ಸಮಗ್ರ ಸುದ್ದಿ

180-200 ತಾಲೂಕು ಬರಪೀಡಿತ ಘೋಷಣೆ ಸಾಧ್ಯತೆ : ಈಶ್ವರ ಖಂಡ್ರೆ

Share

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಎಲ್ ನಿನೋ ಪ್ರಭಾವದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಈ ಮಾಸಾಂತ್ಯದ ವೇಳೆಗೆ 180ರಿಂದ 200 ತಾಲೂಕು ಬರಪೀಡಿತ ಎಂದು ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 101 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಶೀಘ್ರವೇ 24 ಬ್ಲಾಕ್ ಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ಧತೆ ನಡೆದಿದೆ. ಮಾಸಾಂತ್ಯಕ್ಕೆ ನಡೆಯುವ ಮತ್ತೊಂದು ಗ್ರೌಂಡ್ ಟ್ರೂಥಿಂಗ್ ನಲ್ಲಿ ಈ ಸಂಖ್ಯೆ ಹೆಚ್ಚಳವಾಗಿ 180ರಿಂದ 200 ತಲುಪಲಿದೆ ಎಂದರು.

ತಾವು ರಾಜ್ಯದಲ್ಲಿ 2026ರ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರ ನೈಸರ್ಗಿಕ ವಿಕೋಪ ಪರಿಸ್ಥಿತಿಗಳ ಪರಾಮರ್ಶೆ ಮತ್ತು ಸಮರ್ಥವಾಗಿ ನಿಭಾಯಿಲು ನೀತಿ ನಿರೂಪಣೆ ಹಾಗೂ ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸುವ ಕುರಿತಂತೆ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟದ ಉಪ ಸಮಿತಿಯ ಸದಸ್ಯನಾಗಿದ್ದು, ಮೊನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ ಎಂದರು.
ಎನ್.ಡಿ.ಆರ್.ಎಫ್. ನಿಂದ ಒಣಭೂಮಿ ಮತ್ತು ನೀರಾವರಿ ಭೂಮಿಗೆ ಪರಿಹಾರವನ್ನು ನೀಡಲಾಗುತ್ತದೆ. ಇದರ ಜೊತೆಗೆ ರಾಜ್ಯದಲ್ಲಿ ತೀವ್ರ ಬೆಳೆ ಹಾನಿ ಆಗಿರುವ ಪ್ರದೇಶಕ್ಕೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಪ್ರಸ್ತುತ ಬರಪೀಡಿತ ಎಂದು ಘೋಷಿಸಲಾಗಿರುವ 101 ಬ್ಲಾಕ್ ಗಳಿಗೆ 2600 ಕೋಟಿ ರೂ. ಕೊಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ ಎಂದೂ ಈಶ್ವರ ಖಂಡ್ರೆ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.

ರಾಜ್ಯದ ಬಿಜೆಪಿ ಸಂಸತ್ ಸದಸ್ಯರು ಮತ್ತು ನಾಯಕರು ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ರೈತರಿಗೆ ನೆರವಾಗಲು ಕೇಂದ್ರದ ಮೇಲೆ ಒತ್ತಡ ತಂದು ಹಣಕೊಡಿಸುವ ಕಾರ್ಯ ಮಾಡಬೇಕು ಅದು ಬಿಟ್ಟು ಅವರು ನೃತ್ಯ ಮಾಡುತ್ತಾ ಪಾದಯಾತ್ರೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ ಎಂದು ದೂಷಿಸಿದರು.


Share

You cannot copy content of this page