ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಋತುವಿನ ಬರ ಪರಿಸ್ಥಿತಿಯ ವೈಜ್ಞಾನಿಕ ಪರಿಶೀಲನೆ ನಿರಂತರವಾಗಿ ಸಾಗುತ್ತಿದ್ದು, 2020ರ ಬರ ನಿರ್ವಹಣಾ ಮಾರ್ಗದರ್ಶಿಯ ನಿಯಮಾವಳಿಗಳಂತೆ ಹೆಚ್ಚುವರಿ 53 ತಾಲೂಕುಗಳಲ್ಲಿ ಬೆಳೆ ಹಾನಿಯ ಪ್ರತ್ಯಕ್ಷ ಸ್ಥಳ ಪರಿಶೀಲನೆ (ಗ್ರೌಂಡ್ ಟ್ರೂಥಿಂಗ್) ನಡೆಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆದೇಶ ಹೊರಡಿಸಿದೆ. ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಬರ ಅಧ್ಯಯನ ಮತ್ತು ಹಿನ್ನೆಲೆ:
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಹಂತ-ಹಂತವಾಗಿ ಮೌಲ್ಯಮಾಪನ ಮಾಡಲಾಗುತ್ತಿದ್ದು, ಈ ಹಿಂದೆ ಮೊದಲ ಹಂತದಲ್ಲಿ 102 ತಾಲೂಕುಗಳಲ್ಲಿ ಪ್ರತ್ಯಕ್ಷ ಪರಿಶೀಲನೆ ನಡೆಸಿ, 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು (89 ತೀವ್ರ ಬರ ಹಾಗೂ 12 ಸಾಧಾರಣ ಬರ). ನಂತರದ ಹಂತದಲ್ಲಿ 24 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಇದೀಗ ಜೂನ್ 1 ರಿಂದ ಸೆಪ್ಟೆಂಬರ್ 16 ರವರೆಗಿನ ಅವಧಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಉಳಿದ 115 ತಾಲೂಕುಗಳ ವೈಜ್ಞಾನಿಕ ದತ್ತಾಂಶಗಳನ್ನು (ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸೂಚ್ಯಂಕ ಇತ್ಯಾದಿ) ವಿಶ್ಲೇಷಿಸಿದ್ದು, ಈ ಪೈಕಿ 17 ಜಿಲ್ಲೆಗಳ 53 ತಾಲೂಕುಗಳು ಪ್ರತ್ಯಕ್ಷ ಪರಿಶೀಲನೆಯ 3ನೇ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.
ಮೊಬೈಲ್ ಆಪ್ ಮೂಲಕ ಪಾರದರ್ಶಕ ಸಮೀಕ್ಷೆ:
ಈ ಬಾರಿಯ ಸ್ಥಳ ಪರಿಶೀಲನೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಹಾಗೂ ನಿಖರವಾಗಿ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಭಿವೃದ್ಧಿಪಡಿಸಿರುವ “Crop Loss GT” ವಿಶೇಷ ಮೊಬೈಲ್ ಆಪ್ ಬಳಸಲಾಗುತ್ತಿದೆ. ಈ ಆಪ್ ಮೂಲಕ ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳು, ಜಿಪಿಎಸ್ ನಿರ್ದೇಶಾಂಕಗಳು, ಜಮೀನಿನ ವಿವರ ಮತ್ತು ಬೆಳೆ ಹಾನಿಯ ವಿಸ್ತೀರ್ಣವನ್ನು ಸ್ಥಳದಲ್ಲೇ ದಾಖಲಿಸಲಾಗುತ್ತದೆ.
ಬರ ತೀವ್ರತೆಯ ಮಾನದಂಡಗಳು:
ಸ್ಥಳ ಪರಿಶೀಲನೆಯಲ್ಲಿ ಶೇಕಡಾ 33 ಅಥವಾ ಅದಕ್ಕಿಂತ ಹೆಚ್ಚು ಬೆಳೆ ನಷ್ಟ ಕಂಡುಬಂದಲ್ಲಿ ಆ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಪರಿಗಣಿಸಲಾಗುತ್ತದೆ. ಬೆಳೆ ನಷ್ಟವು ಶೇಕಡಾ 50ಕ್ಕಿಂತ ಹೆಚ್ಚಿದ್ದರೆ ಅದನ್ನು ‘ತೀವ್ರ ಬರ’ ಎಂದು ವರ್ಗೀಕರಿಸಲಾಗುತ್ತದೆ. ಒಂದು ವೇಳೆ ಶೇಕಡಾ 80 ಕ್ಕಿಂತ ಹೆಚ್ಚು ಪರಿಶೀಲನಾ ಸ್ಥಳಗಳಲ್ಲಿ ಶೇ. 50 ಕ್ಕೂ ಹೆಚ್ಚು ಬೆಳೆ ಹಾನಿ ಕಂಡುಬಂದರೆ, ಅಂತಹ ತಾಲೂಕನ್ನು ಸಾಧಾರಣ ಬಲದಿಂದ ತೀವ್ರ ಬರ ಪರಿಸ್ಥಿತಿಗೆ ಮೇಲ್ದರ್ಜೆಗೇರಿಸಲು ಅವಕಾಶವಿದೆ.
ಗ್ರೌಂಡ್ ಟ್ರೂಥಿಂಗ್‌ಗೆ ಆಯ್ಕೆಯಾಗಿರುವ 17 ಜಿಲ್ಲೆಗಳ 53 ತಾಲೂಕುಗಳು:
ಬೆಂಗಳೂರು ನಗರದ ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲ್ಲೂಕು, ಚಿತ್ರದುರ್ಗದ ಚಿತ್ರದುರ್ಗ ತಾಲ್ಲೂಕು, ಹೊಳಲ್ಕೆರೆ ತಾಲ್ಲೂಕು, ಮೊಳಕಾಲ್ಮುರು ತಾಲ್ಲೂಕು, ದಾವಣಗೆರೆಯ ಹರಿಹರ ತಾಲ್ಲೂಕು, ಬಳ್ಳಾರಿಯ ಸಿರಿಗುಪ್ಪ ತಾಲ್ಲೂಕು, ಕೊಪ್ಪಳದ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳು, ಕಲಬುರಗಿಯ ಚಿಂಚೋಳಿ, ಜೇವರ್ಗಿ, ಸೇಡಂ, ಕಾಳಗಿ ಮತ್ತು ಕಮಲಾಪುರ ತಾಲ್ಲೂಕುಗಳು, ಬೀದರ್ ನ ಕಮಲಾನಗರ ಮತ್ತು ಹುಲಸೂರು ತಾಲ್ಲೂಕುಗಳು, ಬೆಳಗಾವಿಯ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ, ಯರಗಟ್ಟಿ ತಾಲ್ಲೂಕುಗಳು, ಬಾಗಲಕೋಟೆಯ ಬಾದಾಮಿ, ಹುನಗುಂದ, ಮುಧೋಳ, ರಬಕವಿ ಬನಹಟ್ಟಿ, ತೇರದಾಳ ತಾಲ್ಲೂಕುಗಳು, ವಿಜಯಪುರದ ಮುದ್ದೇಬಿಹಾಳ, ಸಿಂಧಗಿ, ದೇವರ ಹಿಪ್ಪರಗಿ, ಆಲಮೇಲ ತಾಲ್ಲೂಕುಗಳು,
ಗದಗದ ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಗಳು, ಹಾವೇರಿಯ ಬ್ಯಾಡಗಿ, ಹಾನಗಲ್, ಹಾವೇರಿ, ರಾಣೇಬೆನ್ನೂರು, ಸವಣೂರು, ಶಿಗ್ಗಾಂವಿ ತಾಲ್ಲೂಕುಗಳು, ಹಾಸನದ ಆಲೂರು, ಬೇಲೂರು ತಾಲ್ಲೂಕುಗಳು, ಉಡುಪಿಯ ಬ್ರಹ್ಮಾವರ ತಾಲ್ಲೂಕು, ಯಾದ ಗಿರಣಿಯ ಶೋರಾಪುರ, ಯಾದಗಿರಿ, ಗುರುಮಿಠಕಲ್, ವಡಗೇರಾ, ಹುಣಸಗಿ ತಾಲ್ಲೂಕುಗಳು, ವಿಜಯನಗರದ ಕೊಟ್ಟೂರು, ಕೂಡ್ಲಿಗಿ ತಾಲೂಕುಗಳು
ಸ್ಥಳ ಪರಿಶೀಲನೆಯ ಸಮಯ ವೇಳಾಪಟ್ಟಿ:
2026 ನೇ ಸೆಪ್ಟೆಂಬರ್ 17 ರಂದು ಜಂಟಿ ಮಾರ್ಗದರ್ಶನ ಹಾಗೂ ಪೂರ್ವಭಾವಿ ಸಭೆ, ಸೆಪ್ಟೆಂಬರ್ 17 ಮತ್ತು 18 ರಂದು ಬೆಳೆಗಳ ಆಯ್ಕೆ, ತಪಾಸಣಾ ತಂಡಗಳ ರಚನೆ ಮತ್ತು ಗ್ರಾಮಗಳ ರ್ಯಾಂಡಮೈಸೇಶನ್, ಸಪ್ಟೆಂಬರ್ 19 ರಿಂದ 20 ರಂದು ಸ್ಥಳೀಯ ಜಮೀನುಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ಬೆಳೆ ಹಾನಿ ಪರಿಶೀಲನೆ ಮತ್ತು ಸೆಪ್ಟೆಂಬರ್ 21ರಂದು ಪರಿಶೀಲನೆ ಪೂರ್ಣಗೊಳಿಸಿ ಫಾರ್ಮ್-11 ರ ಮೂಲಕ ಅಂತಿಮ ವರದಿ ಸಲ್ಲಿಸುವುದು.
ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರುಗಳು ಈ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸಿ, ನಿಯಮಾವಳಿಗಳಂತೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಮುಂಗಾರು ಹಂಗಾಮು ಮುಗಿಯುವವರೆಗೆ ವಾರಕ್ಕೊಮ್ಮೆ ಬರ ಪರಿಸ್ಥಿತಿಯನ್ನು KSNDMC ಮೌಲ್ಯಮಾಪನ ಮಾಡಲಿದ್ದು, ಸಂಪುಟ ಉಪಸಮಿತಿಯ ಅನುಮೋದನೆಯೊಂದಿಗೆ ಮುಂದಿನ ಹಂತಗಳಲ್ಲಿಯೂ ಅಗತ್ಯವಿದ್ದಲ್ಲಿ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‌ಗೆ ಸೇರ್ಪಡೆಗೊಳಿಸಲಾಗುವುದು ಕಂದಾಯ ಇಲಾಖೆ ಕೆಎಸ್‌ಡಿಎಮ್‌ಎ ಆಯುಕ್ತರು ತಿಳಿಸಿದ್ದಾರೆ.
