ಶಿಕಾರಿಪುರ: ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದು ಹಾಗೂ ಸರ್ಕಾರಿ ಕಚೇರಿಗಳಿಗೆ ಜನರು ಪದೇಪದೇ ಅಲೆದಾಡುವುದನ್ನು ತಪ್ಪಿಸುವುದು ಪ್ರಜಾಸೇವೆಯ ಮುಖ್ಯ ಆಶಯವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಜಾಸೇವೆ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.
ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನಸ್ಪಂದನ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆದಿತ್ತು. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತಕ್ಕೆ ಮತ್ತಷ್ಟು ಚುರುಕು ನೀಡುವ ಉದ್ದೇಶದಿಂದ ರಾಜ್ಯಮಟ್ಟದ ಪ್ರಜಾಸೇವೆ ಕಾರ್ಯಕ್ರಮಕ್ಕೆ ಸೆ. 5ರಂದು ಕೂಡ್ಲಿಗಿಯಲ್ಲಿ ಚಾಲನೆ ನೀಡಿದ್ದಾರೆ. ಅಂದು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಶಿಕಾರಿಪುರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಜನರೇ ಪ್ರಭುಗಳು
ಜನರ ತೆರಿಗೆ ಹಣದಿಂದಲೇ ನಾವು ವೇತನ ಪಡೆಯುತ್ತಿದ್ದೇವೆ. ಪ್ರಜೆಗಳೇ ಪ್ರಭುಗಳು, ಸಾಮಾನ್ಯ ಜನರೇ ನಮ್ಮ ನಿಜವಾದ ಮಾಲೀಕರು ಎಂಬುದನ್ನು ಅಧಿಕಾರಿಗಳು ಅರಿತುಕೊಳ್ಳಬೇಕು. ಪ್ರಜಾಸೇವೆ ಕಾರ್ಯಕ್ರಮವನ್ನು ಆದ್ಯತೆಯಾಗಿ ಪರಿಗಣಿಸಿ, ಜನರ ಸಮಸ್ಯೆಗಳಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರಜಾಸೇವೆ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಜನಸ್ನೇಹಿ ಆಡಳಿತಕ್ಕೆ ಆದ್ಯತೆ
ಆಡಳಿತವನ್ನು ಜನಸ್ನೇಹಿ, ಪಾರದರ್ಶಕ ಹಾಗೂ ಉತ್ತರದಾಯಿತ್ವಯುತವಾಗಿಸುವುದು ಪ್ರಜಾಸೇವೆಯ ಉದ್ದೇಶವಾಗಿದೆ. ಅರ್ಜಿ ಸಲ್ಲಿಕೆ, ಪ್ರಮಾಣಪತ್ರ ಪಡೆಯುವುದು, ವಿವಿಧ ಸೌಲಭ್ಯಗಳು ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಜನರಿಗೆ ಸುಲಭವಾಗಿ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಒಂದೇ ವ್ಯವಸ್ಥೆಯ ಮೂಲಕ ಹಲವು ಸರ್ಕಾರಿ ಸೇವೆ ಪಡೆಯಲು ಇಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ಸಮಯ ಹಾಗೂ ದಾಖಲೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ಅಲ್ಲದೆ, ಅರ್ಜಿಗಳ ವಿಲೇವಾರಿಗೆ ನಿಗದಿತ ಕಾಲಮಿತಿ ಇರಲಿದ್ದು, ಅರ್ಜಿಯ ಪ್ರಗತಿಯನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಪರಿಶೀಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರಿಗೂ ನಗರ ಪ್ರದೇಶದ ಜನರಂತೆ ಸಮಾನವಾಗಿ ಸರ್ಕಾರಿ ಸೇವೆಗಳು ತಲುಪಬೇಕು. ಸಣ್ಣಪುಟ್ಟ ಕೆಲಸಗಳಿಗೂ ಜನರು ದೂರದ ಕಚೇರಿಗಳಿಗೆ ಅಲೆದಾಡಿ, ತಮ್ಮ ಕಷ್ಟಪಟ್ಟು ದುಡಿದ ಹಣ ಹಾಗೂ ಸಮಯ ವ್ಯರ್ಥ ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು. ಜನರು ಇರುವಲ್ಲಿಯೇ ಅವರ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತೆ ಮಾಡುವಲ್ಲಿ ಪ್ರಜಾಸೇವೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರು ಹೇಳಿದರು.
ಸಚಿವರಿಗೆ ವಿಶೇಷ ಧನ್ಯವಾದ ತಿಳಿಸಿದ ಬಿ.ವೈ. ರಾಘವೇಂದ್ರ
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪ್ರಜಾಸೇವೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಶಿಕಾರಿಪುರದಲ್ಲಿ ಆಯೋಜಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಅರ್ಜಿಗಳ ಪರಿಶೀಲನೆ
ಪ್ರಜಾಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದ ವಿವಿಧ ಯೋಜನೆಗಳ ಕುರಿತು ಸ್ಥಾಪಿಸಲಾಗಿದ್ದ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ ಕೆಲವು ಅರ್ಜಿಗಳನ್ನು ಸಚಿವರು ಖುದ್ದು ಪರಿಶೀಲಿಸಿದರು. ಅರ್ಜಿಗಳಲ್ಲಿ ಉಲ್ಲೇಖಿಸಲಾಗಿದ್ದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಸೇವೆ ಹೇಗೆ ಕೆಲಸ ಮಾಡುತ್ತದೆ?
*ಜನರು ತಮ್ಮ ಅಗತ್ಯದ ಸೇವೆಗೆ ಆನ್ಲೈನ್ ಅಥವಾ ನೇರವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ.
- ಅರ್ಜಿಯ ಸ್ಥಿತಿಯನ್ನು ಮೊಬೈಲ್/ಆನ್ಲೈನ್ ಮೂಲಕ ತಿಳಿದುಕೊಳ್ಳುವ ಅವಕಾಶ.
- ವಿವಿಧ ಇಲಾಖೆಗಳ ಸೇವೆಗಳನ್ನು ಪರಸ್ಪರ ಸಂಪರ್ಕಿಸುವ ಏಕೀಕೃತ ವ್ಯವಸ್ಥೆ.
- ಅರ್ಜಿಗಳ ವಿಲೇವಾರಿಗೆ ಕಾಲಮಿತಿ ಮತ್ತು ಡಿಜಿಟಲ್ ಟ್ರ್ಯಾಕಿಂಗ್.
- ಅಧಿಕಾರಿಗಳ ಹಂತದಲ್ಲಿ ಅರ್ಜಿ ಎಲ್ಲಿ ಬಾಕಿಯಾಗಿದೆ ಎಂಬುದನ್ನು ಮೇಲ್ವಿಚಾರಣೆ.
- ಸಾರ್ವಜನಿಕರಿಂದ ದೂರು, ಸಲಹೆ ಮತ್ತು ಪ್ರತಿಕ್ರಿಯೆ ಪಡೆಯುವ ವ್ಯವಸ್ಥೆ.
- ಸೇವೆ ನೀಡುವಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಮೇಲಧಿಕಾರಿಗಳ ಗಮನಕ್ಕೆ ತರುವ ವ್ಯವಸ್ಥೆ.
ಜನಸಾಮಾನ್ಯರಿಗೆ ಆಗುವ ಅನುಕೂಲ
- ಸರ್ಕಾರಿ ಕಚೇರಿಗಳಿಗೆ ಅನಗತ್ಯ ಓಡಾಟ ತಪ್ಪಲಿದೆ.
-ಸಮಯ ಮತ್ತು ಹಣದ ಉಳಿತಾಯ. - ಅರ್ಜಿಯ ಪ್ರಗತಿ ತಿಳಿದುಕೊಳ್ಳಲು ಸುಲಭ.
- ಮಧ್ಯವರ್ತಿಗಳಿಗೆ ಅವಕಾಶವಿಲ್ಲ.
- ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವುದು ಸುಲಭ.
- ಗ್ರಾಮೀಣ, ಬಡ, ವೃದ್ಧರು ಮತ್ತು ದುರ್ಬಲ ವರ್ಗದ ಜನರಿಗೆ ಹೆಚ್ಚು ಅನುಕೂಲ.
- ಸೇವೆ ನೀಡುವಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಳ.
- ಸರ್ಕಾರದ ಸೇವೆಗಳಲ್ಲಿ ವಿಳಂಬ, ಅಲೆದಾಟ ಮತ್ತು ಅನಿಶ್ಚಿತತೆ ಕಡಿಮೆಯಾಗಲಿದೆ.
- ಸರ್ಕಾರಿ ಸೇವೆಗಾಗಿ ಜನರು ಕಚೇರಿಗೆ ಹೋಗುವ ಬದಲು, ಸರ್ಕಾರದ ಸೇವೆಗಳು ಜನರ ಬಳಿಗೆ ತಲುಪುವಂತೆ ಮಾಡುವ ಜನಕೇಂದ್ರಿತ ಆಡಳಿತ ವ್ಯವಸ್ಥೆ
