ಬೆಂಗಳೂರು: ಕೃಷಿಯ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ಷೇತ್ರಗಳಲ್ಲಿ ಜವಳಿ ಕ್ಷೇತ್ರ ಪ್ರಮುಖವಾಗಿದ್ದು, ರಾಜ್ಯದ ಜವಳಿ ರಫ್ತು ವಹಿವಾಟನ್ನು ಪ್ರಸ್ತುತ ₹25,000 ಕೋಟಿಯಿಂದ 2031ರ ವೇಳೆಗೆ ₹75,000 ಕೋಟಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ *ಎಂದು ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕರಾದ ಎ.ಬಿ. ಬಸವರಾಜು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೈಮಗ್ಗ ಮೇಳ–2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಸುಮಾರು 1.5 ಲಕ್ಷ ನೇಕಾರರು ಹಾಗೂ ಗಾರ್ಮೆಂಟ್ಸ್ ವಲಯದಲ್ಲಿ ಸುಮಾರು 8 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಜಾಗತಿಕ ಮಾರುಕಟ್ಟೆಯಲ್ಲಿ ಬಾಂಗ್ಲಾದೇಶ, ವಿಯೆಟ್ನಾಂ ಹಾಗೂ ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು ನವೀನ ತಂತ್ರಜ್ಞಾನ ಅಳವಡಿಕೆ, ಪವರ್‌ಲೂಮ್‌ಗಳ ಆಧುನೀಕರಣ ಹಾಗೂ ಕೈಮಗ್ಗ ಕ್ಷೇತ್ರದ ಸಂರಕ್ಷಣೆಗೆ ಸಮಾನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಎರಡು ಜವಳಿ ರಫ್ತು ಸೌಲಭ್ಯ ಕೇಂದ್ರ:
ರಾಜ್ಯದ ಜವಳಿ ರಫ್ತುದಾರರಿಗೆ ಅಗತ್ಯವಾದ ಮಾಹಿತಿ, ಮಾರ್ಗದರ್ಶನ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ಒಂದು ಹಾಗೂ ದೊಡ್ಡಬಳ್ಳಾಪುರದಲ್ಲಿ ಮತ್ತೊಂದು ‘ಟೆಕ್ಸ್‌ಟೈಲ್ ಎಕ್ಸ್‌ಪೋರ್ಟ್ ಫೆಸಿಲಿಟೇಶನ್ ಸೆಂಟರ್’ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಸವರಾಜು ತಿಳಿಸಿದರು.
ಎಂಟು ಜಿಲ್ಲೆಗಳಲ್ಲಿ ರಫ್ತು ಸಾಮರ್ಥ್ಯ ವೃದ್ಧಿ:
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು ಹಾಗೂ ಹಾಸನ ಜಿಲ್ಲೆಗಳನ್ನು ‘ಚಾಂಪಿಯನ್ ಡಿಸ್ಟ್ರಿಕ್ಟ್ಸ್’ ಹಾಗೂ ಬಳ್ಳಾರಿ, ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳನ್ನು ‘ಆಸ್ಪಿರೇಷನ್ ಡಿಸ್ಟ್ರಿಕ್ಟ್ಸ್’ ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳ ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ರಫ್ತು ವಿಧಾನಗಳು ಮತ್ತು ಜಾಗತಿಕ ಮಾರುಕಟ್ಟೆಯ ಅವಕಾಶಗಳ ಕುರಿತು ವಿಶೇಷ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದರು.
ನೇಕಾರರ ಕಲ್ಯಾಣಕ್ಕೆ ಆದ್ಯತೆ:
ರಾಜ್ಯ ಸರ್ಕಾರವು ಅರ್ಹ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ವಾರ್ಷಿಕ ₹5,000 ಆರ್ಥಿಕ ನೆರವು, ವಸತಿ ಸೌಲಭ್ಯ ಹಾಗೂ ವಿವಿಧ ಪ್ರೋತ್ಸಾಹಧನಗಳನ್ನು ನೀಡುತ್ತಿದೆ. ಜವಳಿ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಉತ್ತೇಜನ ನೀಡುವ ಉದ್ದೇಶದಿಂದ ನೂತನ ಜವಳಿ ನೀತಿಯ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಬೀದರ್, ದೇವನಹಳ್ಳಿಗೂ ಕೈಮಗ್ಗ ಮೇಳ ವಿಸ್ತರಣೆ:
ಬೆಂಗಳೂರಿನಲ್ಲಿ ನಡೆಯುತ್ತಿರುವ 14 ದಿನಗಳ ರಾಷ್ಟ್ರೀಯ ಕೈಮಗ್ಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬೀದರ್ ಹಾಗೂ ದೇವನಹಳ್ಳಿಯಲ್ಲೂ ಬೃಹತ್ ಕೈಮಗ್ಗ ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಬಸವರಾಜು ತಿಳಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್ ಮಾತನಾಡಿ, ದೇಶದ ವಿವಿಧ ರಾಜ್ಯಗಳು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೇಕಾರರು ತಮ್ಮ ವಿಶಿಷ್ಟ ವಿನ್ಯಾಸ, ವೈವಿಧ್ಯಮಯ ಬಣ್ಣಗಳು ಹಾಗೂ ಉತ್ತಮ ಗುಣಮಟ್ಟದ ಕೈಮಗ್ಗ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸುತ್ತಿದ್ದಾರೆ. ನೇಕಾರರ ಕಠಿಣ ಪರಿಶ್ರಮಕ್ಕೆ ಸೂಕ್ತ ಮಾರುಕಟ್ಟೆ ಮತ್ತು ಆರ್ಥಿಕ ಪ್ರತಿಫಲ ದೊರಕಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ನೇಕಾರರ ಕುಟುಂಬಗಳಿಗೆ ವಸತಿ, ಕೈಮಗ್ಗ ಉಪಕರಣಗಳಿಗೆ ವಿಶೇಷ ಸಹಾಯಧನ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಕೈಮಗ್ಗ ಪರಂಪರೆಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ ಎಂದು ಅವರು ಹೇಳಿದರು.
ಕಾವೇರಿ ಹ್ಯಾಂಡ್‌ಲೂಮ್ಸ್ ಅಧ್ಯಕ್ಷ ಬಿ.ಜೆ. ಗಣೇಶ್ ಮಾತನಾಡಿ, ಭಾರತ ಮತ್ತು ಕರ್ನಾಟಕ ಸರ್ಕಾರಗಳ ಸಹಯೋಗದಲ್ಲಿ ಕಳೆದ ಐದಾರು ವರ್ಷಗಳಿಂದ ರಾಷ್ಟ್ರೀಯ ಕೈಮಗ್ಗ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಮೇಳದಲ್ಲಿ ದೇಶದ 25ರಿಂದ 30 ರಾಜ್ಯಗಳ ನೇಕಾರರು ಹಾಗೂ ಕೈಮಗ್ಗ ಸಹಕಾರ ಸಂಘಗಳು ಭಾಗವಹಿಸಿದ್ದು, 40ರಿಂದ 50 ಮಳಿಗೆಗಳಲ್ಲಿ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. 14 ದಿನಗಳ ಈ ಮೇಳವು ನೇಕಾರರಿಗೆ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಪ್ರಮುಖ ವೇದಿಕೆಯಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ಕೈಮಗ್ಗವು ಭಾರತೀಯ ಜವಳಿ ಕ್ಷೇತ್ರದ ಮೂಲ ಪರಂಪರೆಯಾಗಿದ್ದು, ದೇಶದ ಲಕ್ಷಾಂತರ ನೇಕಾರ ಕುಟುಂಬಗಳ ಜೀವನಾಧಾರವಾಗಿದೆ. ಕೈಮಗ್ಗ ಉತ್ಪನ್ನಗಳನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರ ಜೊತೆಗೆ ಸಾಮಾಜಿಕ ಜಾಲತಾಣ, ಯೂಟ್ಯೂಬ್ ಹಾಗೂ ಆನ್‌ಲೈನ್ ಮಾರುಕಟ್ಟೆಯ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಕರೆ ನೀಡಿದರು.
ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಕರ್ನಾಟಕದ ಜವಳಿ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಬಲವಾದ ಪರಂಪರೆಯಿದೆ. ಖಾದಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ನಿರಂತರ ಪ್ರಚಾರ ಹಾಗೂ ಸಾರ್ವಜನಿಕ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಚೇತನ್ ಕೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ಸಾರ್, ಹ್ಯಾಂಡ್‌ಲೂಮ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ, ಕೈಮಗ್ಗ ಮತ್ತು ಜವಳಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಸಿ.ಎಸ್. ಯೋಗೇಶ್, ಶ್ರೀಧರ್ ನಾಯಕ್, ಕಾವೇರಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ನೇಕಾರರು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.
