ಸಮಗ್ರ ಸುದ್ದಿ

ಆಸ್ಟ್ರೋಬೇಸ್ 500 ಕೋಟಿ, ಬೇಯರ್ 200 ಕೋಟಿ ರೂ. ಹೂಡಿಕೆ: ಸಚಿವ ಎಂ ಬಿ ಪಾಟೀಲ

Share

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರಕ್ಕೆ ಬೇಕಾಗುವ ಆಧುನಿಕ ರಾಕೆಟ್ ಮತ್ತು ಉಡಾವಣೆ ವಾಹಕಗಳನ್ನು ತಯಾರಿಸುವ ಬೆಂಗಳೂರು ಮೂಲದ ಆಸ್ಟ್ರೋಬೇಸ್ ಮತ್ತು ಕೃಷಿ ವಲಯಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ನೆದರ್ಲೆಂಡ್ ಮೂಲದ ಬೇಯರ್ ಕಂಪನಿಗಳು ರಾಜ್ಯದಲ್ಲಿ ಕ್ರಮವಾಗಿ ₹500 ಕೋಟಿ ಮತ್ತು ₹200 ಕೋಟಿ ಬಂಡವಾಳ ಹೂಡಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಅವರು ಮಂಗಳವಾರ ತಮ್ಮನ್ನು ಇಲ್ಲಿ ಭೇಟಿಯಾದ ಈ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದರು.

ಆದಿನಾರಾಯಣ ಹೊಸಹಳ್ಳಿಯಲ್ಲಿ ಬಾಹ್ಯಾಕಾಶ ರಾಕೆಟ್ ತಯಾರಿಕೆ ಘಟಕ, ಬೆಂಗಳೂರಿನಲ್ಲಿ ಜಿಸಿಸಿ ಕೇಂದ್ರ

ಈ ಬಗ್ಗೆ ಮಾತನಾಡಿದ ಸಚಿವರು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ಬೇಕಾಗುವ ಮಧ್ಯಮ ಸ್ತರದ ಲಿಫ್ಟ್, ಮರುಬಳಕೆಗೆ ಯೋಗ್ಯವಿರುವಂತಹ ಉಡಾವಣೆ ವಾಹಕ ಮತ್ತು ಸ್ವದೇಶಿ ರಾಕೆಟ್ ಪ್ರೊಪಲ್ಶನ್ ಸಾಧನ ತಯಾರಿಸುವ ಆಸ್ಟ್ರೋಬೇಸ್ ಕಂಪನಿಯು ಆದಿನಾರಾಯಣ ಹೊಸಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 10 ಎಕರೆ ಜಾಗದಲ್ಲಿ ತಯಾರಿಕಾ ಘಟಕವನ್ನು ಅಭಿವೃದ್ಧಿ ಪಡಿಸಲಿದ್ದು, ವರ್ಷಕ್ಕೆ 40 ರಾಕೆಟ್ ಎಂಜಿನ್ನುಗಳನ್ನು ತಯಾರಿಸಲಿದೆ. ಭಾರತದ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಪರಿಣತ ಜ್ಞಾನ ಹೊಂದಿರುವವರು ಮತ್ತು ಇಸ್ರೋದ ಮಾಜಿ ವಿಜ್ಞಾನಿಗಳು ಈ ಕಂಪನಿಯನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ.

ಕಂಪನಿಯು ಸದ್ಯಕ್ಕೆ ವರ್ಷಕ್ಕೆ 8ರಿಂದ 26 ಟನ್ ಭಾರವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವಂತಹ ಸ್ವದೇಶಿ `ಎವರೆಸ್ಟ್’ ಎನ್ನುವ ಎಂಜಿನ್ ತಯಾರಿಸಿದೆ. ಇದರ ಸಾಮರ್ಥ್ಯವನ್ನು 2032ರ ಹೊತ್ತಿಗೆ ವರ್ಷಕ್ಕೆ 100 ಟನ್ ಮತ್ತು 2040ರ ವೇಳೆಗೆ 1,000 ಟನ್ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಅದು ಇಟ್ಟುಕೊಂಡಿದೆ. ಉಡಾವಣಾ ವಾಹಕಗಳಿಗೆ ಜಾಗತಿಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಯೋಜನೆ ಸ್ವಾಗತಾರ್ಹವಾಗಿದೆ. ಇದರಿಂದ 1,250ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ವಿವರಿಸಿದ್ದಾರೆ.

ಇದೇ ರೀತಿಯಲ್ಲಿ ಹೂಡಿಕೆ ಆಕರ್ಷಿಸಲೆಂದು ಇತ್ತೀಚೆಗೆ ನೆದರ್ಲೆಂಡ್ ಗೆ ಭೇಟಿ ನೀಡಿದ್ದಾಗ ಅಲ್ಲಿನ ರಾಜಧಾನಿ ಆಮ್ಸ್ಟರ್ಡ್ಯಾಮ್ ನಲ್ಲಿ ಬೇಯರ್ ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡಲಾಗಿತ್ತು. ರಸಗೊಬ್ಬರ, ಕೀಟನಾಶಕ ಮತ್ತು ಶಿಲೀಂದ್ರನಾಶಕ ಮುಂತಾದವನ್ನು ಉತ್ಪಾದಿಸುವ ಈ ಕಂಪನಿಯು 200 ಕೋಟಿ ರೂ. ಹೂಡಿಕೆಯೊಂದಿಗೆ ಬೆಂಗಳೂರಿನಲ್ಲಿ ತನ್ನ ಜಿಸಿಸಿ ಕೇಂದ್ರವನ್ನು ನಿರ್ಮಿಸಲು ತೀರ್ಮಾನಿಸಿದೆ. ಇದರಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಂಪನಿಯು ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲೇ ಯೋಜನೆಯ ಭೂಮಿಪೂಜೆ ನೆರವೇರಿಸಲು ಬಯಸಿದ್ದು, ತ್ವರಿತವಾಗಿ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲು ಉತ್ಸುಕವಾಗಿದೆ. ಕಂಪನಿಯು ಈಗಾಗಲೇ ಬೆಂಗಳೂರಿನಲ್ಲಿ ತನ್ನ ಸೇವಾ ಮತ್ತು ನಾವೀನ್ಯತೆಯ ಹಬ್ ಹಾಗೂ ಚಾಮರಾಜನಗರದಲ್ಲಿ ಬೆಳೆ ಪರೀಕ್ಷಾ ಕೇಂದ್ರವನ್ನು ಹೊಂದಿದೆ. ಭಾರತದಲ್ಲಿ ಇದು 125 ವರ್ಷಗಳಿಂದಲೂ ಇದ್ದು 11 ಸಾವಿರ ಜನರಿಗೆ ಕೆಲಸ ಕೊಟ್ಟಿದೆ. ದೇಶದಲ್ಲಿ ಬೇಯರ್ ಕಂಪನಿಯು 7 ಉತ್ಪಾದನಾ ಸ್ಥಾವರಗಳು ಮತ್ತು 3 ಜಿಇಸಿ ಕೇಂದ್ರಗಳನ್ನು ಹೊಂದಿದೆ ಎಂದು ಅವರು ನುಡಿದಿದ್ದಾರೆ.

ಮಾತುಕತೆಗೆ ಆಸ್ಟ್ರೋಬೇಸ್ ಕಂಪನಿಯ ಸಹ ಸಂಸ್ಥಾಪಕ ನೀರಜ್ ಖಂಡೇಲ್ವಾಲ್, ಸಿಎಫ್ಒ ನಿಶಾಂತ್ ಜೈನ್ ಮತ್ತು ಕಾರ್ಯತಂತ್ರ ಮುಖ್ಯಸ್ಥ ಪುನೀತ್ ಬಾಲಸುಬ್ರಮಣಿ, ಬೇಯರ್ ಕಂಪನಿಯ ಡಾ.ಹಿಮಾಂಶು ಪಟೇಲ್ ಆಗಮಿಸಿದ್ದರು.

ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಸೇರಿದಂತೆ ಇತರ ಅಧಿಕಾರಿಗಳು ಇದ್ದರು.


Share

You cannot copy content of this page