ಬೆಂಗಳೂರು: ಮಾರ್ಖಂಡೇಯ ಜಲಾಶಯದಲ್ಲಿ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಿ, ಜಲಾಶಯದ ಪುನಃಶ್ಚೇತನಕ್ಕೆ ಮೊದಲ ಆದ್ಯತೆ ನೀಡುವಂತೆ ಜಲಸಂಪನ್ಮೂಲ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಾಸಸೌಧದ ಕೊಠಡಿ ಸಂಖ್ಯೆ 317ರಲ್ಲಿ ಮಂಗಳವಾರ ನಡೆದ ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಅವರು, ಮಾರ್ಖಂಡೇಯ ಜಲಾಶಯದಲ್ಲಿ ನೀರು ಪೋಲಾಗುತ್ತಿರುವ ವಿಚಾರ ಗಂಭೀರವಾಗಿದೆ. ಜಲಾಶಯದಲ್ಲಿ ಸಂಗ್ರಹವಾಗುವ ಅಮೂಲ್ಯ ನೀರು ಸೋರಿಕೆ ಅಥವಾ ಇತರೆ ಕಾರಣಗಳಿಂದ ವ್ಯರ್ಥವಾಗದಂತೆ ತಾಂತ್ರಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಲಾಶಯದಲ್ಲಿ ನೀರು ಉಳಿದರೆ ಮಾತ್ರ ರೈತರ ಹೊಲಗಳಿಗೆ ನೀರು ತಲುಪುತ್ತದೆ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಕಷ್ಟವಾಗುತ್ತದೆ. ವಿಳಂಬ ಮಾಡದೆ ತುರ್ತಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಲಾಶಯದ ರಚನೆ, ನೀರು ಸೋರಿಕೆ ಸೇರಿದಂತೆ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಡ್ಯಾಂ ರೆಜಿನುವೇಷನ್ (ಪುನಶ್ಚೇತನ) ಕಾಮಗಾರಿ ಕೈಗೆತ್ತಿಕೊಳ್ಳುವಂತೆಯೂ ಸೂಚನೆ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಉಳಿದಿರುವ ಮತ್ತು ಅಪೂರ್ಣಗೊಂಡಿರುವ ನೀರಾವರಿ ಕಾಮಗಾರಿಗಳನ್ನು ವರ್ಷಗಟ್ಟಲೆ ಬಾಕಿ ಉಳಿಸಬಾರದು. ಕಾಮಗಾರಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸುವುದರಿಂದ ಸಾರ್ವಜನಿಕ ಹಣ ಪೋಲಾಗುತ್ತದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸಿ ಎಂದು ನಿರ್ದೇಶನ ನೀಡಿದರು.
ಇದೇ ವೇಳೆ ಮಾರ್ಖಂಡೇಯ ಬಲದಂಡೆ ಯೋಜನೆಯ ಸುಧಾರಣೆ ಕುರಿತು ಚರ್ಚಿಸಲಾಯಿತು. ಯೋಜನೆಯಡಿ ನೀರಾವರಿ ಸೌಲಭ್ಯ ಪರಿಣಾಮಕಾರಿಯಾಗಿ ರೈತರಿಗೆ ತಲುಪುವಂತೆ ಇರುವ ಸಮಸ್ಯೆಗಳನ್ನು ಗುರುತಿಸಿ ಅಗತ್ಯ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳು ಹಾಗೂ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.
