ಬೆಂಗಳೂರು:ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಖಚರ್ಯೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು, ಯೋಜನೆಗಳು, ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಕೌನ್ಸಿಲ್ ಸಭಾಂಗಣದಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಖಚರ್ಯೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ಪಾಲಿಕೆ ಶಾಲೆಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಸೂಚಿಸಿದರು.
ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ನಿಗದಿತ ಸಮಯದಲ್ಲಿ ವಿತರಿಸಬೇಕು. ಈ ಸಂಬಂಧ ಕೂಡಲೇ ಸಮವಸ್ತ್ರಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳೋಣ ಎಂದರು.
ಶಾಲಾ-ಕಾಲೇಜುಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿರಬೇಕು. ಈ ಸಂಬಂಧ ಸಿಎಸ್‌ಆರ್ ಅನುದಾನದ ಮೂಲಕ ಅಗತ್ಯವಿದ್ದಲ್ಲಿ ಶೌಚಾಲಯಗಳನ್ನು ನಿರ್ಮಿಸಿ, ಅವುಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ 94 ನರ್ಸರಿ, 18 ಪ್ರಾಥಮಿಕ, 36 ಪ್ರೌಢ, 21 ದ್ವಿತೀಯ, 4 ಪದವಿ ಹಾಗೂ 2 ಸ್ನಾತಕೋತ್ತರ ಸೇರಿದಂತೆ ಒಟ್ಟು 175 ಪಾಲಿಕೆ ಶಿಕ್ಷಣ ಸಂಸ್ಥೆಗಳಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ 22,210 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಾಲಿಕೆ ಶಾಲೆಗಳಲ್ಲಿ 115 ಖಾಯಂ ಹಾಗೂ 841 ಅತಿಥಿ ಶಿಕ್ಷಕರು ಸೇರಿದಂತೆ ಒಟ್ಟು 956 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಶೇಷ ಆಯುಕ್ತರು ಮಾಹಿತಿ ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿಗೆ ವೇಗ ನೀಡಿ:
ನಗರದಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ 120.60 ಕಿ.ಮೀ. ಉದ್ದದ 117 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಪೈಕಿ 61.43 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ 59.26 ಕಿ.ಮೀ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.
ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಯಾಗಿ ಎತ್ತರಿಸುವ ಬದಲು, ವೀಲ್‌ಚೇರ್‌ಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಬೇಕು. ಮರಗಳ ಸುತ್ತಲೂ ಗ್ರಾಸ್ ಪೇವರ್ ಬ್ಲಾಕ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ನಿರ್ದೇಶನ ನೀಡಿದರು.
“ಹಾಳು ಮಾಡಲೆಂದೇ ಕೆಲಸ ಮಾಡುತ್ತಿದ್ದೀರಾ?”:
ಹೊರವಲಯ ರಸ್ತೆಯಲ್ಲಿ ಹೈಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳಲ್ಲಿ ಪ್ರತಿ 20 ಮೀಟರ್‌ಗೆ ಒಂದು ವಿದ್ಯುತ್ ಕಂಬ ಅಳವಡಿಸಬೇಕಿದೆ. ಆದರೆ ಹಳೆಯ ಹಾಗೂ ಹೊಸ ವಿದ್ಯುತ್ ಕಂಬಗಳನ್ನು ಒಳಗೊಂಡಂತೆ ಕೆಲವೆಡೆ 5 ರಿಂದ 10 ಮೀಟರ್‌ಗೊಮ್ಮೆ ಕಂಬಗಳನ್ನು ಅಳವಡಿಸಿರುವುದು ಕಂಡುಬಂದಿದೆ.
ಇದು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡುತ್ತಿರುವ ಕಾಮಗಾರಿಯೇ ಅಥವಾ ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಉದ್ದೇಶದಿಂದ ಮಾಡುತ್ತಿರುವ ಕಾಮಗಾರಿಯೇ ಎಂದು ಸಚಿವರು ಪ್ರಶ್ನಿಸಿದರು.
ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಸಂದರ್ಭದಲ್ಲಿ ಹಳೆಯ ಕಂಬಗಳನ್ನು ತೆರವುಗೊಳಿಸಿ, ಏಕರೂಪದ ವಿನ್ಯಾಸದ ಕಂಬಗಳನ್ನು ಅಳವಡಿಸಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, “ಬೆಂಗಳೂರು ಸುಧಾರಣೆಯಾಗಬೇಕೆಂದು ನೀವು ಕೆಲಸ ಮಾಡುತ್ತಿಲ್ಲ. ಹಾಳು ಮಾಡಲೆಂದೇ ಕೆಲಸ ಮಾಡುತ್ತಿದ್ದೀರಾ?” ಎಂದು ಬಿ-ಸ್ಮೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಿ-ಸ್ಮೈಲ್ ಕಾಮಗಾರಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ:
ಬಿ-ಸ್ಮೈಲ್ ವತಿಯಿಂದ ಕೈಗೆತ್ತಿಕೊಳ್ಳುತ್ತಿರುವ ಎಲಿವೇಟೆಡ್ ಕಾರಿಡಾರ್, ರೋಟರಿ ಮೇಲ್ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಎಲ್ಲಾ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ನೀಡಿ, ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದರು.
ಪ್ರಾಣಿಗಳ ಚಿತಾಗಾರ ಸ್ಥಾಪಿಸಲು ಕ್ರಮ ಕೈಗೊಳ್ಳಿ:
ನಗರದಲ್ಲಿ ಪ್ರಸ್ತುತ ಸಂತಾನಹರಣ ಶಸ್ತ್ರಚಿಕಿತ್ಸೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ದಿನಕ್ಕೆ ಸುಮಾರು 280 ಹಾಗೂ ತಿಂಗಳಿಗೆ 7,000 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಅದರಂತೆ ವಾರ್ಷಿಕವಾಗಿ 80,000 ಎಬಿಸಿ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗುವುದು ಎಂದು ವಿಶೇಷ ಆಯುಕ್ತರು ಮಾಹಿತಿ ನೀಡಿದರು.
ಈ ವೇಳೆ ಸಚಿವರು ಪ್ರತಿಕ್ರಿಯಿಸಿ, ನಗರದಲ್ಲಿ ಎಬಿಸಿ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಕೆನಲ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರಸ್ತುತ ಸುಮ್ಮನಹಳ್ಳಿಯಲ್ಲಿ ಮಾತ್ರ ಪ್ರಾಣಿಗಳ ಚಿತಾಗಾರವಿದ್ದು, ಉಳಿದ ಪಾಲಿಕೆಗಳಲ್ಲಿಯೂ ಪ್ರಾಣಿಗಳ ಚಿತಾಗಾರಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
“ಪಾರ್ಕ್‌ಗಳ ನಿರ್ವಹಣೆಯ ಹಣವನ್ನು ಲೂಟಿ ಮಾಡುತ್ತಿದ್ದೀರಾ?”:
ನಗರದಲ್ಲಿರುವ ಉದ್ಯಾನವನಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಲವು ಉದ್ಯಾನವನಗಳಲ್ಲಿ ಕಸ ಹಾಗೆಯೇ ಬಿದ್ದಿದ್ದು, ಸಮರ್ಪಕವಾಗಿ ಕೆಲಸ ನಿರ್ವಹಿಸದೆ ನಿರ್ವಹಣೆಯ ಹೆಸರಿನಲ್ಲಿ ಹಣ ಖರ್ಚು ಮಾಡಲಾಗುತ್ತಿದೆಯೇ ಎಂದು ಸಚಿವರು ಪ್ರಶ್ನಿಸಿದರು.
“ಹಿಂದೆ ಬೆಂಗಳೂರು ಉದ್ಯಾನವನಗಳಿಗೆ ಹೆಸರುವಾಸಿಯಾಗಿತ್ತು. ಆದರೆ ಇಂದು ಉದ್ಯಾನವನಗಳ ಸ್ಥಿತಿ ನರಳಾಡುವಂತಾಗಿದೆ. ಉದ್ಯಾನವನಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ನೀವೇ ನೇರ ಜವಾಬ್ದಾರರಾಗುತ್ತೀರಿ,” ಎಂದು ತೋಟಗಾರಿಕಾ ವಿಭಾಗದ ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುಷಮಾ ಗೋಡಬೋಲೆ, ನಿತೀಶ್, ವೆಂಕಟಾಚಲಪತಿ, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಅಪರ ಆಯುಕ್ತರು, ಜಂಟಿ ಆಯುಕ್ತರು, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಮುಖ್ಯ ನಗರ ಯೋಜಕರು, ಮುಖ್ಯ ಅಭಿಯಂತರರು, ಆರೋಗ್ಯ, ನಗರ ಯೋಜನೆ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.
