ಸಮಗ್ರ ಸುದ್ದಿ

ಅಸ್ವಚ್ಛ 30 ಖಾಲಿ ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗಾಗಿ ನೋಟೀಸ್ ಜಾರಿ: ಆಯುಕ್ತ ಕೆ ಎನ್ ರಮೇಶ್

Share

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನೈರ್ಮಲ್ಯದಿಂದ ಕೂಡಿರುವ ಖಾಲಿ ನಿವೇಶನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಾಥಮಿಕವಾಗಿ ಒಟ್ಟು 30 ಅಸ್ವಚ್ಛ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಯುಕ್ತರಾದ ಕೆ. ಎನ್. ರಮೇಶ್ ಅವರು ತಿಳಿಸಿದ್ದಾರೆ.

ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಸೂಚನೆ ಮೇರೆಗೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿ ನಿರ್ವಹಿಸುವ ಸಂಬಂಧ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ನೋಟಿಸ್ ಜಾರಿಯಾದ ನಿವೇಶನಗಳ ಸಂಖ್ಯೆ ವಿವರ:

  • ಪದ್ಮನಾಭನಗರ: 10
  • ಬಿಟಿಎಂ ಲೇಔಟ್: 05
  • ಜಯನಗರ: 05
  • ಬೆಂಗಳೂರು ದಕ್ಷಿಣ: 05
  • ಬೊಮ್ಮನಹಳ್ಳಿ: 05
  • ಒಟ್ಟು: 30

ಕಾನೂನು ನಿಯಮಗಳ ಉಲ್ಲೇಖ:

ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ನಿಯಮ 15(2), ಘನತ್ಯಾಜ್ಯ ನಿರ್ವಹಣಾ ಉಪ-ನಿಯಮಗಳು-2020ರ ಉಪ-ನಿಯಮ 18(1)(a), 18(1)(b) ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರ ಸೆಕ್ಷನ್ 274(1), 285(2) ಮತ್ತು 290ರ ಅನ್ವಯ ಖಾಲಿ ನಿವೇಶನಗಳಲ್ಲಿ ಕಸ ಸುಡುವುದು ಮತ್ತು ತ್ಯಾಜ್ಯ ಎಸೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿವೇಶನಗಳಲ್ಲಿ ಸಂಗ್ರಹವಾಗಿರುವ ಕಸ, ಕಳೆಗಿಡಗಳು ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು (C&D Waste) ಸ್ವಚ್ಛಗೊಳಿಸಿ ಸೂಕ್ತವಾಗಿ ನಿರ್ವಹಿಸುವುದು ಆಯಾ ಮಾಲೀಕರ ಕರ್ತವ್ಯವಾಗಿದೆ.

ಸ್ವಚ್ಛಗೊಳಿಸದಿದ್ದಲ್ಲಿ ಪಾಲಿಕೆಯಿಂದಲೇ ತೆರವು & ದಂಡ ವಸೂಲಿ

ನೋಟಿಸ್ ಜಾರಿಯಾದ ನಂತರ ಸಂಬಂಧಿಸಿದ ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಬೇಕು. ನಿಗದಿತ ಅವಧಿಯೊಳಗೆ ಸ್ವಚ್ಛಗೊಳಿಸದಿದ್ದಲ್ಲಿ, ಪಾಲಿಕೆಯ ವತಿಯಿಂದಲೇ ಸ್ವಚ್ಛತಾ ಕಾರ್ಯಾಚರಣೆ ನಡೆಸಿ, ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ತಗಲುವ ಸಂಪೂರ್ಣ ಸ್ವಚ್ಛತಾ ವೆಚ್ಚ ಮತ್ತು ತ್ಯಾಜ್ಯ ಸಾಗಾಣಿಕೆ ವೆಚ್ಚವನ್ನು ನಿಯಮಾನುಸಾರ ಸಂಬಂಧಪಟ್ಟ ಮಾಲೀಕರ ಆಸ್ತಿ ತೆರಿಗೆಯೊಂದಿಗೆ (Property Tax) ಸೇರಿಸಿ ವಸೂಲಿ ಮಾಡಲಾಗುವುದು.

ಖಾಲಿ ನಿವೇಶನಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಹಾಗೂ ಸಾಂಕ್ರಾಮಿಕ ರೋಗ ಹರಡುವ ಅನೈರ್ಮಲ್ಯದ ತಾಣಗಳಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಹಾಗೂ ಸುಸ್ಥಿರ ಪರಿಸರ ನಿರ್ಮಿಸಲು ಸಾರ್ವಜನಿಕರು ಮತ್ತು ನಿವೇಶನ ಮಾಲೀಕರು ಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಕೋರಿದೆ ಎಂದು ಆಯುಕ್ತರು ತಿಳಿಸಿದರು.


Share

You cannot copy content of this page