ಬೆಂಗಳೂರು:ಸ್ಚಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ, ಜಯಂತಿನಗರ, ರಾಮಮೂರ್ತಿನಗರ ಹಾಗೂ ಕಸ್ತೂರಿನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಮುಂಜಾನೆಯೇ ಅನಿರೀಕ್ಷಿತ ಭೇಟಿ ನೀಡಿದ ಸಚಿವರು, ಸ್ವಚ್ಛತೆ, ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆ, ರಾಜಕಾಲುವೆ, ಕೆರೆಗಳು, ವಿವಿಧ ಮೂಲಸೌಕರ್ಯ ಕಾಮಗಾರಿಗಳು ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸ್ಥಳೀಯ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ವ್ಯವಸ್ಥೆ, ಪೌರಕಾರ್ಮಿಕರು ಹಾಗೂ ಮಾರ್ಷಲ್‌ಗಳ ಕರ್ತವ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡ ಅವರು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸಿ:
ಹೊರಮಾವಿನ ಗಾಂಧಿ ಸರ್ಕಲ್‌ಗೆ ಭೇಟಿ ನೀಡಿದ ಸಚಿವರು, ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ವಿಧಾನ ಹಾಗೂ ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪೌರಕಾರ್ಮಿಕರು ಪ್ರತಿನಿತ್ಯ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದಾರೆಯೇ ಹಾಗೂ ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ಮಾರ್ಷಲ್‌ಗಳ ಕಾರ್ಯವೈಖರಿ ಹಾಗೂ ಕರ್ತವ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯದಂತೆ ನಿರಂತರ ನಿಗಾ ವಹಿಸುವಂತೆ ನಿರ್ದೇಶನ ನೀಡಿದರು.
ರಸ್ತೆ ಬದಿ, ಪಾದಚಾರಿ ಮಾರ್ಗ ಹಾಗೂ ಸ್ಲ್ಯಾಬ್‌ಗಳ ಮೇಲೆ ಬಿದ್ದಿರುವ ನಿರ್ಮಾಣ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ:
ಹೊರಮಾವು ವಾರ್ಡ್‌ನ ಬಂಜಾರ ಲೇಔಟ್‌ಗೆ ಭೇಟಿ ನೀಡಿದ ಸಚಿವರು, ಮನೆ-ಮನೆಯಿಂದ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಣೆ ಮಾಡುವ ವ್ಯವಸ್ಥೆ ಹಾಗೂ ಪೌರಕಾರ್ಮಿಕರ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಪ್ರತಿ ಮನೆಯಿಂದ ನಿಗದಿತ ಸಮಯದಲ್ಲಿ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಣೆ ಮಾಡಬೇಕು. ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬರದಂತೆ ಸಂಬಂಧಪಟ್ಟ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.
ವಾರ್ಡ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಎ.ಜಿ.ಎಂ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಗರ ಕೆರೆಯ ಸ್ವಚ್ಛತೆ ಹಾಗೂ ನಿರ್ವಹಣೆಗೆ ಆದ್ಯತೆ ನೀಡಿ:
ಹೊರಮಾವು ವಾರ್ಡ್‌ನ ಅಗರ ಕೆರೆಗೆ ಭೇಟಿ ನೀಡಿದ ಸಚಿವರು, ಕೆರೆಯ ಸುತ್ತಮುತ್ತಲಿನ ಸ್ವಚ್ಛತೆ ಹಾಗೂ ನಿರ್ವಹಣೆಯ ಸ್ಥಿತಿಗತಿಯನ್ನು ಅವಲೋಕಿಸಿದರು.
ಕೆರೆಯ ಸುತ್ತಮುತ್ತ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಿ, ನಿರಂತರವಾಗಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಯ ಹೊರಭಾಗದಲ್ಲಿರುವ ಬೆಸ್ಕಾಂನ ವಿದ್ಯುತ್ ಪ್ಯಾನಲ್‌ಗಳನ್ನು ವೀಕ್ಷಿಸಿದ ಅವರು, ಸಾರ್ವಜನಿಕರಿಗೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ಅವುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒತ್ತುವರಿ ನಡೆದಿರುವ ಕುರಿತು ಮಾಹಿತಿ ಪಡೆದು, ಒತ್ತುವರಿ ಕಂಡುಬಂದಲ್ಲಿ ನಿಯಮಾನುಸಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಸೂಚನೆ:
ಅಗರ ಕೆರೆಯ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ನಡೆದಿರುವ ಒತ್ತುವರಿ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು.
ಪಾದಚಾರಿಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಿ, ಅವುಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಕತ್ತರಿಸಿರುವ ಹಾಗೂ ರಸ್ತೆ ಗುಂಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಿ:
ಹೊರಮಾವು ವಾರ್ಡ್‌ನ ಜಯಂತಿನಗರ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಜಲಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು, ರಸ್ತೆ ಕತ್ತರಿಸಿರುವ ಸ್ಥಳಗಳು ಹಾಗೂ ರಸ್ತೆ ಗುಂಡಿಗಳನ್ನು ಪರಿಶೀಲಿಸಿದರು.
ರಸ್ತೆ ಕತ್ತರಿಸಿರುವ ಸ್ಥಳಗಳನ್ನು ಕಾಮಗಾರಿ ಪೂರ್ಣಗೊಂಡ ತಕ್ಷಣ ಸಮರ್ಪಕವಾಗಿ ಮುಚ್ಚಬೇಕು. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರಸ್ತೆಗಳಲ್ಲಿ ಕಂಡುಬರುವ ಗುಂಡಿಗಳನ್ನು ತಕ್ಷಣ ಮುಚ್ಚಿ, ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳು ಸಮನ್ವಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಿ:
ರಾಮಮೂರ್ತಿನಗರ ಮುಖ್ಯರಸ್ತೆಗೆ ಭೇಟಿ ನೀಡಿದ ಸಚಿವರು, ರೈಲ್ವೆ ನಿಲ್ದಾಣದ ಕಾಮಗಾರಿಯ ಪ್ರಗತಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕುರಿತು ಮಾಹಿತಿ ಪಡೆದುಕೊಂಡರು.
ನಿರ್ಮಾಣ ತ್ಯಾಜ್ಯ, ಮಣ್ಣು ಹಾಗೂ ಇತರ ವಸ್ತುಗಳನ್ನು ತಕ್ಷಣ ತೆರವುಗೊಳಿಸಿ, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ರೈಲ್ವೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ರಾಜಕಾಲುವೆ ನಿರ್ವಹಣೆಗೆ ಆದ್ಯತೆ ನೀಡಿ:
ರಾಮಮೂರ್ತಿನಗರ ಮುಖ್ಯರಸ್ತೆ ವ್ಯಾಪ್ತಿಯ ರಾಜಕಾಲುವೆಯನ್ನು ವೀಕ್ಷಿಸಿದ ಸಚಿವರು, ರಾಜಕಾಲುವೆಯ ಸ್ವಚ್ಛತೆ ಹಾಗೂ ನಿರ್ವಹಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ರಾಜಕಾಲುವೆಗಳಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಂಡು, ಹೂಳು ಹಾಗೂ ತ್ಯಾಜ್ಯ ಸಂಗ್ರಹವಾಗದಂತೆ ನಿರಂತರ ನಿರ್ವಹಣೆ ಮಾಡಬೇಕು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ನಿಗದಿತ ಅವಧಿಯೊಳಗೆ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೆಟ್ರೋ ಕಾಮಗಾರಿಗಳಿಗೆ ಇನ್ನಷ್ಟು ವೇಗ ನೀಡಿ:
ಕೆ.ಆರ್. ಪುರಂನ ಕಸ್ತೂರಿನಗರ ಪ್ರದೇಶದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು. ಕಾಮಗಾರಿಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು.
ಕಾಮಗಾರಿ ಸ್ಥಳದಲ್ಲಿ ಬಿದ್ದಿರುವ ನಿರ್ಮಾಣ ಸಾಮಗ್ರಿಗಳು ಹಾಗೂ ಇತರ ಸಲಕರಣೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವುಗಳನ್ನು ಸಮರ್ಪಕವಾಗಿ ವ್ಯವಸ್ಥೆಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛತೆ ಹಾಗೂ ಮೂಲಸೌಕರ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ:
ಸ್ಥಳೀಯ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೇರವಾಗಿ ಸಂಬಂಧಿಸಿದ ಸ್ವಚ್ಛತೆ, ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ರಸ್ತೆ ನಿರ್ವಹಣೆ, ಪಾದಚಾರಿ ಮಾರ್ಗ, ರಾಜಕಾಲುವೆ, ಕೆರೆ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಗರದ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವಾಗಬಾರದು. ಮನೆ-ಮನೆಯಿಂದ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಣೆ ಮಾಡುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸಂಗ್ರಹಿಸಿದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು, ಪಾದಚಾರಿ ಮಾರ್ಗದ ಒತ್ತುವರಿ, ನಿರ್ಮಾಣ ತ್ಯಾಜ್ಯ ಹಾಗೂ ರಸ್ತೆ ಗುಂಡಿಗಳಂತಹ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಈ ವೇಳೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರಾದ ಎಂ. ಲೋಕೇಶ್, ಕಾರ್ಯಪಾಲಕ ಅಭಿಯಂತರರು, ಮಾರ್ಷಲ್‌ಗಳು, ಪೌರಕಾರ್ಮಿಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಲಸಕ್ಕೆ ಬರದವ್ರನ್ನ ಪರ್ಮನೆಂಟ್ ಹೇಗೆ ಮಾಡೋದು?:
ಸಚಿವ ಕೃಷ್ಣ ಬೈರೇಗೌಡ ಅವರು ಪರಿಶೀಲನೆ ನಡೆಸುವ ವೇಳೆ ಹಲವು ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಖಾಯಂ ಮಾಡುವಂತೆ ಒತ್ತಾಯಿಸಿದರು. ಈ ವೇಳೆ ತಮ್ಮ ಅಸಮಾಧಾನ ಹೊರಹಾಕಿದ ಸಚಿವರು, “ಶೇ.30 ರಷ್ಚು ಜನ ಪೌರ ಕಾರ್ಮಿಕರು ತಮ್ಮ ನಿತ್ಯದ ಕೆಲಸಕ್ಕೆ ಹಾಜರಾಗುವುದೇ ಇಲ್ಲ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿಲ್ಲ. ಹೀಗಾಗಿ ಹಲವೆಡೆ ಜನ ಕಸವನ್ನು ರಸ್ತೆಗೆ ಎಸೆಯುವ ಸ್ಥಿತಿ ಇದೆ. ಪರಿಣಾಮ ನಗರದ ಹಲವೆಡೆ ಗಬ್ಬು ನಾರುತ್ತಿದೆ. ಜನರಿಂದ ಪ್ರತಿನಿತ್ಯ ನಾವು ಬೈಸಿಕೊಳ್ಳುತ್ತಿದ್ದೇವೆ. ಕೆಲಸಕ್ಕೆ ಬರದವರನ್ನ, ಬಂದರೂ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದವರನ್ನು ಯಾತಕ್ಕಾಗಿ ಖಾಯಂ ಮಾಡಬೇಕು?” ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
