ಸೊರಬ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಸುಮಾರು ₹400 ಕೋಟಿ ಹರಿದುಬಂದಿದ್ದು, ಇದು ಒಂದು ರೀತಿಯಲ್ಲಿ ಜನತಾ ಅಭಿವೃದ್ಧಿಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರೂ ಆದ ಶ್ರೀ ಮಧು ಬಂಗಾರಪ್ಪ ಹೇಳಿದರು.
ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಮನೆಗಳಿಗೆ ತಿಂಗಳಿಗೆ ₹5 ಸಾವಿರದವರೆಗೆ ಆರ್ಥಿಕ ಶಕ್ತಿ ತುಂಬುತ್ತಿವೆ. ಇದರಿಂದ ಜನರ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಸ್ಥಳೀಯ ಆರ್ಥಿಕತೆಯೂ ಚೇತರಿಕೆ ಕಾಣುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.
ಎರಡನೇ ಅವಧಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಸೊರಬ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಸಚಿವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮುಖಂಡರ ಸಭೆಗಳನ್ನು ನಡೆಸುತ್ತಿದ್ದಾರೆ. ಸೊರಬ ಪ್ರವಾಸಿ ಮಂದಿರದಲ್ಲಿ ಮಂಗಳವಾರ 11 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳ ಮುಖಂಡರೊಂದಿಗೆ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿಯೇ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ನನ್ನ ಕ್ಷೇತ್ರದ ಅಭಿವೃದ್ಧಿಯೂ ನನಗೆ ಮುಖ್ಯ:
“ನನ್ನ ಇಲಾಖೆ ಬಹಳ ದೊಡ್ಡದು. ಹೀಗಾಗಿ ಈ ಹಿಂದೆ ಪ್ರತಿ ಹಳ್ಳಿಗೂ ಖುದ್ದಾಗಿ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸದಿಂದ ನಮ್ಮ ಪಕ್ಷ ನನ್ನನ್ನು ಗುರುತಿಸಿ ಮತ್ತೆ ಸಚಿವ ಸ್ಥಾನ ನೀಡಿದೆ. ನನ್ನ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ. ಜವಾಬ್ದಾರಿ ಬಹಳಷ್ಟಿದೆ. ಹೀಗಾಗಿ ಒಂದೇ ಕಡೆ ಗ್ರಾಮ ಪಂಚಾಯಿತಿವಾರು ಹಳ್ಳಿಗಳ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದೇನೆ,” ಎಂದು ಮಧು ಬಂಗಾರಪ್ಪ ಹೇಳಿದರು.
ಗ್ರಾಮಗಳ ಬೂತ್ ಮಟ್ಟದ ಮುಖಂಡರೇ ತಮ್ಮ ಪಾಲಿಗೆ ಸ್ಥಳೀಯ ಶಾಸಕರಿದ್ದಂತೆ. ಅವರು ನೀಡುವ ಮನವಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪಾಲೋ ಅಪ್ ಮಾಡಿ ಕಾರ್ಯರೂಪಕ್ಕೆ ತರಬೇಕು ಎಂದು ಸೂಚಿಸಿದರು.
ಕುಡಿದು ಶಾಲೆಗೆ ಬಂದ ಶಿಕ್ಷಕನ ಅಮಾನತಿಗೆ ಸೂಚನೆ:
ಮಂಚಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ರಂಗಪ್ಪ ಅವರು ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದಾರೆ ಎಂಬ ದೂರು ಎಸ್‌ಡಿಎಂಸಿ ಅಧ್ಯಕ್ಷರಿಂದ ಸಚಿವರ ಗಮನಕ್ಕೆ ಬಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೂಡಲೇ ಶಿಕ್ಷಕನನ್ನು ಅಮಾನತುಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಾ ಅವರಿಗೆ ಸೂಚಿಸಿದರು.
11 ಗ್ರಾಮ ಪಂಚಾಯಿತಿಗಳ ಸಮಸ್ಯೆ ಆಲಿಕೆ:
ಉದ್ರಿ, ಅಂಡಿಗೆ, ಬಿಳವಾಣಿ, ಮಾವಲಿ, ಚಿಟ್ಟೂರು, ಇಂಡುವಳ್ಳಿ, ಶಿಗ್ಗಾ, ಹೆಗ್ಗೋಡು, ದೂಗೂರು, ನಿಸರಣಿ ಹಾಗೂ ಉಳವಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ-ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ರಸ್ತೆ ಅಭಿವೃದ್ಧಿ, ಚರಂಡಿ ದುರಸ್ತಿ, ಕೆರೆಗಳಿಗೆ ನೀರು, ಬಸ್ ಸೌಲಭ್ಯ, ವಿದ್ಯುತ್ ಸಂಪರ್ಕ, ಇ-ಖಾತಾ, ಸಿಸಿ ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಸಮಸ್ಯೆಗಳ ಕುರಿತು ಮನವಿಗಳನ್ನು ಸಲ್ಲಿಸಲಾಯಿತು.
ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ ಅನುದಾನ:
“ನನ್ನ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗೂ ಈವರೆಗೆ ಸುಮಾರು ₹1 ಕೋಟಿ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಅನುದಾನವನ್ನು ಇನ್ನಷ್ಟು ಹೆಚ್ಚಿಸಿ ನೀಡುತ್ತೇನೆ,” ಎಂದು ಸಚಿವರು ಭರವಸೆ ನೀಡಿದರು.
ಮುಂದಿನ ಮೂರು ತಿಂಗಳಲ್ಲಿ ಸೊರಬ ಕ್ಷೇತ್ರದ ಪ್ರತಿ ಹಳ್ಳಿಗೂ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ ಅವರು, ಸಭೆಯಲ್ಲಿ ಪ್ರಸ್ತಾಪಿಸಿರುವ ಜನರ ಸಮಸ್ಯೆಗಳು ಅಷ್ಟರೊಳಗೆ ಬಗೆಹರಿದಿರಬೇಕು ಎಂದು ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
“ನಾನು ಭರವಸೆ ನೀಡುತ್ತೇನೆ. ಇನ್ನೊಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆ ಕಾಣಲಿದೆ. ಹಳ್ಳಿಗಳ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು,” ಎಂದು ಮಧು ಬಂಗಾರಪ್ಪ ಹೇಳಿದರು.
ಜಿಲ್ಲೆಯಲ್ಲಿ ‘ಪ್ರಜಾ ಸೇವೆ’ ಕಾರ್ಯಕ್ರಮ:*
ಸೆಪ್ಟೆಂಬರ್ 5ರಿಂದ ರಾಜ್ಯದಲ್ಲಿ ಪ್ರಜಾ ಸೇವೆ ಕಾರ್ಯಕ್ರಮ ಅಸ್ತಿತ್ವಕ್ಕೆ ಬರಲಿದೆ. ಅಂದು ತಮ್ಮ ಇಲಾಖೆಯಿಂದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಅದನ್ನು ಮುಗಿಸಿದ ಬಳಿಕ ಒಂದು ವಾರದೊಳಗೆ ತಮ್ಮ ಜಿಲ್ಲೆಯಲ್ಲಿಯೂ ಪ್ರಜಾ ಸೇವೆ ಕಾರ್ಯಕ್ರಮ ನಡೆಸುವುದಾಗಿ ಸಚಿವರು ತಿಳಿಸಿದರು.
ನಂತರ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
