ಬೆಂಗಳೂರು:ರಾಜ್ಯದ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಪಠ್ಯಪುಸ್ತಕದ ಆಚೆಗೆ ಅನುಭವಾತ್ಮಕವಾಗಿ ಪರಿಚಯಿಸುವ ಉದ್ದೇಶದಿಂದ, ಕರ್ನಾಟಕದ ವಿವಿಧ ವಿಜ್ಞಾನ ಕೇಂದ್ರಗಳಲ್ಲಿ ಇಸ್ರೋ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ನಡುವೆ ನೇರ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್ ಅವರು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರಿಗೆ ಮನವಿ ಮಾಡಿದ್ದಾರೆ.
ಇಸ್ರೋ ಅಧ್ಯಕ್ಷರನ್ನು ಭೇಟಿಯಾದ ಸಂದರ್ಭದಲ್ಲಿ ಈ ಸಂಬಂಧ ಅಧಿಕೃತ ಮನವಿ ಸಲ್ಲಿಸಿದ ಸಚಿವರು, ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ, ಉಪಗ್ರಹ ತಂತ್ರಜ್ಞಾನ ಮತ್ತು ವಿಜ್ಞಾನ ವೃತ್ತಿಜೀವನದ ಬಗ್ಗೆ ವಿದ್ಯಾರ್ಥಿಗಳು ನೇರವಾಗಿ ವಿಜ್ಞಾನಿಗಳಿಂದ ತಿಳಿದುಕೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.
“ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದಾಗ ವಿಜ್ಞಾನ ಅವರಿಗೊಂದು ಪಾಠವಿಷಯವಾಗಿರದೆ, ಭವಿಷ್ಯದ ಅವಕಾಶವಾಗಿ ಕಾಣಲು ಆರಂಭಿಸುತ್ತದೆ. ಇಸ್ರೋ ವಿಜ್ಞಾನಿಗಳ ಅನುಭವ ಮತ್ತು ಸಾಧನೆಗಳು ಮಕ್ಕಳಲ್ಲಿ ಕುತೂಹಲ, ಸಂಶೋಧನಾ ಮನೋಭಾವ ಹಾಗೂ ದೊಡ್ಡ ಕನಸುಗಳನ್ನು ಹುಟ್ಟುಹಾಕಬಲ್ಲವು,” ಎಂದು ಡಾ. ಅಜಯ್ ಧರಂ ಸಿಂಗ್ ಹೇಳಿದ್ದಾರೆ.
ವಿಜ್ಞಾನವನ್ನು ಅನುಭವದ ಮೂಲಕ ಮಕ್ಕಳಿಗೆ ತಲುಪಿಸುವ ಪ್ರಯತ್ನ
ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಮತ್ತು ಸಂವಾದಾತ್ಮಕ ವಿಜ್ಞಾನ ಕಲಿಕೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ವಿಜ್ಞಾನ ಕೇಂದ್ರಗಳು, ಮೊಬೈಲ್ ಪ್ಲಾನೆಟೋರಿಯಂಗಳು ಹಾಗೂ ದೂರದರ್ಶಕ ಆಧಾರಿತ ಕಾರ್ಯಕ್ರಮಗಳನ್ನು ವಿಸ್ತರಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೊಬೈಲ್ ಡಿಜಿಟಲ್ ಪ್ಲಾನೆಟೋರಿಯಂ ಕಾರ್ಯಕ್ರಮವು 3,282 ಶಾಲೆಗಳನ್ನು ತಲುಪಿದ್ದು, 5.46 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಪ್ರಯೋಜನ ಪಡೆದಿದ್ದಾರೆ.
ಇದರ ಜೊತೆಗೆ Providing Access to Telescopes (PAT) ಯೋಜನೆಯಡಿ KREIS ಶಾಲೆಗಳು ಮತ್ತು ಕಾಲೇಜುಗಳಿಗೆ ದೂರದರ್ಶಕಗಳನ್ನು ಒದಗಿಸಿ, ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.
ಈ ಕಾರ್ಯಕ್ರಮಗಳ ಮುಂದುವರಿದ ಹಂತವಾಗಿ ಇಸ್ರೋ ವಿಜ್ಞಾನಿ–ವಿದ್ಯಾರ್ಥಿ ಸಂವಾದ ಆರಂಭಿಸಿದರೆ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
“ವಿಜ್ಞಾನವನ್ನು ಮಕ್ಕಳಿಗೆ ತೋರಿಸಬೇಕು, ಅನುಭವಿಸಬೇಕು, ಪ್ರಶ್ನಿಸಲು ಅವಕಾಶ ಕೊಡಬೇಕು. ವಿಜ್ಞಾನಿಗಳೊಂದಿಗೆ ನೇರ ಸಂವಾದವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಯ ವಿಜ್ಞಾನಿಗಳು, ಸಂಶೋಧಕರು ಮತ್ತು ತಂತ್ರಜ್ಞಾನ ತಜ್ಞರನ್ನು ರೂಪಿಸಲು ನೆರವಾಗುತ್ತದೆ,” ಎಂದು ಅವರು ಹೇಳಿದ್ದಾರೆ.
ಇಸ್ರೋದ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮವನ್ನು ರಾಜ್ಯದ ವಿಜ್ಞಾನ ಕೇಂದ್ರಗಳಿಗೆ ವಿಸ್ತರಿಸುವ ಮೂಲಕ ನಗರಗಳ ಜೊತೆಗೆ ಜಿಲ್ಲೆ ಮತ್ತು ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೂ ವಿಜ್ಞಾನಿಗಳೊಂದಿಗೆ ನೇರ ಸಂಪರ್ಕದ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.
