ಬೆಂಗಳೂರು, ಸೆಪ್ಟೆಂಬರ್ 15, 2026: ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸ್ವಯಂಚಾಲಿತ ಪರೀಕ್ಷಾ ಸಾಧನ (ಎಟಿಇ) ಹಾಗೂ ಸುಧಾರಿತ ರೋಬೊಟಿಕ್ಸ್ ವ್ಯವಸ್ಥೆಗಳ ಜಾಗತಿಕ ಮುಂಚೂಣಿ ಸಂಸ್ಥೆಯಾಗಿರುವ ಟೆರಾಡೈನ್-ನ (Teradyne), ಭಾರತದಲ್ಲಿನ ಮೊದಲ ಶಾಶ್ವತ ಕಚೇರಿಯನ್ನು ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಲಾಗಿದೆ.
ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕಚೇರಿಯನ್ನು ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಟೆರಾಡೈನ್‌ನ ಪವರ್ ಟೆಸ್ಟ್ ವಿಭಾಗದ ಉಪಾಧ್ಯಕ್ಷ ಹಾಗೂ ಜನರಲ್ ಮ್ಯಾನೇಜರ್ ಡೊಮಿನಿಕ್ ವಿಯೆನ್ಸ್, ಕೆಐಡಿಎಸ್-ನ ನಿರ್ದೇಶಕ ಡಾ. ಅವಿನಾಶ್ ಮೆನನ್, ಟೆರಾಡೈನ್‌ನ ಹಿರಿಯ ಅಧಿಕಾರಿಗಳು ಹಾಗೂ ಉದ್ಯಮ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಬೆಂಗಳೂರಿನ ಬಾಗ್ಮನೆ ಕಾಸ್ಮೋಸ್ ಟೆಕ್ ಪಾರ್ಕ್‌ನಲ್ಲಿ ಕಾರ್ಯಾರಂಭ ಮಾಡಿರುವ ಈ ಹೊಸ ಕಚೇರಿಯು ದೇಶಿ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಬೆಳವಣಿಗೆಗೆ ಟೆರಾಡೈನ್ ನೀಡುತ್ತಿರುವ ಹೆಚ್ಚಿನ ಬದ್ಧತೆಗೆ ನಿದರ್ಶನವಾಗಿದೆ. ಗ್ರಾಹಕರ ಜೊತೆಗೆ ನೇರ ಸಂಪರ್ಕ, ಅಪ್ಲಿಕೇಷನ್‌ಗಳಿಗೆ ತಾಂತ್ರಿಕ ಬೆಂಬಲ, ತರಬೇತಿ ಹಾಗೂ ಕಾರ್ಯತಂತ್ರದ ಸಹಭಾಗಿತ್ವಗಳಿಗೆ ಈ ಕಚೇರಿಯು ಸ್ಥಳೀಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಬೆಂಗಳೂರಿನಲ್ಲಿ ಶಾಶ್ವತ ಕಚೇರಿ ಸ್ಥಾಪಿಸುವ ಟೆರಾಡೈನ್‌ನ ನಿರ್ಧಾರವನ್ನು ಸ್ವಾಗತಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಇದು ರಾಜ್ಯದ ತಂತ್ರಜ್ಞಾನ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಮೇಲೆ ಜಾಗತಿಕ ಸಂಸ್ಥೆಯು ಇರಿಸಿರುವ ದೃಢ ವಿಶ್ವಾಸದ ಪ್ರತೀಕವಾಗಿದೆ’ ಎಂದು ಹೇಳಿದರು.
“ನವೋದ್ಯಮ ಬೆಳೆಯಲು ಅಗತ್ಯವಾದ ವಾತಾವರಣ ಸೃಷ್ಟಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂಬ ನಂಬಿಕೆಯನ್ನು ಕರ್ನಾಟಕ ಸರ್ಕಾರವು ನಿರಂತರವಾಗಿ ಪಾಲಿಸಿಕೊಂಡು ಬಂದಿದೆ. ಹಿಂದೊಮ್ಮೆ ‘ಪಿಂಚಣಿದಾರರ ಸ್ವರ್ಗ’ ಎಂದು ಕರೆಯಲ್ಪಡುತ್ತಿದ್ದ ಬೆಂಗಳೂರು, ಇಂದು ಎಐ, ನವೋದ್ಯಮ, ಡೀಪ್ ಟೆಕ್ನಾಲಜಿ ಮತ್ತು ಸುಧಾರಿತ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುತ್ತಿರುವ ಸಂಸ್ಥೆಗಳ ತಾಣವಾಗಿ ಬೆಳೆದಿದೆ.
ಸದ್ಯಕ್ಕೆ ಬೆಂಗಳೂರಿನಲ್ಲಿ 21 ಶ್ರೇಷ್ಠತಾ ಕೇಂದ್ರಗಳಿವೆ. ಉದ್ಯಮ, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು ಮತ್ತು ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸಲು, ಜಂಟಿ ಬೌದ್ಧಿಕ ಆಸ್ತಿ ಅಭಿವೃದ್ಧಿಪಡಿಸಲು ಹಾಗೂ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆಗಳನ್ನು ಸೃಷ್ಟಿಸಿವೆ. ಟೆರಾಡೈನ್‌ನಂತಹ ಕಂಪನಿಗಳು ಸರ್ಕಾರದ ಜೊತೆಗೆ ಮಾತ್ರವಲ್ಲದೆ ನಮ್ಮ ನವೋದ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಶ್ರೇಷ್ಠತಾ ಕೇಂದ್ರಗಳ ಜೊತೆಗೂ ಸಹಕರಿಸಬೇಕು ಎಂಬುದು ನಮ್ಮ ಆಶಯ.
ಸೆಮಿಕಂಡಕ್ಟರ್ ಪೂರೈಕೆ ಸರಪಳಿಯ ಯಾವುದೇ ಹಂತದಲ್ಲಿ ಅವಕಾಶಗಳಿದ್ದರೆ, ಕರ್ನಾಟಕ ಸರ್ಕಾರವು ಅಂತಹ ಚರ್ಚೆಗಳಿಗೆ ಸಿದ್ಧವಿರುವುದರ ಜೊತೆಗೆ ಅಗತ್ಯ ಸಹಕಾರವನ್ನೂ ನೀಡಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
“ನೀವು ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಬಗೆಯ ಸಹಕಾರ ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ. ನಾವೀನ್ಯತೆಗೆ ಸರ್ಕಾರವೇ ಮೊದಲ ಗ್ರಾಹಕನಾಗಬಹುದು ಎಂಬ ನಂಬಿಕೆಯೂ ನಮಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ, ಅನುಷ್ಠಾನಕ್ಕೆ ಸನ್ನದ್ಧವಾಗಿರುವ ಪರಿಹಾರಗಳನ್ನು ನವೋದ್ಯಮಗಳು ಮತ್ತು ತಂತ್ರಜ್ಞಾನ ಕಂಪನಿಗಳು ಅಭಿವೃದ್ಧಿಪಡಿಸಿದಾಗ, ಅವುಗಳನ್ನು ಸರ್ಕಾರ ಪರೀಕ್ಷಿಸಿ, ಅಳವಡಿಸಿಕೊಂಡು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಅಗತ್ಯವಾದ ಅವಕಾಶಗಳನ್ನು ನಾವು ಸೃಷ್ಟಿಸಲು ಬಯಸುತ್ತೇವೆ’ ಎಂದು ಹೇಳಿದ್ದಾರೆ.
‘ಭಾರತದಲ್ಲಿ ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಟೆರಾಡೈನ್‌ನ ನಿರ್ಧಾರವು ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸಿರುವ ಪರಿಸರ ವ್ಯವಸ್ಥೆಯ ಮೇಲಿನ ದೃಢ ವಿಶ್ವಾಸದ ಪ್ರತೀಕವಾಗಿದೆ. ಕರ್ನಾಟಕದ ಮೇಲಿಟ್ಟಿರುವ ನಿಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ಧನ್ಯವಾದಗಳು. ರಾಜ್ಯದಲ್ಲಿನ ಸೆಮಿಕಂಡಕ್ಟರ್ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು, ನಾವೀನ್ಯತೆ ಬಲಪಡಿಸಲು ಮತ್ತು ಉದ್ಯಮಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲು ನಿಮ್ಮೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಟೆರಾಡೈನ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ರೆಗ್ ಸ್ಮಿತ್ ಅವರು ಮಾತನಾಡಿ, ‘ಬೆಂಗಳೂರಿನಲ್ಲಿ ವಿಶೇಷ ಕಚೇರಿ ಆರಂಭಿಸಿರುವುದು ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯ ದೀರ್ಘಾವಧಿಯ ಪಯಣದ ಮೇಲಿನ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.
“ಭಾರತವು ತನ್ನ ಸೆಮಿಕಂಡಕ್ಟರ್ ಪಯಣದಲ್ಲಿ ಮಹತ್ವದ ತಿರುವಿನ ಹಂತದಲ್ಲಿದೆ. ಬೆಂಗಳೂರಿನಲ್ಲಿ ಶಾಶ್ವತ ಕಚೇರಿ ಸ್ಥಾಪಿಸಿರುವುದು ಈ ಮಾರುಕಟ್ಟೆಯ ಮೇಲಿನ ನಮ್ಮ ದೀರ್ಘಾವಧಿಯ ಬದ್ಧತೆಗೆ ನಿದರ್ಶನವಾಗಿದೆ. ದೇಶೀಯ ಸೆಮಿಕಂಡಕ್ಟರ್ ತಯಾರಿಕೆ, ಪ್ಯಾಕೇಜಿಂಗ್ ಮತ್ತು ಟೆಸ್ಟಿಂಗ್ ಸಾಮರ್ಥ್ಯಗಳಲ್ಲಿ ಭಾರತದಲ್ಲಿ ಹೂಡಿಕೆಯು ತ್ವರಿತಗೊಳ್ಳುತ್ತಿರುವ ಸಂದರ್ಭದಲ್ಲಿ, ನಮ್ಮ ಗ್ರಾಹಕರು, ಸರ್ಕಾರದ ಪಾಲುದಾರರು ಹಾಗೂ ಒಟ್ಟಾರೆ ಪರಿಸರ ವ್ಯವಸ್ಥೆಯ ಜೊತೆಗೆ ಪ್ರತಿಯೊಂದು ಹಂತದಲ್ಲೂ ವಿಶ್ವಾಸಾರ್ಹ ಪಾಲುದಾರರಾಗಿ ಕಾರ್ಯನಿರ್ವಹಿಸಲು ನಾವು ಉದ್ದೇಶಿಸಿದ್ದೇವೆ. ಈಗ ಸ್ಥಳೀಯವಾಗಿ ಶಾಶ್ವತ ಕಚೇರಿ ಸ್ಥಾಪಿಸುವುದರಿಂದ ಈ ಉದ್ಯಮಕ್ಕೆ ಅಗತ್ಯವಿರುವ ವೇಗದಲ್ಲಿ ನಾವು ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ” ಎಂದು ಗ್ರೆಗ್ ಸ್ಮಿತ್ ಹೇಳಿದರು.
ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆ, ಪ್ಯಾಕೇಜಿಂಗ್ ಮತ್ತು ಟೆಸ್ಟಿಂಗ್ ಸಾಮರ್ಥ್ಯಗಳು ತ್ವರಿತವಾಗಿ ವಿಸ್ತರಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಟೆರಾಡೈನ್‌ನ ಬೆಂಗಳೂರಿನ ಕಚೇರಿ ಆರಂಭವಾಗಿರುವುದಕ್ಕೆ ಹೆಚ್ಚಿನ ಮಹತ್ವ ಇದೆ. ಕಂಪನಿಯ ಸ್ಥಳೀಯ ಉಪಸ್ಥಿತಿಯು ದೇಶದಲ್ಲಿ ಹೆಚ್ಚುತ್ತಿರುವ ಚಿಪ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಕರಿಗೆ ಹೆಚ್ಚಿನ ನೆರವು ನೀಡುವ ಸಾಮರ್ಥ್ಯ ಬಲಪಡಿಸುವುದರ ಜೊತೆಗೆ, ಭಾರತದ ಸೆಮಿಕಂಡಕ್ಟರ್ ಮೌಲ್ಯ ಸರಪಳಿಗೆ ಅಗತ್ಯವಿರುವ ಪರೀಕ್ಷೆ ಮತ್ತು ಮಾಪನ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲಿದೆ.
ಬೆಂಗಳೂರಿನ ಕಚೇರಿಯ ಮೂಲಕ ಕರ್ನಾಟಕದ ಬಲಿಷ್ಠ ಸೆಮಿಕಂಡಕ್ಟರ್ ವಿನ್ಯಾಸ, ಪ್ರೊಟೊಟೈಪಿಂಗ್, ಫ್ಯಾಬ್‌ಲೆಸ್ ನಾವೀನ್ಯತೆ, ಒಎಸ್‌ಎಟಿ ಸುಧಾರಿತ ತಯಾರಿಕೆ ಹಾಗೂ ಡೀಪ್ ಎಂಜಿನಿಯರಿಂಗ್ ಪ್ರತಿಭೆ ಹೊಂದಿರುವ ಪರಿಸರ ವ್ಯವಸ್ಥೆಯ ಜೊತೆಗೆ ಟೆರಾಡೈನ್ ತನ್ನ ಸಂಪರ್ಕ ಮತ್ತು ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಟೆರಾಡೈನ್ ಸ್ವಯಂಚಾಲಿತ ಪರೀಕ್ಷಾ ಸಾಧನ (ಎಟಿಇ) ಮತ್ತು ಸುಧಾರಿತ ರೋಬೊಟಿಕ್ಸ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ತಯಾರಿಸುತ್ತದೆ. ಇದರ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಟೆಸ್ಟಿಂಗ್ ಪರಿಹಾರಗಳು ವೇಫರ್‌ನಿಂದ ಡೇಟಾ ಸೆಂಟರ್‌ವರೆಗೆ ಕೃತಕ ಬುದ್ಧಿಮತ್ತೆ (ಎಐ) ಸಾಧನಗಳ ಪೂರೈಕೆ ಸರಪಳಿಗೆ ವ್ಯಾಪಿಸಿವೆ. ಮತ್ತೊಂದೆಡೆ, ಇದರ ಸುಧಾರಿತ ರೋಬೊಟಿಕ್ಸ್ ವಹಿವಾಟು- ತಯಾರಿಕೆ, ಸರಕು ಸಾಗಣೆ ಮತ್ತು ಡೇಟಾ ಸೆಂಟರ್ ಕಾರ್ಯಾಚರಣೆಗಳಲ್ಲಿ ಬುದ್ಧಿವಂತ ಸ್ವಯಂಚಾಲಿತ ವ್ಯವಸ್ಥೆಗಳನ್ನು ಅಳವಡಿಸಲು ನೆರವಾಗಲಿದೆ.
ಭಾರತದಲ್ಲಿ ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಟೆರಾಡೈನ್‌ನ ನಿರ್ಧಾರವು ಕರ್ನಾಟಕ ಸರ್ಕಾರವು ಅಭಿವೃದ್ಧಿಪಡಿಸಿರುವ ಪರಿಸರ ವ್ಯವಸ್ಥೆಯ ಮೇಲಿನ ದೃಢ ವಿಶ್ವಾಸದ ಪ್ರತೀಕವಾಗಿದೆ – ಪ್ರಿಯಾಂಕ್ ಖರ್ಗೆ. ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ
