ಬೆಂಗಳೂರು: ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮೂಡದೆ ಬೆಂಗಳೂರು ನಗರದ ಪ್ರಮುಖ ಸಮಸ್ಯೆಯಾದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹುಡುಕುವುದು ಅಸಾಧ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಅಮೂಲ್ಯ ಸಲಹೆ-ಸೂಚನೆಗಳನ್ನು ಪಡೆಯುವ ಉದ್ದೇಶದಿಂದ ಮಾಜಿ ಮಹಾಪೌರರುಗಳ ಜೊತೆ ಸೋಮವಾರ ವಿಕಾಸಸೌಧದ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು.
ನಗರದ ಪ್ರಮುಖ ಸಮಸ್ಯೆಗಳಿಗೆ ಪರಿಹಾರೋಪಾಯ ವಿಷಯದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರು, ನಗರದ ಪ್ರಮುಖ ಸಮಸ್ಯೆಗಳ ಪೈಕಿ ಟ್ರಾಫಿಕ್ ಸಮಸ್ಯೆಗೆ ಅಗ್ರಸ್ಥಾನ ಇದೆ. ಈ ಸಮಸ್ಯೆಯನ್ನುಈಗ ಬಿಗಿ ಮಾಡದಿದ್ದರೆ, ಭವಿಷ್ಯದಲ್ಲಿ ಪರಿಹಾರ ಹುಡುಕಲಾಗದಷ್ಟು ಉಲ್ಬಣಿಸಲಿದೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.
ಎಲ್ಲಾ ಸರ್ಕಾರಗಳೂ ಬೆಂಗಳೂರಿನಲ್ಲಿ ನಿರಂತರವಾಗಿ ರಸ್ತೆ ನಿರ್ಮಾಣ ಕಾರ್ಯ ನಡೆಸಿವೆ. ಆದರೆ, ಹೀಗೆ ನಿರ್ಮಾಣಗೊಳ್ಳುವ ರಸ್ತೆಗಳ ಪೈಕಿ ಶೇ. 60 ರಷ್ಟು ರಸ್ತೆ ಪಾರ್ಕಿಂಗ್ ಗೆ ಹೋಗುತ್ತಿದೆ. ಸಣ್ಣ ರಸ್ತೆಗಳಲ್ಲೂ ಸಹ ಸಾರ್ವಜನಿಕರು ಎರಡೂ ಕಡೆ ವಾಹನ ಪಾರ್ಕಿಂಗ್ ಮಾಡುತ್ತಾರೆ. ಪರಿಣಾಮ ವಾಹನಗಳು ನಿರಂತರ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ. ಹೀಗಾಗಿ ಯಾವುದೇ ಸರ್ಕಾರ ಬರಲಿ ರಸ್ತೆ ನಿರ್ಮಿಸಿಯೂ ಜನರಿಂದ ಬೈಸಿಕೊಳ್ಳುವುದು ಮಾತ್ರ ತಪ್ಪುವುದಿಲ್ಲ ಎಂದು ವಿಷಾದಿಸಿದರು.
ರಸ್ತೆಗಳಲ್ಲಿ ಶಿಸ್ತುಬದ್ಧ ವಾಹನ ನಿಲುಗಡೆಯನ್ನು ಸಾಧ್ಯವಾಗಿಸಿದರೆ, ಜನರಿಗೆ ಟ್ರಾಫಿಕ್ ಕಿರಿಕಿರಿ ಸಾಕಷ್ಟು ತಪ್ಪುತ್ತದೆ. 2 ಕಿ.ಮೀ ದೂರದವರೆಗಿನ ಕೆಲಸಕ್ಕೆ ಜನ ಫುಟ್ಪಾತ್ನಲ್ಲಿ ಓಡಾಡುವಂತೆ ಮೈಕ್ರೋ ಮೊಬಿಲಿಟಿ ಕೆಲಸ ಮಾಡಬೇಕು. ಆದರೆ, ಅಲ್ಲಿಯೂ ಸಮಸ್ಯೆಯಿದೆ. ಪ್ರಸ್ತುತ ಪಾದಚಾರಿ ಮಾರ್ಗ ತೆರುವುಗೊಳಿಸುತ್ತಿದ್ದೇವೆ. ಪಾರ್ಕಿಂಗ್ ರೆಗ್ಯುಲೇಷನ್ ಮಾಡದೆ, ಮೈಕ್ರೋ ಮೊಬಿಲಿಟಿ ಸಾಧ್ಯವಿಲ್ಲ. ಹೀಗಾಗಿ ಜನ ಸಾಮಾನ್ಯರು ಪಾರ್ಕಿಂಗ್ ವಿಚಾರದಲ್ಲಿ ಶಿಸ್ತು ಪಾಲಿಸುವಂತೆ ನೋಡಿಕೊಳ್ಳಬೇಕಿದೆ. ಈ ಕೆಲಸಕ್ಕೆ ಪಾಲಿಕೆ ಹಾಗೂ ಪೊಲೀಸ್ ಗಳಿಂದ ಮಾಡಿಸಬೇಕಾದರೆ ಹೆಚ್ಚು ಸಿಬ್ಬಂದಿಬೇಕು. ನಮ್ಮಲ್ಲಿ ಅಷ್ಟು ಸಂಖ್ಯೆಯ ಸಿಬ್ಬಂದಿ ಇಲ್ಲದ ಕಾರಣ ಆ ಕೆಲಸಕ್ಕೆಂದು ಏಜೆನ್ಸಿ ನಿಯೋಜಿಸಿ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಎಲ್ಲರೂ ಸೇರಿ ಕಟ್ಟಡ ನಿರ್ಮಾಣದಲ್ಲೂ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿದ್ದೇವೆ. ಬೇರೆ ಕಡೆ ಅನುಮತಿಯಿಲ್ಲದೆ ಕಟ್ಟಡ ನಿರ್ಮಾಣ ಸಾಧ್ಯವೇ ಇಲ್ಲ. ಆದರೆ ನಗರದಲ್ಲಿ ಯಾರೂ ನಿಯಮಗಳನ್ನು ಪಾಲಿಸುವುದೇ ಇಲ್ಲ, ಸೀವೇಜ್ ಲೈನ್ ಬದಲಿಸುವುದಿಲ್ಲ, ಮನೆಯಲ್ಲಿ ಯಾರೂ ಪಾರ್ಕಿಂಗ್ ಗಾಗಿ ಜಾಗ ಬಿಟ್ಟುಕೊಳ್ಳುವುದಿಲ್ಲ. ಆದರೆ, ಇಂತಹ ವರ್ತನೆಯನ್ನು ಇನ್ನೂ ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ. ಹೀಗಾಗಿ ಕಾನೂನು ಬಿಗಿಗೊಳಿಸುವುದು ಅನಿವಾರ್ಯ ಎಂದು ಮನವರಿಕೆ ಮಾಡಿಕೊಟ್ಟರು.
ಇದಲ್ಲದೆ, ನಗರದ ಮತ್ತೊಂದು ಪ್ರಮುಖ ಸಮಸ್ಯೆಯಾದ ಕಸ ವಿಲೇವಾರಿಗೆ ಸಂಬಂಧಿಸಿ ಈಗಾಗಲೇ ಸಿ&ಡಿ ತ್ಯಾಜ್ಯ ತೆರವುಗೊಳಿಸುವ ಎಲ್ಲಾ ವಾಹನಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಕಡ್ಡಾಯವಾಗಿ ಜಿಪಿಎಸ್ ಇರಬೇಕು. ಕಸವನ್ನು ನಿಗದಿತ ಘಟಕದಲ್ಲೇ ಸುರಿಯಬೇಕು ಎಂಬ ವಿಚಾರವನ್ನು ಕಡ್ಡಾಯಗೊಳಿಸಿ, ಅದಕ್ಕೆಂದು 5 ಕಡೆ ಜಾಗ ಗುರುತಿಸಿ ನಿಯಮ ಪಾಲಿಸುವಂತೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡರು ಮಾಜಿ ಮಹಾಪೌರರಿಗೆ ಮಾಹಿತಿ ನೀಡಿದರು.
-ಸಭೆಯಲ್ಲಿ ಮಾಜಿ ಮಹಾಪೌರರು ನೀಡಿದ ಪ್ರಮುಖ ಸಲಹೆಗಳು:
•ಎಲ್ಲಾ ಕಡೆಯೂ ರುದ್ರಭೂಮಿಗಳ ಅಭಿವೃದ್ಧಿ ಆಗಬೇಕಿದೆ.
•ರಸ್ತೆ ಗುಂಡಿಗಳನ್ನು ವೈಜ್ಙಾನಿಕವಾಗಿ ಮುಚ್ಚವ ಕೆಲಸವಾಗಬೇಕು.
•ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸಬೇಕು.
•2000 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಬೃಹತ್ ನೀರುಗಾಲುವೆಗಳ ಅಭಿವೃದ್ಧಿ ಕಾರ್ಯ ತ್ವರಿತವಾಗಿ ಸಮರ್ಪಕವಾಗಿ ಆಗಬೇಕು.
•ಬಫರ್ ರಸ್ತೆ(ಸಂಚಾರಯುಕ್ತ) ರಸ್ತೆಗಳನ್ನು ನಿರ್ಮಿಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅದಕ್ಕೆ ಹೆಚ್ಚು ಆದ್ಯತೆ ನೀಡಬೇಕು.
•ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು.
•ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಬೇಕು.
•ಡಾಂಬರೀಕರಣಕ್ಕೆ ಗುತ್ತಿಗೆದಾರರ ಮೇಲೆ ಅವಲಂಭಿತರಾಗದೇ, ಪಾಲಿಕೆಗೆ ಒಂದು ಡಾಂಬರು ಘಟಕ ನಿರ್ಮಾಣ ಮಾಡಬೇಕು.
•ಮೇಲ್ಸೇತುವೆಗಳ ನಿರ್ವಹಣೆ ಸರಿಯಾಗಿ ಆಗಬೇಕು.
•ರಸ್ತೆ ಬದಿ ತ್ಯಾಜ್ಯ ಬಿಸಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಎಲ್ಲಿಯೂ ಕಸ ಬಿಸಾಡದಂತೆ ಕ್ರಮ ಕೈಗೊಳ್ಳಬೇಕು.
•ಹಳೆಯ ಮೇಲ್ಸೇತುವೆಗಳ ಬೇರಿಂಗ್ಸ್ ಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
•ಒಮ್ಮೆ ಬಳಸುವ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸುವ ಕೆಲಸವಾಗಬೇಕು.
•ತಿಂಗಳಿಗೊಮ್ಮೆ ಇ-ಖಾತಾ ಮೇಳ ಮಾಡಿ, ಇದರಿಂದ ಪಾಲಿಕೆ ಹೆಚ್ಚು ಆಸ್ತಿ ತೆರಿಗೆ ಬರಲಿದೆ.
•ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಜಲಮಂಡಳಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅದರ ಮೇಲೆ ಹೆಚ್ಚು ಗಮನ ನೀಡಿ ಸರಿಪಡಿಸುವ ಕೆಲಸ ಮಾಡಬೇಕು.
•ಅನಧಿಕೃತವಾಗಿ ರಸ್ತೆಗಳನ್ನು ಕತ್ತರಿಸುವುದನ್ನು ಇಲಾಖೆಗಳ ಸಮನ್ವಯದೊಂದಿಗೆ ನಿಯಂತ್ರಿಸುವ ಕೆಲಸ ಮಾಡಬೇಕು.
•ನಗರದಲ್ಲಿ ಸಾಮಾನ್ಯ ಸಮಸ್ಯೆಗಳಾದ ಗುಂಡಿ ಮುಚ್ಚುವುದು, ವಿದ್ಯುತ್ ದೀಪಗಳ ದುರಸ್ತಿ, ಕಸದ ಸಮಸ್ಯೆ, ಪಾರ್ಕ್ ನಿರ್ವಹಣೆ ಮೇಲೆ ಸರಿಯಾಗಿ ಕೆಲಸ ಮಾಡಿ ಬಗೆಹರಿಸುವ ಕೆಲಸ ಮಾಡಬೇಕು.
•ಕಲ್ಯಾಣ ಕಾರ್ಯಕ್ರಮಗಳಡಿ ಒಂಟಿ ಮನೆ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು.
•ಮರಗಳ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ ಸರಿಯಾಗಿ ಮಾಡಬೇಕು.
•ಪಾರ್ಕ್ ಗಳಲ್ಲಿರುವ ಆಟಿಕೆಗಳನ್ನು ಬದಲಿಸುವ ಕೆಲಸ ಮಾಡಬೇಕು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಎಂ, ಮಾಜಿ ಮಹಾಪೌರರಾದ ಜೆ. ಹುಚ್ಚಪ್ಪ, ಎಂ. ರಾಮಚಂದ್ರಪ್ಪ, ಶ್ರೀಮತಿ ಮುಮ್ತಾಜ್ ಬೇಗಂ, ಕೆ. ಚಂದ್ರಶೇಖರ್, ಎಸ್.ಕೆ. ನಟರಾಜ್, ಡಿ. ವೆಂಕಟೇಶ್ ಮೂರ್ತಿ, ಬಿ.ಎಸ್. ಸತ್ಯನಾರಾಯಣ, ಶ್ರೀಮತಿ ಶಾಂತಕುಮಾರಿ, ಮಂಜುನಾಥ್ ರೆಡ್ಡಿ, ಶ್ರೀಮತಿ ಜಿ. ಪದ್ಮಾವತಿ, ಶ್ರೀ ಆರ್. ಸಂಪತ್ ರಾಜ್, ಶ್ರೀಮತಿ ಗಂಗಾಂಬಿಕೆ, ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ, ಶಿವರಾಜ್, ಅಬ್ದುಲ್ ವಾಜೀದ್, ಬಿ.ಟಿ ಶ್ರೀನಿವಾಸ ಮೂರ್ತಿ, ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
