ಮಂಗಳೂರು: ರಾಜ್ಯದಲ್ಲಿ ಆಹಾರ ಸುರಕ್ಷತೆ ಹಾಗೂ ನಕಲಿ ಔಷಧಗಳ ವಿರುದ್ಧ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪ್ರತಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ‘ವಾಚ್ ಟೀಂ’ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸುರಕ್ಷಿತ ಆಹಾರ ಹಾಗೂ ನಕಲಿ ಔಷಧಗಳ ಕುರಿತು ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರತಿ ಹೋಟೆಲ್ ಮತ್ತು ಔಷಧ ಮಳಿಗೆಗಳ ಮುಂಭಾಗದಲ್ಲಿ ಕ್ಯೂಆರ್ ಕೋಡ್ ಅಳವಡಿಸಲು ಸೂಚಿಸಲಾಗುವುದು ಎಂದರು.
ಕ್ಯೂಆರ್ ಕೋಡ್ ವ್ಯವಸ್ಥೆ ಆರಂಭಿಸಿದ ಕೇವಲ ಎರಡು ದಿನಗಳಲ್ಲೇ 400ಕ್ಕೂ ಅಧಿಕ ದೂರುಗಳು ಬಂದಿವೆ. ದೂರುಗಳು ಬಂದ ಸ್ಥಳಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಪ್ರಸ್ತುತ ಇರುವ ಅಧಿಕಾರಿಗಳೇ ತಮ್ಮ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಈ ಕಾರ್ಯವನ್ನು ಇನ್ನಷ್ಟು ವ್ಯಾಪಕಗೊಳಿಸುವ ಅಗತ್ಯವಿದೆ. ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸುವ ಉದ್ದೇಶದಿಂದ ‘ವಾಚ್ ಟೀಂ’ ರಚಿಸಲು ಚಿಂತಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
