ಬೆಂಗಳೂರು: ಭಾರತವು ಹಿಂದಿನ ಕೇಂದ್ರ ಸರಕಾರದ ಆಡಳಿತದಲ್ಲಿ ಐದು ಹಿಂದುಳಿದ ರಾಷ್ಟ್ರಗಳ ಸಾಲಿನಲ್ಲಿತ್ತು. ಇದೀಗ ಕಳೆದ ಸುಮಾರು 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರ ನಾಯಕತ್ವದಲ್ಲಿ ವಿಶ್ವದ ಐದು ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಜೆ.ಪಿ. ನಡ್ಡಾ ಅವರು ವಿಶ್ಲೇಷಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಆಡಳಿತ ಕ್ಷೇತ್ರದಲ್ಲಿ 25 ವರ್ಷಗಳ ಜನಪರ ಸೇವೆಯನ್ನು ಗಮನಿಸಿ ಪಕ್ಷವು ಈ ಬಾರಿ ಇದೇ 17ರಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನವನ್ನು ನಡೆಸಲಿದೆ ಎಂದು ವಿವರಿಸಿದರು.
ಪ್ರತಿವರ್ಷ ಮೋದಿಜೀ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೇವಾ ಪಾಕ್ಷಿಕವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಈ ಬಾರಿ ಒಂದು ತಿಂಗಳ ಕಾಲ ಸೇವಾ ಅಭಿಯಾನ ಇರಲಿದೆ. ವಿಶ್ವದ ಅನೇಕ ರಾಷ್ಟ್ರಗಳು ಪ್ರಧಾನಿಯವರಿಗೆ ಅವರ ದೇಶದ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರ ನೀಡಿದ್ದನ್ನೂ ಉಲ್ಲೇಖಿಸಿದರು.
ಮೋದಿಯವರು 140 ಕೋಟಿ ಜನರ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. 2047ರವೇಳೆಗೆ ವಿಕಸಿತ ಅಭಿವೃದ್ಧಿಶೀಲ ಭಾರತ ನಿರ್ಮಾಣಕ್ಕೆ ಅವರು ಸಂಕಲ್ಪ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ದೇಶವು ಎಲ್ಲ ರಂಗಗಳಲ್ಲಿ ಮಹತ್ವದ ಸಾಧನೆ ಮಾಡಿದೆ ಎಂದು ಹೇಳಿದರು.
ನೆಹರೂ ದಾಖಲೆ ಮುರಿದ ಪ್ರಧಾನಿ
ರಾಜ್ಯದಲ್ಲಿ ಸೇವೆ ಆರಂಭಿಸಿದ ಮೋದಿಯವರು ಬಳಿಕ ಕೇಂದ್ರಕ್ಕೆ ಬಂದರು. ಅವರ ಜವಾಬ್ದಾರಿ ಬದಲಾಗಿದೆ. ಆದರೆ, ಅವರ ಜನಪರ ಸೇವಾ ಬದ್ಧತೆ ಬದಲಾಗಲಿಲ್ಲ. ಕಳೆದ 2026 ಜೂನ್ 10ರಂದು ಅವರು ಅತ್ಯಂತ ಹೆಚ್ಚು ಅವಧಿಯ ಚುನಾಯಿತ ಪ್ರಧಾನಿಯಾಗಿಯೂ ಹೊರಹೊಮ್ಮಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಈ ಮೂಲಕ ಅವರು ಜವಾಹರ ಲಾಲ್ ನೆಹರೂ ಅವರ ದಾಖಲೆಯನ್ನೂ ಮುರಿದಿದ್ದಾರೆ. ಅವರ ನೇತೃತ್ವಕ್ಕೆ ಮನ್ನಣೆ ಎಂಬಂತೆ ರಾಜ್ಯಗಳ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಡಿದ ಸಾಧನೆ ಕುರಿತು ತಿಳಿಸಿದರು.
ಒಂದೇ ಒಂದು ರಜೆ ಪಡೆಯದ ಪ್ರಧಾನ ಸೇವಕ
ನಮ್ಮ ಈಗಿನ ಪ್ರಧಾನಿಯವರು ತಮ್ಮ ಜನಸೇವಾವಧಿಯಲ್ಲಿ ಒಂದೇ ಒಂದು ರಜೆ ಪಡೆಯದ ಜನಸೇವಕ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಅವರು ತಮ್ಮ ಹೊಣೆಯನ್ನು ಜನಸೇವಕನ ಕಾರ್ಯ ಎಂದು ನುಡಿದು ಅದರಂತೆ ಕಾರ್ಯ ನಿರ್ವಹಿಸಿದವರು ಎಂದು ಹೇಳಿದರು.
140 ಕೋಟಿ ಜನರಿಗಾಗಿ ಅವರು ಹಗಲಿರುಳೆನ್ನದೇ ಸದಾ ಶ್ರಮಿಸಿದವರು ಎಂದು ತಿಳಿಸಿದರು. ಅವರ ಜನಸೇವೆಯನ್ನೇ ಗಮನದಲ್ಲಿ ಇಟ್ಟುಕೊಂಡು ಸೆ.17ರಿಂದ ಅಕ್ಟೋಬರ್ 17ರವರೆಗೆ ಪಕ್ಷವು ಅಭಿಯಾನವನ್ನು ನಡೆಸುತ್ತಿದೆ. ಜನಸೇವೆಯನ್ನೇ ಗುರಿಯಾಗಿ ಇಟ್ಟುಕೊಂಡು ಈ ಅಭಿಯಾನ ಹಮ್ಮಿಕೊಳ್ಳಲಿರುವುದಾಗಿ ತಿಳಿಸಿದರು.
ಮೋದಿಜೀ ಅವರ ನೇತೃತ್ವದಿಂದ ಬದಲಾವಣೆ
ವಿಶ್ವದ ತೃತೀಯ ಆರ್ಥಿಕ ಶಕ್ತಿಯಾಗಲು ನಮ್ಮ ಪ್ರಯತ್ನ ಸಾಗಿದೆ ಎಂದ ಅವರು, 12 ವರ್ಷಗಳ ಹಿಂದೆ ಭಾರತವು ವಿಶ್ವದ ಐದು ದುರ್ಬಲ ರಾಷ್ಟ್ರಗಳ ಸಾಲಿನಲ್ಲಿ ಒಂದಾಗಿತ್ತು. ಇದೀಗ ಈ ಸಾಧನೆಗೆ ಮೋದಿಜೀ ಅವರ ನೇತೃತ್ವ ಕಾರಣ ಎಂದು ವಿಶ್ಲೇಷಿಸಿದರು. ನಮ್ಮ ದೇಶದ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ. ಕಳೆದ ತ್ರೈಮಾಸಿಕದಲ್ಲಿ ನಮ್ಮ ಅಭಿವೃದ್ಧಿಯು (ಶೇ.7.80) ಇದಕ್ಕೆ ಸ್ಪಷ್ಟ ಉದಾಹರಣೆ ಹಾಗೂ ಉಲ್ಲೇಖಾರ್ಹ ಎಂದು ವಿವರಿಸಿದರು.
ಕೋಟಿಗಟ್ಟಲೆ ಜನರಿಗೆ ಲಾಭ
ಸುಧಾರಣೆ, ಅನುಷ್ಠಾನದ ಮೂಲಕ ಅಭಿವೃದ್ಧಿ ಸಾಧನೆ ಅವರ ಮೂಲಮಂತ್ರ ಎಂದ ಅವರು, ಜಿಎಸ್‍ಟಿ ಅನುಷ್ಠಾನದಿಂದ ಒಂದು ದೇಶ- ಒಂದು ತೆರಿಗೆ ಮಾಡಲಾಗಿದೆ. ಬಳಿಕ ಜಿಎಸ್‍ಟಿಯಲ್ಲಿ ಎರಡು ಸ್ಲ್ಯಾಬ್ ಪದ್ಧತಿಯನ್ನು ಜಾರಿ ಮಾಡಲಾಗಿದೆ. ಬಡವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲು 12 ಲಕ್ಷ ರೂ. ಆದಾಯಕ್ಕೆ ಯಾವುದೇ ತೆರಿಗೆ ಹಾಕುತ್ತಿಲ್ಲ ಎಂದು ಗಮನ ಸೆಳೆದರು. ಕೋಟಿಗಟ್ಟಲೆ ಜನರಿಗೆ ಇದರಿಂದ ಲಾಭ ಲಭಿಸಿದೆ ಎಂದರು.
ಬಿಪಿಎಲ್ ಪಟ್ಟಿಯಿಂದ ಹೊರಬಂದ ಜನತೆ
ಇದೆಲ್ಲದರ ಪರಿಣಾಮವಾಗಿ 25 ಕೋಟಿ ಜನರು ಕಡು ಬಡತನ ರೇಖೆಯಿಂದ (ಬಿಪಿಎಲ್) ಮೇಲಕ್ಕೆ ಬಂದಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಅರ್ಹರಿಗೆ ಪಡಿತರ ಕೊಡಲಾಗುತ್ತಿದೆ ಎಂದರು. ಅಭಿವೃದ್ಧಿ ಕುರಿತಂತೆ ಮಾಹಿತಿ ಕೊಟ್ಟ ಅವರು, ರಾಷ್ಟ್ರೀಯ ಹೆದ್ದಾರಿ ಕೇವಲ 91 ಸಾವಿರ ಕಿಮೀ ಇದ್ದುದು ಇದೀಗ 1.46 ಲಕ್ಷ ಕಿಮೀಗೆ ಏರಿಕೆಯಾಗಿದೆ. 2014ರಲ್ಲಿ 74 ವಿಮಾನನಿಲ್ದಾಣ ಇದ್ದುದು 165 ಆಗಿದೆ. 91 ವಿಮಾನನಿಲ್ದಾಣಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು. ರೈಲ್ವೆಯಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ ಎಂದರು.
ಪಾಕಿಸ್ತಾನಕ್ಕೆ ಸಮರ್ಥ ಉತ್ತರ
ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರ ಕೊಡುವುದನ್ನು ಮೋದಿಜೀ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕತೆಯಿಂದ ಹೊರಕ್ಕೆ ಬಾರದೇ ಇದ್ದರೆ ಅದಕ್ಕೆ ಅದರದೇ ಆದ ರೀತಿಯ ಉತ್ತರ ಸಿಗಲಿದೆ ಎಂದು ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ ಎಂದರು. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಪೆಹಲ್ಗಾಂ ಬಳಿಕ ಆಪರೇಷನ್ ಸಿಂಧೂರದ ಮೂಲಕ ಭಾರತವು ರಾಷ್ಟ್ರೀಯ ಸುರಕ್ಷತೆಗೆ ನೀಡಿದ ಮಹತ್ವದ ಪ್ರತೀಕ ಎಂದು ವಿವರ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್, ಸಂಸದರಾದ ಪಿ.ಸಿ.ಮೋಹನ್, ಡಾ.ಮಂಜುನಾಥ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಸೇವಾ ಸಂಕಲ್ಪ ಅಭಿಯಾನದ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ ಮತ್ತಿತರ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
