ಸಮಗ್ರ ಸುದ್ದಿ

ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡಕ್ಕೆ ಅನ್ಯಾಯ- ಡಾ.ಪುರುಷೋತ್ತಮ ಬಿಳಿಮಲೆ | ನಿಯಮಗಳ ಪರಿಷ್ಕರಣೆಗೆ ಆಗ್ರಹ

Share

ಬೆಂಗಳೂರು: ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡ ಭಾಷೆಗೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸಲ್ಲಬೇಕಾದ ಆದ್ಯತೆಯನ್ನು ನೀಡದೆ ಅನ್ಯಾಯ ಮಾಡಲಾಗಿದೆ. ಕೂಡಲೇ ಈ ಕನ್ನಡ ವಿರೋಧಿ ಧೋರಣೆಯನ್ನು ಕೈಬಿಟ್ಟು ಕರಡು ನಿಯಮಗಳ ಕನ್ನಡ ಸ್ನೇಹಿ ತಿದ್ದುಪಡಿಗೆ ಸರ್ಕಾರವು ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ದಿನಾಂಕ: 19-08-2026ರಂದು ಸರ್ಕಾರಿ ಇಲಾಖೆಗಳ ಲಿಪಿಕ ವರ್ಗದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಈ ನಿಯಮಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಪ್ರಭುತ್ವ ಪರೀಕ್ಷೆಗೆ ಸಮಾನ ಅಂಕಗಳನ್ನು ನಿಗದಿಪಡಿಸಿರುವ ಕ್ರಮವು ಗ್ರಾಮೀಣ-ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮಾರಕವಾಗಿದೆ ಎಂದಿರುವ ಬಿಳಿಮಲೆ, ಕನ್ನಡ ನಾಡಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಪ್ರವೇಶ ಪಡೆಯುವ ಪರೀಕ್ಷೆಗಳಲ್ಲಿಯೇ ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಸ್ಥಾನವನ್ನು ನೀಡುವುದು ನ್ಯಾಯಸಮ್ಮತವಲ್ಲ ಎಂದಿದ್ದಾರೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿರುವ ಬಿಳಿಮಲೆ, ಕರಡು ನಿಯಮಗಳ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ತಲಾ 35 ಅಂಕಗಳ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗುವ ಸಾಧ್ಯತೆ ಇದೆ. ಇದು 1963ರ ಕರ್ನಾಟಕ ರಾಜಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯವು ದೊರಕಬೇಕಿದೆ ಎಂದಿರುವ ಬಿಳಿಮಲೆ, ಉದ್ದೇಶಿತ ನಿಯಮಗಳಲ್ಲಿ ಕನ್ನಡ ಭಾಷಾ ಪರೀಕ್ಷೆಗೆ 50 ಅಂಕಗಳು ಹಾಗೂ ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕಗಳನ್ನು ನಿಗದಿಪಡಿಸುವ ಮೂಲಕ ಕರಡು ನಿಯಮಗಳ ಪರಿಷ್ಕರಣೆಗೆ ಸರ್ಕಾರವು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

“ಕನ್ನಡ ನಾಡಿನ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಅಂಕ ನೀಡುವುದು ಕನ್ನಡಕ್ಕೆ ಮಾಡುವ ಅನ್ಯಾಯವಾಗಿದೆ. ಕನ್ನಡ ಭಾಷಾ ಪರೀಕ್ಷೆಗೆ 50 ಹಾಗೂ ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕ ನಿಗದಿಪಡಿಸಿ ಕನ್ನಡಕ್ಕೆ ಅದರ ನ್ಯಾಯಸಮ್ಮತವಾದ ಪ್ರಥಮ ಪ್ರಾಶಸ್ತ್ಯವನ್ನು ಸರ್ಕಾರ ನೀಡಬೇಕು.”*
ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ


Share

You cannot copy content of this page