರ್ ಕರೆದರೂ ಸಹ ಬಿಡ್ಡುದಾರರು ಆಸಕ್ತಿ ತೋರಲಿಲ್ಲ. ಎರಡನೇ ಬಾರಿಗೆ ಟೆಂಡರ್ ಕರೆದರು ಸಹ ಯಾರೊಬ್ಬ ಬಿಡ್ಡುದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ ಎಂದರು.

ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವನೆಯನ್ನು ಒಳಗೊಂಡಂತೆ ಒಟ್ಟು 06 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್.ಸಿ.ಡಿ.ಸಿ.ಯಿಂದ ನೆರವನ್ನು ಪಡೆಯುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆಯನ್ನು ನಡೆಸಲಾಗುವುದು.

ಎನ್.ಸಿ.ಡಿ.ಸಿ.ಯಿಂದ ಆರ್ಥಿಕ ನೆರವು ಲಭ್ಯವಾಗದಿದ್ದಲ್ಲಿ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್.ಆರ್.ಓ.ಟಿ. ಆಧಾರದ ಮೇಲೆ ಇದ್ದಲ್ಲಿ ಯಥಾಸ್ಥಿತಿಯಲ್ಲಿ ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಮತ್ತೊಮ್ಮೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದು ಬೀದರ ಜಿಲ್ಲೆಯ ಮೊದಲ ಕಾರ್ಖಾನೆಯಾಗಿದೆ. 25 ಸಾವಿರ ರೈತರು ಷೇರು ಹೊಂದಿದ್ದಾರೆ. ಈ ಕಾರ್ಖಾನೆ ಮುಚ್ಚಿದರೆ ಬೀದರ ಭಾಗದ ರೈತರಿಗೆ ಅನ್ಯಾಯವಾಗಲಿದೆ. ದಯಮಾಡಿ ಯಾರಿಗಾದರು ಗುತ್ತಿಗೆ ನೀಡಿಯಾದರೂ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಪರಿಷತ್ ಶಾಸಕರಾದ ಭೀಮರಾವ್ ಪಾಟೀಲ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.


Share

You cannot copy content of this page