ಸಮಗ್ರ ಸುದ್ದಿ

ಗ್ಯಾರಂಟಿಯಿಂದ ಜನರು ಕೇಂದ್ರದ ಬೆಲೆ ಏರಿಕೆ ತಡೆದುಕೊಂಡಿದ್ದಾರೆ: ಈಶ್ವರ ಖಂಡ್ರೆ

Share

ಬೀದರ್: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ದರ ಏರಿಕೆ ಮಾಡಿದ್ದು, ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳಿಂದ ಜನ ಆ ದರ ಏರಿಕೆಯ ಹೊರೆ ತಡೆದುಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಭಾಲ್ಕಿ ತಾಲೂಕು ಮಹೆಕರ್ ನಲ್ಲಿ ನಡೆದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಜಾರಿಗೆ ತಂದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರತಿಪಕ್ಷಗಳು ಕೂಗುತ್ತಿದ್ದವು. ಆದರೆ ನಮ್ಮ ಸರ್ಕಾರ ಗ್ಯಾರಂಟಿಯನ್ನೂ ಜಾರಿ ಮಾಡಿದೆ, ರಾಜ್ಯದ ಅಭಿವೃದ್ಧಿಯನ್ನೂ ಮಾಡುತ್ತಿದೆ. ಅದಕ್ಕೆ ಇಂದು ಉದ್ಘಾಟನೆಯಾದ 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಹಕರ್ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಭವ್ಯ ಕಟ್ಟಡವೇ ಸಾಕ್ಷಿ ಎಂದರು.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ನಮ್ಮ ಗ್ಯಾರಂಟಿ ಜನಪ್ರಿಯತೆಯಿಂದ ಪ್ರತಿಪಕ್ಷಗಳು ಕಂಗೆಟ್ಟುಹೋಗಿವೆ ಎಂದರು.

ಬೀದರ್ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 364287 ಫಲಾನುಭವಿಗಳಿದ್ದು, ಆಗಸ್ಟ್ 2023ರಿಂದ ಜೂನ್ 2026ರವರೆಗೆ 2092.92 ಕೋಟಿ ರೂ. ಪಾವತಿಸಲಾಗಿದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯಡಿ 13,13,205 ಫಲಾನುಭವಿಗಳಿಗೆ, ಜುಲೈ 2023ರಿಂದ ಡಿಸೆಂಬರ್ 2024ರವರೆಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಾಗಿ 333.28 ಕೋಟಿ ರೂ. ಪಾವತಿಸಲಾಗಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ ಆಗಸ್ಟ್ 2023ರಿಂದ ಜುಲೈ 2026ರವರೆಗೆ 359120 ಫಲಾನುಭವಿಗಳಿಗೆ 589.23 ಕೋಟಿ ರೂ. ಪಾವತಿಸಿದ್ದರೆ, ಶಕ್ತಿ ಯೋಜನೆ ಅಡಿ 13.89 ಕೋಟಿ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ,ಇನ್ನು ನಿರುದ್ಯೋಗಿ ಯುವಜನರಿಗೆ ಜಿಲ್ಲೆಯಲ್ಲಿ 57.12 ಕೋಟಿ ರೂ. ಪಾವತಿಸಲಾಗಿದೆ ಎಂದರು.
ಸಯಗಾವ್ ಮಾರ್ಗವಾಗಿ ಭಾಲ್ಕಿ – ಮೆಹಕರ್ ರಸ್ತೆಯ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಈ ಕಾಮಗಾರಿಗೂ ಇಂದು ಚಾಲನೆ ನೀಡಿದ್ದೇನೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಮೆಹಕರ್ ಜನರು ಊರಿನಲ್ಲಿ ಆಗುತ್ತಿರುವ ಪ್ರಗತಿಯನ್ನು ನೋಡಿ, ತಮ್ಮ ಊರು ಮಹಾರಾಷ್ಟ್ರಕ್ಕೆ ಸೇರದಿರುವುದು ಉತ್ತಮವಾಯಿತು. ಕರ್ನಾಟಕದಲ್ಲಿ ಉಳಿದಿದ್ದೆ ಒಳ್ಳೆಯದಾಯಿತು. ಈಗ ಪ್ರಗತಿ ಆಗುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ಎಂದರು.

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಜನಸ್ಪಂದನ ನಡೆಸುತ್ತಿದ್ದೆವು. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವೆಯನ್ನು ಜಾರಿಗೆ ತಂದಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ನಿಮ್ಮ ಊರಿಗೆ ಬಂದಿದ್ದು, ಪಿಂಚಣಿ, ವಿಧವ ವೇತನ, ಸಂಧ್ಯಾಸುರಕ್ಷಾ, ಪೋಡಿ, 11ಇ ಸ್ಕೆಚ್, ವಸತಿ, ನಿವೇಶನ ಹಂಚಿಕೆ, ಅಂಗನವಾಡಿ, ಶಾಲಾ ಕಟ್ಟಡ ಅಭಿವೃದ್ಧಿ, ದೇವಾಲಯಗಳ ಜೀರ್ಣೋದ್ಧಾರ, ಖಾಸಗಿ ಉದ್ಯೋಗ, ಪೊಲೀಸ್ ಸೇವೆ ಸೇರಿದಂತೆ ವಿವಿಧ ಇಲಾಖೆಗಳ ಸೇವೆಯಲ್ಲಿನ ಲೋಪದ ಬಗ್ಗೆ ದೂರು ನೀಡಲು ಅವಕಾಶವಿದ್ದು, ಇದಕ್ಕೆ ಖಚಿತ ಪರಿಹಾರ ಲಭಿಸುತ್ತದೆ ಎಂದರು.

ತಾವು ಪ್ರತಿ ತಿಂಗಳೂ 2 ಶನಿವಾರ ಬೀದರ್ ಜಿಲ್ಲೆಯಲ್ಲಿ ಪ್ರಜಾಸೇವೆ ಆಂದೋಲನದಲ್ಲಿ ಭಾಗಿಯಾಗಿ ಜನರ ಅಹವಾಲಿಗೆ ಸ್ಪಂದಿಸಿ, ಯಾವುದೇ ದಲ್ಲಾಳಿ, ಮಧ್ಯವರ್ತಿ ಇಲ್ಲದೆ, ಭ್ರಷ್ಟಾಚಾರ ಮುಕ್ತವಾಗಿ ಸಾರ್ವಜನಿಕ ಸೇವೆ ಲಭಿಸುವಂತೆ ಮಾಡಲಾಗುವುದು ಎಂದರು.
ಚುನಾವಣೆ ಪೂರ್ವದಲ್ಲಿ ಮೆಹಕರ್ ಅಭಿವೃದ್ಧಿಯ ಭರವಸೆ ನೀಡಿದ್ದ ತಾವು ಆ ಎಲ್ಲ ಭರವಸೆ ಈಡೇರಿಸುತ್ತಿದ್ದು, ಉತ್ತಮ ರಸ್ತೆ, ಆರೋಗ್ಯ ಕೇಂದ್ರ, ಶಾಲಾ ಕಟ್ಟಡ ಅಭಿವೃದ್ಧಿ ಆಗುತ್ತಿದೆ ಎಂದರು.

ಮಳೆಯ ಕೊರತೆ ಬರ ಘೋಷಣೆಗೆ ಸಿದ್ಧತೆ:

ರಾಜ್ಯದಲ್ಲಿ ಈ ಬಾರಿ ಎಲ್ ನಿ ನೋ ಪ್ರಭಾವದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯ ಸರ್ಕಾರ ಈಗಾಗಲೇ 101 ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ನಿಯಮಗಳ ರೀತ್ಯ ಬರ ಪೀಡಿತ ಎಂದು ಘೋಷಿಸಿದ್ದು, ಶೀಘ್ರವೇ ಭಾಲ್ಕಿ ಜಿಲ್ಲೆಯೂ ಬರ ಪೀಡಿತ ಎಂದು ಘೋಷಣೆಯಾಗಲಿದೆ ಎಂದರು.
ತಾವು ಈಗ ಸಚಿವರಾಗಿರುವುದರಿಂದ ವಿವಿಧ ಜಿಲ್ಲೆಗಳ ಪ್ರವಾಸ ಮಾಡಬೇಕಾಗಿದೆ. ಹೀಗಾಗಿ ಹೆಚ್ಚು ಬಾರಿ ಇಲ್ಲಿಗೆ ಬರಲಾಗಿಲ್ಲ. ಆದರೆ ಮೆಹಕರ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಮೆಹಕರ್ ಸರ್ಕಾರಿ ಆಸ್ಪತ್ರೆಗೆ ಪ್ರಸೂತಿ ತಜ್ಞರು ಮತ್ತು ಮಕ್ಕಳ ತಜ್ಞ ವೈದ್ಯರ ನೇಮಕ ಆಗಿದೆ. ಭಾಲ್ಕಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ತಾವು ಸತತವಾಗಿ ಶ್ರಮಿಸುತ್ತಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಪ್, ಜಿಲ್ಲಾಧಿಕಾರಿ ಶಿಲ್ಪಾಶರ್ಮಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ವಿಠ್ಠಲ ಮಾಧವರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಗ್ಯಾರಂಟಿ ಸಮಿತಿಯ ಚಿಮಕೋಡ್, ಅರಣ್ಯ ಅಭಿವೃದ್ಧಿ ನಿಗಮದ ಹನುಮಂತರಾವ್ ಚವ್ಹಾಣ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page