ಸಮಗ್ರ ಸುದ್ದಿ

ಪ್ಯಾಲೇಸ್‌ ಗುಟ್ಟಹಳ್ಳಿ ಜಂಕ್ಷನ್‌ನಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್‌ ಕಂಬಗಳ ಅಳವಡಿಕೆ: 3 ಲಕ್ಷ ರೂ. ದಂಡ

Share

ಬೆಂಗಳೂರು:ಬಳ್ಳಾರಿ ರಸ್ತೆಯ ಪ್ಯಾಲೇಸ್‌ ಗುಟ್ಟಹಳ್ಳಿ ಜಂಕ್ಷನ್‌ನಲ್ಲಿ ಯಾವುದೇ ನಿಗದಿತ ಮಾನದಂಡವನ್ನು ಅನುಸರಿಸದೆ ಅವೈಜ್ಞಾನಿಕವಾಗಿ ವಿದ್ಯುತ್‌ ಕಂಬಗಳನ್ನು ಅಳವಡಿಸಿರುವ ಪ್ರಕರಣವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಯೋಜನಾ ಸಮಾಲೋಚಕರು ಹಾಗೂ ಗುತ್ತಿಗೆದಾರರಿಗೆ ಒಟ್ಟು ರೂ.3 ಲಕ್ಷ ದಂಡ ವಿಧಿಸಲಾಗಿದೆ.

ದಿನಾಂಕ 31.07.2026ರಂದು ಮಾನ್ಯ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು ಬಳ್ಳಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಪ್ಯಾಲೇಸ್‌ ಗುಟ್ಟಹಳ್ಳಿ ಜಂಕ್ಷನ್‌ನಲ್ಲಿ ಹೊಸದಾಗಿ ವಿದ್ಯುತ್‌ ಕಂಬಗಳನ್ನು ಅಳವಡಿಸುತ್ತಿದ್ದ ಕಾಮಗಾರಿಯನ್ನು ಪರಿಶೀಲಿಸಿದ್ದರು. ಈ ವೇಳೆ ವಿದ್ಯುತ್‌ ಕಂಬಗಳ ನಡುವಿನ ಅಂತರವನ್ನು ಯಾವುದೇ ನಿಗದಿತ ಮಾನದಂಡವಿಲ್ಲದೆ ಮನಬಂದಂತೆ ಅಳವಡಿಸುತ್ತಿರುವುದನ್ನು ಗಮನಿಸಿ, ಅಸಮಾಧಾನ ವ್ಯಕ್ತಪಡಿಸಿದ್ದರು.

ಅಲ್ಲದೆ, ಕಾಮಗಾರಿಯನ್ನು ಪರಿಶೀಲಿಸಿ, ನಿಯಮಾನುಸಾರ ಹಾಗೂ ವೈಜ್ಞಾನಿಕವಾಗಿ ವಿದ್ಯುತ್‌ ಕಂಬಗಳನ್ನು ಅಳವಡಿಸುವಂತೆ ಹಾಗೂ ಈ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ, ಜಿಬಿಎ ವ್ಯಾಪ್ತಿಯ ಸಂಬಂಧಪಟ್ಟ ಅಧಿಕಾರಿಗಳಾದ ನಿರ್ದೇಶಕರು (ತಾಂತ್ರಿಕ), ಬಿ-ಸ್ಮೈಲ್‌, ಮುಖ್ಯ ಅಭಿಯಂತರರು-01, ಬಿ-ಸ್ಮೈಲ್‌ ಹಾಗೂ ಯೋಜನಾ ಅಭಿಯಂತರರು-01, ಬಿ-ಸ್ಮೈಲ್‌ ಅವರೊಂದಿಗೆ ದಿನಾಂಕ 03.09.2026ರಂದು ಸ್ಥಳ ಪರಿಶೀಲನೆ ನಡೆಸಲಾಯಿತು.

ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ವಿದ್ಯುತ್‌ ಕಂಬಗಳನ್ನು ಅವೈಜ್ಞಾನಿಕವಾಗಿ ಹಾಗೂ ನಿಗದಿತ ವಿನ್ಯಾಸ/ತಾಂತ್ರಿಕ ವಿವರಣೆಗೆ ವಿರುದ್ಧವಾಗಿ ಅಳವಡಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರು (ಬಿ-ಸ್ಮೈಲ್‌) ಹಾಗೂ ಸಹಾಯಕ ಅಭಿಯಂತರರು (ಬಿ-ಸ್ಮೈಲ್‌) ಅವರಿಗೆ ದಿನಾಂಕ 04.09.2026ರಂದು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.

ಇದೇ ವೇಳೆ, ಕಾಮಗಾರಿಯ ಗುಣಮಟ್ಟ ಹಾಗೂ ನಿಯಮಾನುಸರಣೆಯಲ್ಲಿ ಲೋಪವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಯೋಜನಾ ಸಮಾಲೋಚಕರಾದ ಮೆ|| ಸಿದ್ಧಿಶಕ್ತಿ ಪ್ರೈ. ಲಿ. ಅವರಿಗೆ ರೂ.1 ಲಕ್ಷ ದಂಡ ಹಾಗೂ ಗುತ್ತಿಗೆದಾರರಾದ ಮೆ|| ಜೆ.ಎಂ.ಸಿ. ಕನ್ಸ್‌ಟ್ರಕ್ಷನ್ಸ್‌ ಅವರಿಗೆ ರೂ.2 ಲಕ್ಷ ದಂಡ ವಿಧಿಸಲಾಗಿದೆ.

ಅಲ್ಲದೆ, ಅವೈಜ್ಞಾನಿಕವಾಗಿ ಹಾಗೂ ನಿಗದಿತ ತಾಂತ್ರಿಕ ವಿವರಣೆಗೆ ವಿರುದ್ಧವಾಗಿ ಅಳವಡಿಸಿರುವ ವಿದ್ಯುತ್‌ ಕಂಬಗಳನ್ನು ತಕ್ಷಣವೇ ಸರಿಪಡಿಸಿ, ನಿಗದಿತ ಮಾನದಂಡಗಳಂತೆ ಮರುಅಳವಡಿಸುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನಗರದ ಪ್ರಮುಖ ರಸ್ತೆಗಳು ಹಾಗೂ ಮೂಲಸೌಕರ್ಯ ಕಾಮಗಾರಿಗಳಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ನಿಗದಿತ ತಾಂತ್ರಿಕ ಮಾನದಂಡಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸದಂತೆ ಜಿಬಿಎ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.


Share

You cannot copy content of this page