ಬಾಳೆಹೊನ್ನೂರು :ಕಸ್ತೂರಿ ರಂಗನ್ ವರದಿ ಸೇರಿದಂತೆ ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಪರಿಸರ ಸೂಕ್ಷ್ಮ ವಲಯ ಸೇರಿದಂತೆ ಈ ಭಾಗದ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದೀರಿ, ನನ್ನ ಕೈಲಾದ ಮಟ್ಟಿಗೆ ನಾನು ನಿಮಗೆ ಸಹಾಯ ಮಾಡುವೆ. ರಾಜ್ಯದ ಹಿತಕ್ಕಾಗಿ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡುವ ಪ್ರಯತ್ನ ಮಾಡುವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಶನಿವಾರ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ನಿಮ್ಮ ರೈತರ ಮುಖಂಡರು, ಸಂಘಟನೆಗಳು ಈ ವಿಚಾರದಲ್ಲಿ ನನಗೆ ಅರಿವು ಮೂಡಿಸಿದ್ದೀರಿ. ಈ ವಿಚಾರಗಳನ್ನು ಬಿಡಿಸಿ ಹೇಳಿದ್ದೀರಿ. ಇದಕ್ಕೆ ಪರಿಹಾರ ನೀಡಲು, ತೀರ್ಮಾನ ಮಾಡಿ ನಿಮ್ಮ ಮುಂದೆ ಬಂದಿರುವೆ. ಉನ್ನತ ಮಟ್ಟದ ಸಮಿತಿ ರಚನೆ, ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ಸೇರಿದಂತೆ ನೀವು ಅನೇಕ ಸಲಹೆ ನೀಡಿದ್ದೀರಿ” ಎಂದು ತಿಳಿಸಿದರು.
“ಈ ಸಭೆಗೆ ಮೂಲ ಕಾರಣ ನಿಮ್ಮ ಶಾಸಕರು ಹಾಗೂ ಜಿಲ್ಲಾ ಮಂತ್ರಿಗಳು. ವಿರೋಧ ಪಕ್ಷದ ಸ್ನೇಹಿತರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ಹೀಗಾಗಿ ಶಾಸಕರ ಜೊತೆ ಚರ್ಚೆ ಮಾಡಿದೆ. ಆಗ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪ ಮಾಡಿದರು. ಹೀಗಾಗಿ ಜನರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ರೈತರ ಬದುಕು ಉಳಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ನಾನು ತೀರ್ಮಾನಕ್ಕೆ ಬರುವ ಮುನ್ನ, ನಿಮ್ಮ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ. ನನ್ನ ಕಷ್ಟಕಾಲದಲ್ಲಿ ನೀವು ಬೆನ್ನಿಗೆ ನಿಂತಿದ್ದೀರಿ. ನಮಗೆ ಅಧಿಕಾರ ಕೊಟ್ಟು ಶಕ್ತಿ ನೀಡಿದ್ದೀರಿ. ದೇವರು ಕೊಟ್ಟಿರುವ ಅವಕಾಶದಲ್ಲಿ ನಿಮ್ಮ ಸೇವೆಗೆ ಸಂಕಲ್ಪ ಮಾಡಿದ್ದೇನೆ” ಎಂದು ಹೇಳಿದರು.
“ನಮ್ಮ ಹಿಂದಿನ ಸರ್ಕಾರಗಳು ಉಳುವವನಿಗೆ ಭೂಮಿ, ಬಗರ್ ಹುಕುಂ ಜಾರಿಗೆ ತಂದಿವೆ. ಈಗ ಮುಂದಿನ ದಿನಗಳಲ್ಲಿ ಬಾಕಿ ಇರುವ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರೈತರು ಈಗಾಗಲೇ ಉಳುಮೆ ಮಾಡುತ್ತಿರುವ ಜಮೀನನ್ನು ಕಾಪಾಡಿಕೊಳ್ಳಿ, ಹೊಸದಾಗಿ ಯಾರೂ ಒತ್ತುವರಿ ಮಾಡಬೇಡಿ. ಮಾಡಿದರೆ ನಾವು ಅವಕಾಶ ನೀಡಲು ಆಗುವುದಿಲ್ಲ. ರೈತರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು ಎಂದು ಸೂಚಿರುವೆ. ಮುಂದಿನ ದಿನಗಳಲ್ಲಿ ನಿಮಗೆ ರಕ್ಷಣೆ ನೀಡುತ್ತೇವೆ” ಎಂದು ಆತ್ಮಸ್ಥೈರ್ಯ ತುಂಬಿದರು.
“ಈ ಭಾಗದ ಶಾಸಕರು ಕಾಫಿ ಲೀಸ್ ವಿಚಾರ, ಫಾರಂ 57 ವಿಚಾರ ಪ್ರಸ್ತಾಪಿಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಲ್ಲಿ ಎಲ್ಲರಿಗೂ 25 ವರ್ಷ ನಿಗದಿ ಮಾಡಲು ಮುಂದಿನ ದಿನಗಳಲ್ಲಿ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದರು.
“2022ರಲ್ಲಿ ಸಂಜಯ್ ಕುಮಾರ್ ಎಂಬ ಅಧಿಕಾರಿಯಿಂದ ವರದಿ ನೀಡಲು 2027ರವರೆಗೆ ಕಾಲಾವಕಾಶ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಅಗತ್ಯ ಬಿದ್ದರೆ ಕೇಂದ್ರಕ್ಕೆ ಪ್ರತ್ಯೇಕ ನಿಯೋಗ ಕರೆದೊಯ್ಯುವೆ” ಎಂದರು.
ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸಚಿವ ಸಂಪುಟ ಸಭೆ
“ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಸಚಿವ ಸಂಪುಟ ಸಭೆ ಮಾಡುವೆ. ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸದಿದ್ದರೂ, ಪಿಂಚಣಿ, ನಿವೇಶನ ಸೇರಿದಂತೆ ಅನೇಕ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ. ನಮ್ಮ ಸರ್ಕಾರ ವಾರ್ಷಿಕ 1 ಲಕ್ಷ ಕೋಟಿ ಹಣವನ್ನು ಬಡವರು, ರೈತರಿಗಾಗಿ ವೆಚ್ಚ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ 53 ಸಾವಿರ ಕೋಟಿ, ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕ 20 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕರಾವಳಿ ಜತೆಗೆ. ಮಲೆನಾಡಿಗೂ ಪ್ರವಾಸೋದ್ಯಮ ನೀತಿ
“ಶುಕ್ರವಾರ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಮಾಡಿದೆ. ಅಲ್ಲಿ ಕರಾವಳಿ ಜೊತೆಗೆ ಮಲೆನಾಡಿನ ಪ್ರಗತಿಗೆ ಪ್ರವಾಸೋದ್ಯಮ ನೀತಿ ರೂಪಿಸಿದ್ದೇವೆ. ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಬಂಡವಾಳ ಬರಬೇಕು, ಉದ್ಯೋಗ ಹೆಚ್ಚಾಬೇಕು, ವಲಸೆ ನಿಲ್ಲಿಸಬೇಕು ಎಂದು ರೂಪುರೇಷೆ ಮಾಡಿದ್ದೇವೆ” ಎಂದರು.
ವಿರೋಧ ಪಕ್ಷಗಳಿಗೆ ರಾಜಕೀಯವೇ ಮುಖ್ಯವಾಗಿದೆ
“ಐತಿಹಾಸಿಕ ಸಂಪುಟ ಸಭೆಗೆ ಯಾರು ಬೇಕಾದರೂ ಟೀಕೆ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳಿಗೆ ಅವಕಾಶವಿದೆ. ಟೀಕೆ ಮಾಡಿದಾಗ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ. ನಾನು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ನಿಮ್ಮ ಬದುಕಿಗಾಗಿ ನಾನು ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಅಧಿವೇಶನದಲ್ಲಿ ಗಲಾಟೆಗೆ ಅವಕಾಶ ನೀಡುವುದಿಲ್ಲ. ನಾನು ಹೃದಯ ವೈಶಾಲ್ಯತೆಯಿಂದ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗಲು ಮುಂದಾಗಿದ್ದೆ. ಯಾವುದೇ ವಿಚಾರ ಇಲ್ಲದೆ ನಾಗೇಂದ್ರ ರಾಜೀನಾಮೆಗೆ ಗಲಾಟೆ ಮಾಡಿದರು. ರಾಜೀನಾಮೆ ಪಡೆದ ಮೇಲೂ ಪಾದಯಾತ್ರೆ ಮಾಡಿದರು. ಅವರಿಗೆ ರಾಜಕಾರಣ ಮುಖ್ಯ ಎಂದು ತೋರಿಸಿದ್ದಾರೆ. ನಾನು ಕೂಡ ಜನರ ಮುಂದೆ ಬಂದಿರುವೆ” ಎಂದರು.
ಕಸ್ತೂರಿ ರಂಗನ್, ಬರ ವಿಚಾರವಾಗಿ ವಿಶೇಷ ಅಧಿವೇಶನ
“ಬರ ಎದುರಾಗಿದೆ, 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಬೇರೆ ಪ್ರದೇಶಗಳಲ್ಲಿ ಅಧ್ಯಯನ ನಡೆಯುತ್ತಿದ್ದೂ, 21 ದಿನ ಮಳೆಯಾಗಬಾರದು ಎಂಬ ಕೇಂದ್ರದ ಮಾರ್ಗಸೂಚಿ ಇದೆ. ಒಂದೆರಡು ದಿನಗಳಲ್ಲಿ ಮತ್ತೊಂದು ಪಟ್ಟಿ ಬಿಡುಗಡೆ. ವಿಶೇಷ ಅಧಿವೇಶನದಲ್ಲಿ ಬರ ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ ಮಾಡಲಾಗುವುದು” ಎಂದರು.
“ನನ್ನ ಮೇಲೆ ವಿಶ್ವಾಸ ಇಟ್ಟು ಬಂದಿರುವ ನಿಮ್ಮ ಪ್ರೀತಿಗೆ ಧನ್ಯವಾದ ಅರ್ಪಿಸುವೆ. ನೀವು ನಮ್ಮನ್ನು ಭೇಟಿ ಮಾಡಲು ಕಷ್ಟವಾಗುತ್ತದೆ ಎಂದು ನಮ್ಮ ಸರ್ಕಾರವನ್ನು ಪ್ರಜಾಸೇವೆ ಮೂಲಕ ಜನರ ಮನೆ ಬಾಗಿಲಿಗೆ ತರಲು ಮುಂದಾಗಿದ್ದೇವೆ. ಜಿಲ್ಲಾ ಮಂತ್ರಿಗಳು ತಿಂಗಳಿಗೆ 2 ದಿನ, 2 ತಾಲ್ಲೂಕಿಗೆ ಹೋಗಬೇಕು” ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿಗೆ ಪಕ್ಷಾತೀತ ವಿರೋಧ
ಇದಕ್ಕೂ ಮುನ್ನ ಈ ಭಾಗದ ಎಲ್ಲಾ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ಕಸ್ತೂರಿ ರಂಗನ್ ವರದಿಯ ಲೋಪಗಳು ಹಾಗೂ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಶಾಸಕರಾದ ಟಿ ಡಿ ರಾಜೇಗೌಡ, ನಯನಾ ಮೋಟಮ್ಮ, ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ಜೆಡಿಎಸ್ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿ, ಸುಧೀರ್ ಕುಮಾರ್ ಮುರೋಳ್ಳಿ, ವಿಜಯ್ ಕುಮಾರ್ ಅವರು ಮಾತನಾಡಿದರು. ಇವರುಗಳ ಸಲಹೆಗಳ ಸಾರಾಂಶಗಳು ಹೀಗಿವೆ:
ಈ ಭಾಗದ ರೈತರಿಗೆ ಅರಣ್ಯ ವಿಚಾರವಾಗಿ ಬಹಳ ತೊಂದರೆ ಎದುರಾಗುತ್ತಿದೆ. ಈ ವರದಿಯಿಂದ ನಮ್ಮ ಮೇಲೆ ತೂಗುಗತ್ತಿ ಇದೆ. ರೈತರು ಆತಂಕದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ 138 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಮಾಡಿದ್ದಾರೆ. 1,449 ಹಳ್ಳಿಗಳು ರಾಜ್ಯದಲ್ಲಿ ಅಧಿಸೂಚನೆ ಒಳಗೆ ಸೇರಿವೆ.
ಇದಕ್ಕೂ ಮುನ್ನ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ್ದು, ಕುದುರೆಮುಖ ರಾಷ್ಟ್ರೀಯ ಅರಣ್ಯ, ಭದ್ರ ಹುಲಿ ಸಂರಕ್ಷಿತ ಪ್ರದೇಶ, ಸೋಮೇಶ್ವರ ಹಾಗೂ ಶೆಟ್ಟಿ ಹಳ್ಳಿ ಅಭಯಾರಣ್ಯ ಮಾಡಲಾಗಿದೆ. ಇದರಿಂದ ಅನೇಕರನ್ನು ಪುನರ್ ವಸತಿ ಮಾಡುವಾಗ ಸರಿಯಾಗಿ ಪರಿಹಾರ ನೀಡಿಲ್ಲ. ಈ ಮಧ್ಯೆ ಈ ವರದಿ ಜಾರಿ ಆದರೆ ಪರಿಸ್ಥಿತಿ ಏನು ಎಂಬ ಆತಂಕ ಮೂಡಿದೆ.
ಕೇರಳ ರಾಜ್ಯದಲ್ಲಿ ಉಮರ್ ಸಮಿತಿ ಎಂಬ ಉನ್ನತ ಮಟ್ಟದ ಅಧಿಕಾರಿ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಲಾಗಿದೆ. ಇದರಿಂದ ಕೇರಳ 5 ಸಾವಿರ ಚ.ಕಿ.ಮೀ ಪ್ರದೇಶವನ್ನು ವರದಿಯಿಂದ ಮುಕ್ತಗೊಳಿಸಿದೆ. ಇದರಿಂದ ನಾಡು ಹಾಗೂ ಕಾಡನ್ನು ಬೇರ್ಪಡಿಸಿ ಗಡಿ ರಚಿಸಲಾಗಿದೆ. ಕಸ್ತೂರಿ ರಂಗನ್ ಸಮಿತಿ ಉಪಗ್ರಹಗಳ ಮೂಲಕ ಜಿಪಿಎಸ್ ಸಮೀಕ್ಷೆ ಮಾಡಿದ್ದು, ಕಾಫಿ, ಅಡಿಕೆ, ರಬ್ಬರ್ ತೋಟವನ್ನು ಕಾಡು ಎಂದು ಪರಿಗಣಿಸಿದೆ.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಈಗ 7ನೇ ಬಾರಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಇದು ನಮ್ಮ ಭಾಗಕ್ಕೆ ಸಾಡೆ ಸಾತಿಯಂತಾಗಿದ್ದು, ಮುಖ್ಯಮಂತ್ರಿಗಳು ಇದನ್ನು ನಿವಾರಣೆ ಮಾಡುವ ವಿಶ್ವಾಸ ಇದೆ.
ಸಣ್ಣ ಇಡುವಳಿದಾರರು, ನಿವೇಶನ ರಹಿತರಿದ್ದಾರೆ. ಈ ವರದಿಯಿಂದ ಇವರ ಸಮಸ್ಯೆ ಬಗೆಹರಿಯುವುದಿಲ್ಲ.
ಮಲೆನಾಡು ಕರಾವಳಿ ಭಾಗವನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಬೇಕು. ಈ ಭಾಗ ರಾಜ್ಯದ ಬಹುತೇಕ ನದಿಗಳ ಕೇಂದ್ರವಾಗಿದ್ದು ನಮಗೆ ಮೀಸಲು ಜಲ ಪ್ರಮಾಣ ಘೋಷಣೆ ಮಾಡಬೇಕು.
ಈ ವರದಿ ಕೇವಲ ನಮ್ಮ ಜಮೀನು, ಮನೆ ಮಾತ್ರ ಸೇರಿಸಿ ಅಧಿಸೂಚನೆ ಹೋರಡಿಸಿಲ್ಲ. ನಮ್ಮ ರಸ್ತೆ, ಸಾರ್ವಜನಿಕ ಬಳಕೆಯ ಸರ್ಕಾರಿ ಕಟ್ಟಡಗಳನ್ನು ಸೇರಿಸಲಾಗಿದೆ.
ಮುಖ್ಯಮಂತ್ರಿಗಳು ಸಂಸದರನ್ನು ಸೇರಿಸಿಕೊಂಡು ಸರ್ವಪಕ್ಷ ನಾಯಕರ ಸಭೆ ಮಾಡುತ್ತಿದ್ದು, ಇದೇ ರೀತಿ, ಸಂಸದರು ಕೇಂದ್ರ ಅರಣ್ಯ ಸಚಿವರ ಸಮ್ಮುಖದಲ್ಲಿ ಎಲ್ಲಾ ಪಕ್ಷಗಳ ನಾಯಕರನ್ನು ಕರೆದು ಇದೇ ರೀತಿ ಸಭೆ ಮಾಡಬೇಕು.
