ಚನ್ನಪಟ್ಟಣ: ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡಿ, ಹಿಂದುಳಿದ, ಶೋಷಿತ ಹಾಗೂ ದಮನಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಗುಣಮಟ್ಟದ ಶಿಕ್ಷಣ ಮತ್ತು ಸಮಾನ ಅವಕಾಶಗಳು ಅತ್ಯಗತ್ಯ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಚನ್ನಪಟ್ಟಣ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಶತಮಾನೋತ್ಸವ ಭವನದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ‘ಶ್ರೀ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ’ದ ವತಿಯಿಂದ ಜಿಲ್ಲೆಯ ಕುರುಬ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಆಯೋಜಿಸಲಾಗಿದ್ದ 2 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಶಿಕ್ಷಣ ಎನ್ನುವುದು ಕೇವಲ ವೈಯಕ್ತಿಕ ಬೆಳವಣಿಗೆಗೆ ಸೀಮಿತವಾಗದೆ, ಸಮಗ್ರ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ತಿಳಿಸಿದರು.
ಶಿಕ್ಷಣವು ಇಡೀ ಸಮಾಜವನ್ನು ಪರಿವರ್ತಿಸುವ ಮಹತ್ತರ ಶಕ್ತಿಯನ್ನು ಹೊಂದಿದ್ದು, ಹಿಂದುಳಿದ ವರ್ಗಗಳು ಹಾಗೂ ಅಹಿಂದ ಸಮುದಾಯಗಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಣವೇ ದಾರಿ ಎಂದು ಸಚಿವರು ತಿಳಿಸಿದರು.
ಒಬ್ಬ ಮಗು ಶಿಕ್ಷಣ ಪಡೆದರೆ ಆ ಮಗುವಿನ ಕುಟುಂಬದ ಭವಿಷ್ಯವೇ ಬದಲಾಗುತ್ತದೆ. ಅದೇ ರೀತಿ ಸಾವಿರಾರು ಮಕ್ಕಳು ಅಕ್ಷರಸ್ಥರಾದರೆ ಆಡಳಿತ ಮತ್ತು ಸಾಮಾಜಿಕ ರಂಗದಲ್ಲಿ ಸಮುದಾಯದ ಸ್ಥಾನಮಾನವೇ ಎತ್ತರಕ್ಕೆ ಏರುತ್ತದೆ. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯವೂ ಸೇರಿದಂತೆ ಎಲ್ಲಾ ಹಿಂದುಳಿದ ಜಾತಿಗಳು ಮತ್ತು ಅಹಿಂದ ವರ್ಗಗಳಿಗೆ ಶಿಕ್ಷಣ ಅತ್ಯಂತ ಅಗತ್ಯವಾಗಿದೆ ಎಂದರು.
ಹಿಂದುಳಿದ ಸಮುದಾಯಗಳ ಪೈಕಿ ಕುರುಬ ಸಮುದಾಯವು ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದಾಗಿದ್ದು, ಸಾಮಾಜಿಕ ಮತ್ತು ರಾಜಕೀಯವಾಗಿಯೂ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಈ ಶಕ್ತಿಗೆ ತಕ್ಕಂತೆ ಸಮುದಾಯದ ಮೇಲೆ ದೊಡ್ಡ ಮಟ್ಟದ ಸಾಮಾಜಿಕ ಹೊಣೆಗಾರಿಕೆಯೂ ಇದೆ. ಪ್ರತಿಯೊಬ್ಬರೂ ಕೇವಲ ತಮ್ಮ ಸ್ವಂತ ಅಥವಾ ಸ್ವ,ಸಮುದಾಯದ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ, ತಮ್ಮ ಸುತ್ತಲಿನ ಎಲ್ಲಾ ಹಿಂದುಳಿದ ಮತ್ತು ಅಹಿಂದ ಸಮುದಾಯಗಳನ್ನು ಜೊತೆಯಲ್ಲಿ ಕೊಂಡೊಯ್ಯುವ ಮೂಲಕ ಸರ್ವಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಸಚಿವರು ಕರೆ ನೀಡಿದರು.
ಸಮಾಜದಲ್ಲಿ ನೈಜ ಸಾಮಾಜಿಕ ನ್ಯಾಯವನ್ನು ತರಬೇಕಾದರೆ ಮೊದಲು ಸಮಾಜದ ನೈಜ ಸ್ಥಿತಿಗತಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿಯಾಗಬೇಕು ಎಂಬುದು ತಮ್ಮ ಸ್ಪಷ್ಟ ನಿಲುವಾಗಿದ್ದು, ಸಾಮಾಜಿಕ ನ್ಯಾಯದ ನೀತಿಗಳನ್ನು ರೂಪಿಸಲು ಪ್ರತಿಯೊಂದು ಸಮುದಾಯದ ನಿಖರ ಜನಸಂಖ್ಯೆ, ಸಮುದಾಯಗಳ ಆರ್ಥಿಕ ಸ್ಥಿತಿಗತಿ ಹಾಗೂ ಶಿಕ್ಷಣದ ಪ್ರಮಾಣ,ಉನ್ನತ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ ಪ್ರವೇಶಾವಕಾಶ, ಸರ್ಕಾರಿ ಉದ್ಯೋಗಗಳಲ್ಲಿ ಸಮುದಾಯಗಳಿಗೆ ದೊರೆತಿರುವ ಪ್ರಾತಿನಿಧ್ಯ, ಶಾಸನಸಭೆ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ರಂಗದಲ್ಲಿ ಲಭಿಸಿರುವ ರಾಜಕೀಯ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಜಾತಿಗಣತಿ ವರದಿಯು ಮುಖ್ಯವಾಗಿದೆ ಎಂದರು.
ಮುಂದುವರೆದು ಮಾತನಾಡಿದ ಸಚಿವರು ಜಾತಿಗಣತಿ ವರದಿಯು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧವಾದುದಲ್ಲ. ಎಲ್ಲ ಜಾತಿ, ಸಮುದಾಯಗಳಿಗೂ ಸಮಾನ ಅವಕಾಶ ಮತ್ತು ನ್ಯಾಯ ಸಿಗಬೇಕು ಎಂಬುದಷ್ಟೇ ಇದರ ಮುಖ್ಯ ಉದ್ದೇಶವಾಗಿದೆ. ಅವಕಾಶಗಳ ಹಂಚಿಕೆಯಲ್ಲಿ ಯಾವುದೇ ಸಮುದಾಯವು ಶಾಶ್ವತವಾಗಿ ಹೊರಗುಳಿಯಬಾರದು. ಹಿಂದುಳಿದವರನ್ನು ಮುನ್ನೆಲೆಗೆ ತರಲು ಮತ್ತು ಅವಕಾಶಗಳಿಂದ ವಂಚಿತರಾದವರ ಕೊರತೆಯನ್ನು ಸರಿಪಡಿಸಲು ನಿಖರ ಅಂಕಿ,ಅಂಶಗಳ ಅಗತ್ಯವಿದೆ.
ಆದ್ದರಿಂದ ಜಾತಿಗಣತಿ ವರದಿಯ ವಿವರಗಳು ಬಹಿರಂಗಗೊಂಡು, ಸಾರ್ವಜನಿಕ ಚರ್ಚೆಗೆ ಬರಬೇಕು. ಸಮಾಜದ ಪ್ರತಿಯೊಂದು ವರ್ಗದ ನೈಜ ಸ್ಥಿತಿ ಸಾರ್ವಜನಿಕವಾಗಿ ತಿಳಿಯುವಂತಾಗಬೇಕು. ಆ ಅಂಕಿ,ಅಂಶಗಳ ಆಧಾರದ ಮೇಲೆಯೇ ಸರ್ಕಾರವು ಸಮಗ್ರ ಸಾಮಾಜಿಕ ನ್ಯಾಯದ ಸೂಕ್ತ ನೀತಿ ನಿಯಮಗಳನ್ನು ರೂಪಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಸಚಿವರು, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿರುವ ‘ಶ್ರೀ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ’ದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಾರಂಭದಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತರಾದ ಹಿಂದುಪುರ ರೈಲ್ವೆ ನಿರೀಕ್ಷಕರಾದ ಹೆಚ್. ಕೆ. ದೊಡ್ಡಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚನ್ನಪಟ್ಟಣ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಸಿ.ಪಿ. ಯೋಗೇಶ್ವರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಂ. ರೇವಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಬಿ. ಸುಬ್ರಮಣ್ಯ, ನಾಯಕ ನಟರು ಹಾಗೂ ಸಾಹಸ ನಿರ್ದೇಶಕರಾದ ಅಪ್ಪು ವೆಂಕಟೇಶ್ ಸೇರಿದಂತೆ ಚನ್ನಪಟ್ಟಣ, ರಾಮನಗರ, ಮಾಗಡಿ ಮತ್ತು ಕನಕಪುರ ತಾಲೂಕುಗಳ ಕುರುಬ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
