ಸಮಗ್ರ ಸುದ್ದಿ

ಅರಮನೆ ಅಂಗಳಕ್ಕೆ ಗಜಪಡೆ ಪದಾರ್ಪಣೆ, ಅದ್ಧೂರಿ ಪೂಜೆಯೊಂದಿಗೆ ಸ್ವಾಗತ ಕೋರಿದ – ಡಾ. ಯತೀಂದ್ರ ಸಿದ್ದರಾಮಯ್ಯ

Share

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026 ರ ಅಂಗವಾಗಿ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಗಜಪಡೆಯು ಇಂದು ಮೈಸೂರು ಅರಮನೆಯ ಅಂಗಳಕ್ಕೆ ಆಗಮಿಸಿದ್ದು, ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಕಲ ಗೌರವಗಳೊಂದಿಗೆ ಅಧಿಕೃತವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ನಾಡಹಬ್ಬ ಮೈಸೂರು ದಸರಾ ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆ. ಈ ಬಾರಿಯ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ಸಾಂಸ್ಕೃತಿಕ ವೈಭವದಿಂದ ಆಚರಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಕ್ಯಾಂಪ್‌ಗಳಿಂದ ಆಗಮಿಸಿರುವ ಗಜಪಡೆಯ ಆರೈಕೆ, ತರಬೇತಿ ಹಾಗೂ ಭದ್ರತೆಗೆ ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯ ಹಬ್ಬವು ನಾಡಿನ ಜನತೆಗೆ ಸಮೃದ್ಧಿ ಹಾಗೂ ಸಂತಸ ತರಲಿ ಎಂದು ಶುಭ ಹಾರೈಸಿದರು.

ಅರಮನೆ ತಲುಪಿದ ಆನೆಗಳಿಗೆ ಪುಷ್ಪವೃಷ್ಟಿ ಗೆರೆದು, ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಸ್ವಾಗತಿಸಲಾಯಿತು. ಇಂದಿನಿಂದ ಗಜಪಡೆಗೆ ಅರಮನೆ ಆವರಣದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಯ ವಿಶೇಷ ತರಬೇತಿ ಮತ್ತು ಪೌಷ್ಟಿಕ ಆಹಾರ ನೀಡುವ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿ.ಟಿ. ದೇವೇಗೌಡ, ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ರಘು ಕೌಟಿಲ್ಯ, ಸಿ.ಎನ್. ಮಂಜೇಗೌಡ, ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಡಾ. ಪುಷ್ಪಾ ಅಮರನಾಥ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Share

You cannot copy content of this page