ಬಾಗಲಕೋಟೆ:ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರಿಗೆ 2-3 ಹಂತದಲ್ಲಿ ಶೀಘ್ರವೇ ಹಣ ಕೊಡಬೇಕು ಎಂಬುದು ನಮ್ಮ ಸರ್ಕಾರದ ತೀರ್ಮಾನ. ಬೇರೆ ಕೆಲವು ಯೋಜನೆ ನಿಲ್ಲಿಸಿ ಈ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ಬಾಗಲಕೋಟೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಯೋಜನೆಯ ಮುಳುಗಡೆ ಸಂತ್ರಸ್ತ ರೈತರನ್ನು ಭೇಟಿ ಮಾಡಿ ಶುಕ್ರವಾರ ಮಾತನಾಡಿದರು.
“ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯಲ್ಲಿ ಮುಳುಗಡೆಯಾಗುವ ರೈತರಿಗೆ ಪರಿಹಾರ ನೀಡುವ ಬಗ್ಗೆ ಬಹಳ ವರ್ಷಗಳಿಂದ ತೀರ್ಮಾನ ಆಗಿರಲಿಲ್ಲ. ಬೆಳಗಾವಿಯಲ್ಲಿ ನಿಮ್ಮನ್ನು ಭೇಟಿ ಮಾಡಿ ಚರ್ಚಿಸಿ ಒಂದು ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ಮಧ್ಯೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಅರ್ಜಿ ಸರಿಪಡಿಸಲು ಲಿಮಿಟೇಷನ್ ಸಮಯವನ್ನು ವಾಪಸ್ ಕಳುಹಿಸಿದ್ದಾರೆ” ಎಂದರು.
ತಕರಾರು ಪ್ರಕರಣಗಳನ್ನು ಬಗೆಹರಿಸಲು ಸಮಿತಿ ರಚನೆಗೆ ತೀರ್ಮಾನ
“ಹೊಸ ಕಾನೂನಿನಂತೆ ತಕರಾರು ಇರುವ ಪ್ರಕರಣಗಳನ್ನು ಬಗೆಹರಿಸಲು ಸಮಿತಿ ಮಾಡುವ ಹಾದಿಯಲ್ಲಿ ನಾನಿದ್ದೇನೆ. ಆದಷ್ಟು ಬೇಗ ಈ ಪ್ರಕ್ರಿಯೆ ಮಾಡಲಾಗುವುದು. ಸುಪ್ರೀಂ ಕೋರ್ಟ್ ಆದೇಶ ಹಾಗೂ ಪುನರ್ವಸತಿ ಕಾಯ್ದೆಯಲ್ಲಿ ಅವಕಾಶವಿದೆ” ಎಂದು ತಿಳಿಸಿದರು.
“ನಿಮ್ಮ ಕೋರಿಕೆಯಂತೆ ಸಂಪುಟದಲ್ಲಿ ಹಾಗೂ ಅಧಿವೇಶನದಲ್ಲಿ ತೀರ್ಮಾನ ಮಾಡಿದ್ದೇವೆ. ಆದಷ್ಟು ಬೇಗ ನಿಮ್ಮ ಜಮೀನಿಗೆ ಹಣ ನೀಡಬೇಕು ಎನ್ನುವುದು ನಮ್ಮ ಸರ್ಕಾರದ ಚಿಂತನೆ. ಆರ್ಥಿಕ ಪರಿಸ್ಥಿತಿ ನಿಮಗೆ ಗೊತ್ತಿದೆ. ನಾವು ತೀರ್ಮಾನ ಮಾಡುವ ಮುನ್ನ ಬಜೆಟ್ ಮಂಡನೆ ಆಗಿತ್ತು” ಎಂದರು.
“ಪ್ರಧಾನಮಂತ್ರಿಗಳು, ಗೃಹ ಸಚಿವರು ಹಾಗೂ ಕೇಂದ್ರದ ಮಂತ್ರಿಗಳ ಜೊತೆ ಈ ಯೋಜನೆಗೆ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಿರುವೆ. ಕೆಲವು ಭಾಗದಲ್ಲಿ ಕೆಲಸ ಆರಂಭವಾಗಿದೆ. ಜೆ ಟಿ ಪಾಟೀಲ್ ಅವರ ಕ್ಷೇತ್ರದಲ್ಲಿ ಹೆಚ್ಚು ಜಮೀನು ಹೋಗಿದೆ. ಈ ಭಾಗದ ಜನರಿಗೆ ಬೇಗ ಹಣ ಒದಗಿಸಬೇಕು” ಎಂದು ತಿಳಿಸಿದರು.
ಬಿಜೆಪಿ ನಾಯಕರು ಸಹಕಾರ ನೀಡುತ್ತಾರೋ ಇಲ್ಲವೋ ನಾನು ಪ್ರಯತ್ನ ಮಾಡುತ್ತಿರುವೆ
“ಮೊನ್ನೆ ನಡೆದ ಅಧಿವೇಶನದಲ್ಲಿ ವಿರೋಧ ಪಕ್ಷದವರು ಹೆಚ್ಚುವರಿ ಬಜೆಟ್ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ. ಎಲ್ಲಿ ಅನುದಾನ ಉಳಿಸಿ, ಎಲ್ಲಿ ಅನುದಾನ ಹೆಚ್ಚಿಸಬೇಕು ಎಂದು ಚರ್ಚೆ ಮಾಡಲಿಲ್ಲ. ಅಧಿಸೂಚನೆ ಆಗಬೇಕು, ಆಣೆಕಟ್ಟು ಎತ್ತರ ಮಾಡಬೇಕು. ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ. ಈ ಯೋಜನೆಗೆ ಬಿಜೆಪಿ ನಾಯಕರು ಸಹಕಾರ ನೀಡುತ್ತಾರೋ ಇಲ್ಲವೋ ನಾನು ಪ್ರಯತ್ನ ಮಾಡುತ್ತಿರುವೆ” ಎಂದು ವಿವರಿಸಿದರು.
ಬೊಮ್ಮಯಿ, ಶೆಟ್ಟರ್, ಜೋಶಿ ಧ್ವನಿ ಕಳೆದುಕೊಂಡಿದ್ದಾರೆ
“ಮಹದಾಯಿ ವಿಚಾರದಲ್ಲಿ ನಿಮಗೆ ಗೊತ್ತಿರುವಂತೆ ತೀರ್ಪು ಬಂದಿದೆ. ಟೆಂಡರ್ ಕರೆಯಲಾಗಿದೆ. ಆದರೂ ಒಂದು ರಾಜ್ಯದ ತಗಾದೆ ಮಾಡುತ್ತಿದೆ. ನಮ್ಮ 28 ಸಂಸದರ ಪೈಕಿ 20 ಸಂಸದರು ಎನ್ಡಿಎದವರೇ ಇದ್ದಾರೆ. ಆದರೂ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಬೊಮ್ಮಯಿ, ಶೆಟ್ಟರ್, ಜೋಶಿ ಧ್ವನಿ ಕಳೆದುಕೊಂಡಿದ್ದಾರೆ. ಅವರ ಸಮಸ್ಯೆ ಏನು ಎಂದು ಅರ್ಥವಾಗುತ್ತಿಲ್ಲ. ನಾನು ಹೋಗಿ ಭೇಟಿ ಮಾಡಿದಾಗೆಲ್ಲ ಮಾಡುತ್ತೇವೆ ಎನ್ನುತ್ತಲೇ ಇದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಕೇವಲ ರಾಜಕೀಯ ಮಾಡುತ್ತಿದೆ
“ನಮ್ಮ ಅಧಿಕಾರಿಗಳು ಅಧಿಸೂಚನೆ ಹೊರಡಿಸಿ, ಆಮೇಲೆ ಏನಾದರೂ ವ್ಯವಸ್ಥೆ ಮಾಡೋಣ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ಸದನದಲ್ಲಿ ಚರ್ಚೆ ಮಾಡದೇ ಕೇವಲ ನಾಗೇಂದ್ರ, ರಾಜೀನಾಮೆ ಎಂದು ರಾಜಕೀಯ ಮಾಡುತ್ತಿದ್ದಾರೆ. ನಾಗೇಂದ್ರ ರಾಜೀನಾಮೆ ಕೊಟ್ಟರೂ ಪಾದಯಾತ್ರೆ ಮಾಡುತ್ತಿದ್ದಾರೆ. ಈಗ ಸಾಲ ಮನ್ನಾ ಮಾಡಿ ಎಂದು ಹೇಳುತ್ತಿದ್ದಾರೆ. ಮನಮೋಹನ್ ಸಿಂಗ್ ಸಾಲ ಮನ್ನಾ ಮಾಡಲಿಲ್ಲವೇ. ಇವರು ಮಾಡಿದ್ದಾರಾ?” ಎಂದು ಪ್ರಶ್ನಿಸಿದರು.
“ನಾವು ರಾಜ್ಯದ ಜನರಿಗೆ 52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ರೈತರ ಸಮಸ್ಯೆ ಬಗ್ಗೆ ಚರ್ಚೆಗೆ 3 ದಿನ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಯೋಜನೆ ನನ್ನ ಆದ್ಯತೆಯಾಗಿದೆ. ಈ ಬಗ್ಗೆ ಜಿಲ್ಲೆಯ ಶಾಸಕರು, ಸಚಿವರು ಒತ್ತಾಯ ಮಾಡುತ್ತಿದ್ದಾರೆ. ಈ ಯೋಜನೆ ಜೊತೆಗೆ ಎತ್ತಿನಹೊಳೆ ಅರ್ಧ ಪೂರ್ಣಗೊಂಡಿದ್ದು, 2027ರ ಒಳಗೆ ನೀರು ಹರಿಸಬೇಕು. ನಮ್ಮ ಬಜೆಟ್ ನಲ್ಲಿ ನೀರಾವರಿ ಇಲಾಖೆಗೆ 16 ಸಾವಿರ ಕೋಟಿ ರೂ ಮಾತ್ರ ಇದೆ. ಇಲಾಖೆ ಸಿಬ್ಬಂದಿ ವೇತನ, ಹಳೇ ಬಿಲ್ ಗಳಿಗೆ ಸಾಕಾಗುತ್ತದೆ. ಯಡಿಯೂರಪ್ಪ ಸರ್ಕಾರ ಒಂದು ಲಕ್ಷ ಕೋಟಿ ಮೊತ್ತದ ಕೆಲಸ ಕೊಟ್ಟಿದ್ದಾರೆ” ಎಂದು ವಿವರಿಸಿದರು.
ನಿಮ್ಮ ನೋವು ಅರ್ಥವಾಗುತ್ತದೆ, ನನ್ನ ಮೇಲೆ ವಿಶ್ವಾಸವಿಡಿ
“ನಿಮಗೆ ನೀಡಿರುವ ಮಾತು ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ. ಹೀಗಾಗಿ ಯೋಜನೆಗೆ ಹೇಗೆ ಹಣ ಹೊಂದಿಸುವುದೆಂದು ಆಲೋಚನೆ ಮಾಡಲಾಗಿದೆ. ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಬೇಕು. ತಾಳ್ಮೆಯಿಂದ ಇರಿ. ಇದಕ್ಕೆ ಒಂದು ರೂಪ ನೀಡಿ ಬಗೆಹರಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ, ನಾನು ಜಮೀನು ಕಳೆದುಕೊಂಡಿದ್ದೇನೆ. ನಿಮ್ಮ ನೋವು ಅರ್ಥವಾಗುತ್ತದೆ. ನಾವೆಲ್ಲರೂ ಒಂದೇ ಕುಟುಂಬ” ಎಂದು ಭರವಸೆ ನೀಡಿದರು.
