ಬೆಂಗಳೂರು: ಕರ್ನಾಟಕವು ಡೀಪ್‌ಟೆಕ್ ಕ್ಷೇತ್ರದ ಮುಂದಿನ ಹಂತದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿರುವ ಇನೋವರ್ಸ್, ತನ್ನ ಡೀಪ್‌ಟೆಕ್ ಎನೇಬ್ಲರ್ ಕಾರ್ಯಕ್ರಮದ ಮೊದಲ ತಂಡಕ್ಕೆ ಬೆಳವಣಿಗೆಯ ಹಂತದಲ್ಲಿರುವ ಏಳು ನವೋದ್ಯಮಗಳನ್ನು ಗುರುತಿಸಿದೆ.
ಈ ಉಪಕ್ರಮವು ಈಗಾಗಲೇ ತಮ್ಮ ತಂತ್ರಜ್ಞಾನ ಮತ್ತು ಮಾರುಕಟ್ಟೆ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಡೀಪ್‌ಟೆಕ್ ಕಂಪನಿಗಳು ವಾಣಿಜ್ಯ ಮಟ್ಟದಲ್ಲಿ ವಿಸ್ತರಣೆಯಾಗುವ ಸಂದರ್ಭದಲ್ಲಿ ಎದುರಿಸುವ ಸವಾಲುಗಳನ್ನು ನಿವಾರಿಸಲು ನೆರವಾಗಲಿದೆ. ಮಾರುಕಟ್ಟೆ ರೂಪಿಸುವಿಕೆ ಮತ್ತು ವಿಸ್ತರಣೆ, ಬಂಡವಾಳ ಸಂಗ್ರಹಣೆ, ನೀತಿ ಸ್ಯಾಂಡ್‌ಬಾಕ್ಸ್‌ಗಳು, ವಿವಿಧ ಕ್ಷೇತ್ರಗಳ ತಂತ್ರಜ್ಞಾನ ಮತ್ತು ಸ್ಕೇಲ್‌ಅಪ್ ಮೂಲಸೌಕರ್ಯಕ್ಕೆ ಪ್ರವೇಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಂಬಲ ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಮೊದಲ ತಂಡದಲ್ಲಿ ಐದು ಆದ್ಯತಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳು ಸೇರ್ಪಡೆಯಾಗಿದ್ದು, ಸ್ವಾಯತ್ತ ವ್ಯವಸ್ಥೆಗಳು, ಸ್ವದೇಶಿ ನ್ಯಾವಿಗೇಷನ್, ಪುನರುತ್ಪಾದಕ ವೈದ್ಯಕೀಯ, ಕಕ್ಷೆಯಲ್ಲೇ ಕಂಪ್ಯೂಟಿಂಗ್, ಡ್ರೋನ್ ವಿರೋಧಿ ವ್ಯವಸ್ಥೆಗಳು ಮತ್ತು ಘನ ಪ್ರೊಪಲ್ಷನ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿವೆ.
ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, “ಬಲಿಷ್ಠ ನವೋದ್ಯಮ ಮತ್ತು ಡೀಪ್‌ಟೆಕ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಕರ್ನಾಟಕವು ಗಣನೀಯ ಹೂಡಿಕೆ ಮಾಡಿದೆ. ಯಶಸ್ವಿ ತಂತ್ರಜ್ಞಾನ ಮತ್ತು ಆರಂಭಿಕ ಮಾರುಕಟ್ಟೆ ಸಾಧನೆಯಿಂದ ನಿರಂತರ ವಾಣಿಜ್ಯ ಬೆಳವಣಿಗೆಯತ್ತ ನಮ್ಮ ಕಂಪನಿಗಳನ್ನು ಕೊಂಡೊಯ್ಯುವುದು ಮುಂದಿನ ಸವಾಲಾಗಿದೆ. ಇನೋವರ್ಸ್ ಡೀಪ್‌ಟೆಕ್ ಎನೇಬ್ಲರ್‌ನ ಮೊದಲ ತಂಡವು ಕಾರ್ಯತಂತ್ರದ ಮಹತ್ವ ಹೊಂದಿರುವ ಕ್ಷೇತ್ರಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಲ್ಲ ತಂತ್ರಜ್ಞಾನ ಸಾಮರ್ಥ್ಯಗಳನ್ನು ಪ್ರತಿನಿಧಿಸುತ್ತದೆ. ಈ ಕಂಪನಿಗಳ ಸುತ್ತ ಉದ್ಯಮ, ಮೂಲಸೌಕರ್ಯ, ಬಂಡವಾಳ, ಮಾರುಕಟ್ಟೆ ಮತ್ತು ನೀತಿ ಬೆಂಬಲವನ್ನು ಒಟ್ಟುಗೂಡಿಸುವ ಮೂಲಕ ಕರ್ನಾಟಕದಲ್ಲಿ ಹುಟ್ಟಿಕೊಂಡ ತಂತ್ರಜ್ಞಾನಗಳು ದೇಶೀಯವಾಗಿ ಹಾಗೂ ಜಾಗತಿಕವಾಗಿ ವಿಸ್ತರಿಸಲು ಬಲಿಷ್ಠ ಮಾರ್ಗಗಳನ್ನು ಸೃಷ್ಟಿಸಬಹುದು” ಎಂದು ಹೇಳಿದರು.
ಮೊದಲ ತಂಡ
ಇನೋವರ್ಸ್ ಡೀಪ್‌ಟೆಕ್ ಎನೇಬ್ಲರ್ – ಮೊದಲ ತಂಡಕ್ಕೆ ಆಯ್ಕೆಯಾಗಿರುವ ಏಳು ನವೋದ್ಯಮಗಳು:
- AquaAirX Autonomous Systems Pvt Ltd – ರಕ್ಷಣಾ ಮತ್ತು ಸಾಗರ ಸಂಬಂಧಿತ ಅನ್ವಯಿಕೆಗಳಿಗಾಗಿ ಸ್ವಾಯತ್ತ ಉಭಯಚರ ಮತ್ತು ನೀರೊಳಗಿನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸಾಗರ ಭದ್ರತೆ, ಸಮುದ್ರದಾಚೆಯ ಮೂಲಸೌಕರ್ಯಗಳ ಪರಿಶೀಲನೆ ಮತ್ತು ಸಮುದ್ರ ತಳಭಾಗದ ಮ್ಯಾಪಿಂಗ್‌ಗಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ.
- Fibroheal Woundcare Pvt Ltd – ಸಿಲ್ಕ್ ಪ್ರೋಟೀನ್ ವಿಜ್ಞಾನವನ್ನು ಬಳಸಿಕೊಂಡು ಗಾಯದ ಆರೈಕೆ, ಅಂಗಾಂಶ ಪುನರುತ್ಪಾದನೆ, ಶಸ್ತ್ರಚಿಕಿತ್ಸಾ ಅನ್ವಯಿಕೆಗಳು ಮತ್ತು ಪುನರುತ್ಪಾದಕ ವೈದ್ಯಕೀಯ ಕ್ಷೇತ್ರಗಳಿಗೆ ಸುಧಾರಿತ ಬಯೋಮೆಟೀರಿಯಲ್ ಆಧಾರಿತ ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ.
- Hyspace Technologies Pvt Ltd (SkyServe) – ಉಪಗ್ರಹಗಳು ಕಕ್ಷೆಯಲ್ಲಿಯೇ ದತ್ತಾಂಶವನ್ನು ಸಂಸ್ಕರಿಸಿ, ಅದರ ಆಧಾರದ ಮೇಲೆ ಕಾರ್ಯಸಾಧ್ಯ ಒಳನೋಟಗಳನ್ನು ಸೃಷ್ಟಿಸಲು ನೆರವಾಗುವ ಆನ್‌ಬೋರ್ಡ್ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ. ಸಾಗರ ಮತ್ತು ಬಾಹ್ಯಾಕಾಶ ಪರಿಸ್ಥಿತಿಯ ಅರಿವು ಹಾಗೂ ಭೌಗೋಳಿಕ ಅಪಾಯಗಳ ಮೌಲ್ಯಮಾಪನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇದರ ಅನ್ವಯಿಕೆಗಳಿವೆ.
- OptM Media Solutions Pvt Ltd – ರಕ್ಷಣಾ ಕ್ಷೇತ್ರಕ್ಕಾಗಿ ಸ್ವದೇಶಿ, ಎಡ್ಜ್-ಎಐ ಆಧಾರಿತ ಸ್ವಾಯತ್ತ ನೆಲ ವಾಹನ ವ್ಯವಸ್ಥೆಗಳು ಮತ್ತು ಮಿಡಲ್‌ವೇರ್ ಅಭಿವೃದ್ಧಿಪಡಿಸುತ್ತಿದೆ. ರಿಯಲ್-ಟೈಮ್ ಸಂಸ್ಕರಣೆ, ಸುರಕ್ಷಿತ ಸಂಪರ್ಕ ವ್ಯವಸ್ಥೆ ಮತ್ತು ಸ್ವಾಯತ್ತ ಕಾರ್ಯಾಚರಣೆಗಳ ಸಾಮರ್ಥ್ಯಗಳನ್ನು ಒಳಗೊಂಡಿದೆ.
- SpaceFields Pvt Ltd – ಬಾಹ್ಯಾಕಾಶ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಿಗಾಗಿ ಸ್ವದೇಶಿ ಘನ ಪ್ರೊಪೆಲ್ಲೆಂಟ್ ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರೊಪಲ್ಷನ್ ವಿನ್ಯಾಸ, ವಸ್ತುಗಳು, ಉತ್ಪಾದನೆ, ಏಕೀಕರಣ ಮತ್ತು ಪರೀಕ್ಷೆ ಸೇರಿದಂತೆ ಹಲವು ಸಾಮರ್ಥ್ಯಗಳನ್ನು ಹೊಂದಿದೆ.
- UNMANND Autonomy Pvt Ltd – ಹೆಚ್ಚಿನ ಎತ್ತರದಲ್ಲಿ ಕಾರ್ಯನಿರ್ವಹಿಸುವ ಲಾಜಿಸ್ಟಿಕ್ಸ್ ಡ್ರೋನ್‌ಗಳು ಮತ್ತು ಡ್ರೋನ್ ವಿರೋಧಿ ವ್ಯವಸ್ಥೆಗಳು ಸೇರಿದಂತೆ ಸ್ವಾಯತ್ತ ವೈಮಾನಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಜಿಪಿಎಸ್ ಲಭ್ಯವಿಲ್ಲದ ಪರಿಸರಗಳಲ್ಲಿಯೂ ಕಾರ್ಯನಿರ್ವಹಿಸಲು ಸ್ವದೇಶಿ ಸ್ವಾಯತ್ತತೆ, ಸಂವಹನ ಮತ್ತು ನ್ಯಾವಿಗೇಷನ್ ತಂತ್ರಜ್ಞಾನಗಳನ್ನು ಬಳಸುತ್ತಿದೆ.
- Yaanendriya Pvt Ltd – ರಕ್ಷಣಾ, ಏರೋಸ್ಪೇಸ್, ರೋಬೋಟಿಕ್ಸ್ ಮತ್ತು ಕೈಗಾರಿಕಾ ಅನ್ವಯಿಕೆಗಳಿಗಾಗಿ ಸ್ವದೇಶಿ ಸೆನ್ಸಿಂಗ್, ನ್ಯಾವಿಗೇಷನ್ ಮತ್ತು ಎಂಬೆಡೆಡ್ ಕಂಟ್ರೋಲ್ ವ್ಯವಸ್ಥೆಗಳನ್ನು ನಿರ್ಮಿಸುತ್ತಿದೆ. ಜಿಪಿಎಸ್ ಸೀಮಿತವಾಗಿರುವ ಪರಿಸರಗಳಿಗಾಗಿ ನ್ಯಾವಿಗೇಷನ್ ಪರಿಹಾರಗಳನ್ನೂ ಅಭಿವೃದ್ಧಿಪಡಿಸುತ್ತಿದೆ.
‘ಮೂರನೇ ವ್ಯಾಲಿ ಆಫ್ ಡೆತ್’ ಸವಾಲಿಗೆ ಪರಿಹಾರ
ಕರ್ನಾಟಕದ ಡೀಪ್‌ಟೆಕ್ ಪರಿಸರ ವ್ಯವಸ್ಥೆಯ ಭಾಗವಾಗಿ ಸ್ಥಾಪನೆಯಾಗಿರುವ ಇನೋವರ್ಸ್, ತಂತ್ರಜ್ಞಾನ ಮೌಲ್ಯಮಾಪನ ಮತ್ತು ದೊಡ್ಡ ಪ್ರಮಾಣದ ವಾಣಿಜ್ಯ ನಿಯೋಜನೆಯ ನಡುವಿನ ಅಂತರವನ್ನು ನಿವಾರಿಸುವತ್ತ ಗಮನಹರಿಸಿದೆ.
ಡೀಪ್‌ಟೆಕ್ ಎನೇಬ್ಲರ್ ಕಾರ್ಯಕ್ರಮವು ಉತ್ಪನ್ನ-ಮಾರುಕಟ್ಟೆ ಹೊಂದಾಣಿಕೆ, ಗಮನಾರ್ಹ ಆದಾಯ ಮತ್ತು ಬಂಡವಾಳದ ಆಧಾರವನ್ನು ಈಗಾಗಲೇ ಹೊಂದಿರುವ, ಆದರೆ ಮೂಲಸೌಕರ್ಯ, ಆಂಕರ್ ಗ್ರಾಹಕರು, ಉತ್ಪಾದನಾ ಸಿದ್ಧತೆ, ನಿಯಂತ್ರಣಾತ್ಮಕ ಬೆಂಬಲ ಮತ್ತು ಸ್ಕೇಲ್‌ಅಪ್ ಬಂಡವಾಳಕ್ಕೆ ಸಮನ್ವಯಿತ ಪ್ರವೇಶದ ಅಗತ್ಯವಿರುವ ನವೋದ್ಯಮಗಳನ್ನು ಗುರಿಯಾಗಿಸಿಕೊಂಡಿದೆ.
ಈ ಹಂತವನ್ನು ‘ಮೂರನೇ ವ್ಯಾಲಿ ಆಫ್ ಡೆತ್’ ಎಂದು ಕರೆಯಲಾಗಿದ್ದು, ಆರಂಭಿಕ ವಾಣಿಜ್ಯ ಸಾಧನೆಯಿಂದ ನಿರಂತರ ವಾಣಿಜ್ಯ ಪ್ರಮಾಣದ ಬೆಳವಣಿಗೆಯತ್ತ ಸಾಗುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ಇದು ಸೂಚಿಸುತ್ತದೆ.
ಪ್ರತಿಯೊಂದು ನವೋದ್ಯಮದ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗುವ ನಿಶ್ಚಿತ ಎಂಗೇಜ್‌ಮೆಂಟ್ ಪ್ಲಾನ್ ಮೂಲಕ, ಗುರುತಿಸಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಳೆಯಬಹುದಾದ ಪ್ರಗತಿ ಸಾಧಿಸಲು ಡೀಪ್‌ಟೆಕ್ ಎನೇಬ್ಲರ್ ಕಾರ್ಯಕ್ರಮವು ಕಾರ್ಯನಿರ್ವಹಿಸಲಿದೆ.
ಇನೋವರ್ಸ್ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹುಂಗುಂದ್ ಅವರು ಮಾತನಾಡಿ, “ನಮ್ಮ ಮೊದಲ ತಂಡದಲ್ಲಿರುವ ಏಳು ಕಂಪನಿಗಳು ಕಠಿಣ ತಂತ್ರಜ್ಞಾನಗಳನ್ನು ನಿರ್ಮಿಸಿ, ಅವುಗಳನ್ನು ಮೌಲ್ಯೀಕರಿಸುವ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿವೆ. ಈಗ ಅವುಗಳ ಮುಂದಿರುವ ಸವಾಲು ವಿಭಿನ್ನವಾಗಿದೆ. ವೈಯಕ್ತಿಕ ನಿಯೋಜನೆಗಳಿಂದ ಪುನರಾವರ್ತಿಸಬಹುದಾದ ವಾಣಿಜ್ಯ ಪ್ರಮಾಣದ ಬೆಳವಣಿಗೆಯತ್ತ ಸಾಗಲು ಅವುಗಳಿಗೆ ಸೂಕ್ತ ಗ್ರಾಹಕರು, ಮೂಲಸೌಕರ್ಯ, ನಿಯಂತ್ರಣಾತ್ಮಕ ಮಾರ್ಗಗಳು, ಬಂಡವಾಳ ಮತ್ತು ಪರಿಸರ ವ್ಯವಸ್ಥೆಯ ಪಾಲುದಾರಿಕೆಗಳ ಅಗತ್ಯವಿದೆ. ಪ್ರತಿಯೊಂದು ಕಂಪನಿಯ ಬೆಳವಣಿಗೆಯ ಅಗತ್ಯಗಳಿಗೆ ಅನುಗುಣವಾಗಿ ಈ ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ಮಾರ್ಗವನ್ನು ರೂಪಿಸುವುದು ಇನೋವರ್ಸ್‌ನ ಪಾತ್ರವಾಗಿದೆ. ಡೀಪ್‌ಟೆಕ್ ಕಂಪನಿಗಳಿಗೆ ‘ಮೂರನೇ ವ್ಯಾಲಿ ಆಫ್ ಡೆತ್’ ದಾಟಲು ವ್ಯವಸ್ಥಿತವಾಗಿ ಬೆಂಬಲ ನೀಡಲು ಸಾಧ್ಯ ಎಂಬುದನ್ನು ಮೊದಲ ತಂಡವು ತೋರಿಸಲಿದೆ” ಎಂದರು.
ಮೊದಲ ತಂಡಕ್ಕೆ ಬಲ ನೀಡುವ ಕರ್ನಾಟಕದ ಡೀಪ್‌ಟೆಕ್ ಪರಿಸರ ವ್ಯವಸ್ಥೆ
ಸಂಶೋಧನಾ ಸಂಸ್ಥೆಗಳು, ಇನ್‌ಕ್ಯುಬೇಟರ್‌ಗಳು, ಸೆಂಟರ್ ಆಫ್ ಎಕ್ಸಲೆನ್ಸ್‌ಗಳು, ವಿಶೇಷ ಪರೀಕ್ಷಾ ಸೌಲಭ್ಯಗಳು, ಹೂಡಿಕೆದಾರರು ಮತ್ತು ಸರ್ಕಾರದ ಬೆಂಬಲಿತ ಕಾರ್ಯಕ್ರಮಗಳ ಮೂಲಕ ಕರ್ನಾಟಕವು ಈಗಾಗಲೇ ಬಲಿಷ್ಠ ಡೀಪ್‌ಟೆಕ್ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ.
ಇನೋವರ್ಸ್ ಮಂಡಳಿಯ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು ಮಾತನಾಡಿ, “ಡೀಪ್‌ಟೆಕ್ ಕಂಪನಿಗಳ ಬೆಳವಣಿಗೆಯ ಪಯಣವು ಸಾಂಪ್ರದಾಯಿಕ ನವೋದ್ಯಮಗಳಿಗಿಂತ ವಿಭಿನ್ನವಾಗಿದೆ. ತಂತ್ರಜ್ಞಾನವನ್ನು ನಿರ್ಮಿಸುವುದು ಮೊದಲ ಹಂತವಷ್ಟೇ. ಆ ತಂತ್ರಜ್ಞಾನವನ್ನು ಪುನರಾವರ್ತಿಸಬಹುದಾದ ನಿಯೋಜನೆಗಳು, ಜಾಗತಿಕ ಮಾರುಕಟ್ಟೆಗಳು ಮತ್ತು ದೀರ್ಘಕಾಲಿಕ ಉದ್ಯಮಗಳಾಗಿ ಪರಿವರ್ತಿಸುವುದೇ ನಿಜವಾದ ಸವಾಲಾಗಿದೆ. ಈಗಾಗಲೇ ತಾಂತ್ರಿಕ ಮತ್ತು ವಾಣಿಜ್ಯ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಕಂಪನಿಗಳ ಸುತ್ತ ಉದ್ಯಮ, ಬಂಡವಾಳ, ಮೂಲಸೌಕರ್ಯ, ನೀತಿ ಮತ್ತು ಮಾರುಕಟ್ಟೆ ಪ್ರವೇಶವನ್ನು ಒಟ್ಟುಗೂಡಿಸುವ ಮೂಲಕ ಇನೋವರ್ಸ್ ಪರಿಸರ ವ್ಯವಸ್ಥೆಯಲ್ಲಿನ ಪ್ರಮುಖ ಅಂತರವೊಂದನ್ನು ಪರಿಹರಿಸುತ್ತಿದೆ. ಮೊದಲ ತಂಡವು ಕರ್ನಾಟಕದ ಡೀಪ್‌ಟೆಕ್ ಸಾಮರ್ಥ್ಯದ ಆಳ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯದಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಬಲಿಷ್ಠ ತಂತ್ರಜ್ಞಾನ ಕಂಪನಿಗಳ ಪೈಪ್‌ಲೈನ್ ನಿರ್ಮಿಸಲು ಈ ಮಾದರಿ ನೆರವಾಗಲಿದೆ” ಎಂದರು.
ಇನೋವರ್ಸ್‌ನ ಮಾಹಿತಿ ಪ್ರಕಾರ, ಬೆಂಗಳೂರಿನ ಡೀಪ್‌ಟೆಕ್ ಪರಿಸರ ವ್ಯವಸ್ಥೆಯಲ್ಲಿ 2,610 ಕಂಪನಿಗಳಿದ್ದು, ಈ ಪೈಕಿ 897 ಕಂಪನಿಗಳು ಬಂಡವಾಳ ಸಂಗ್ರಹಿಸಿವೆ. ಅವು ಒಟ್ಟಾರೆ ಸುಮಾರು 4.6 ಬಿಲಿಯನ್ ಡಾಲರ್ ಬಂಡವಾಳವನ್ನು ಸಂಗ್ರಹಿಸಿವೆ. ರಾಜ್ಯದಲ್ಲಿ 16 ಸೆಂಟರ್ ಆಫ್ ಎಕ್ಸಲೆನ್ಸ್‌ಗಳು ಮತ್ತು 50ಕ್ಕೂ ಹೆಚ್ಚು ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್‌ಗಳನ್ನು ಒಳಗೊಂಡಂತೆ ಒಟ್ಟು 204 ಇನ್‌ಕ್ಯುಬೇಟರ್‌ಗಳಿವೆ.
ಡೀಪ್‌ಟೆಕ್ ಎನೇಬ್ಲರ್ ಕಾರ್ಯಕ್ರಮವನ್ನು ಪ್ರತಿ ವರ್ಷ ಒಂಬತ್ತು ತಿಂಗಳ ಅವಧಿಯ ತಂಡವಾಗಿ ರೂಪಿಸಲಾಗಿದ್ದು, ಪ್ರತಿ ತಂಡದಲ್ಲಿ ಗರಿಷ್ಠ 10 ನವೋದ್ಯಮಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಮುಂದಿನ ತಂಡಗಳ ಮೂಲಕ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಡೀಪ್‌ಟೆಕ್ ನವೋದ್ಯಮಗಳಿಗೆ ಮುಂದಿನ ಹಲವು ದಶಕಗಳವರೆಗೆ ಬೆಂಬಲ ಒದಗಿಸುವ ಪುನರಾವರ್ತಿಸಬಹುದಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಇನೋವರ್ಸ್ ಹೊಂದಿದೆ.
ಇದರ ಜೊತೆಗೆ, ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತಿರುವ ಆರಂಭಿಕ ಆದಾಯ ಗಳಿಸುತ್ತಿರುವ ನವೋದ್ಯಮಗಳಿಗೆ ಉದ್ದೇಶಿತ ಬೆಂಬಲ ಒದಗಿಸುವ ಇನೋವರ್ಸ್ ಕನೆಕ್ಟ್ ಕಾರ್ಯಕ್ರಮವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.
ಆದಾಯವನ್ನು ಎರಡು ಪಟ್ಟು ಹೆಚ್ಚಿಸುವ ಗುರಿ
ಡೀಪ್‌ಟೆಕ್ ಎನೇಬ್ಲರ್ ಮತ್ತು ಕನೆಕ್ಟ್ ಕಾರ್ಯಕ್ರಮಗಳ ಮೊದಲ ತಂಡದ ಒಟ್ಟಾರೆ ವಾರ್ಷಿಕ ಆದಾಯವನ್ನು ಪ್ರಸ್ತುತ ಸುಮಾರು ₹35 ಕೋಟಿಯಿಂದ ₹70 ಕೋಟಿಗೆ ಹೆಚ್ಚಿಸುವ ಗುರಿಯನ್ನು ಇನೋವರ್ಸ್ ಹೊಂದಿದೆ.
ಅದೇ ರೀತಿ, ಬೆಳವಣಿಗೆ ಬಂಡವಾಳವನ್ನು ಪ್ರಸ್ತುತ ಸುಮಾರು ₹150 ಕೋಟಿಯಿಂದ ₹300 ಕೋಟಿಗೂ ಅಧಿಕಕ್ಕೆ ಹೆಚ್ಚಿಸುವ ಗುರಿಯನ್ನೂ ಹೊಂದಿದೆ.
ಮೊದಲ ತಂಡದ ಕಾರ್ಯಕ್ರಮವು ಜೂನ್ 2027ರವರೆಗೆ ನಡೆಯಲಿದ್ದು, ಪ್ರತಿ ಕಂಪನಿಯ ಆದಾಯ ಮತ್ತು ಬಂಡವಾಳದ ಗುರಿಗಳ ಜೊತೆಗೆ ಆಂಕರ್ ಗ್ರಾಹಕರ ಒಪ್ಪಂದಗಳು, ಪ್ರಮಾಣೀಕರಣಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶಕ್ಕೆ ರೂಪುಗೊಂಡ ಮಾರ್ಗಗಳ ಆಧಾರದ ಮೇಲೆ ಪ್ರಗತಿಯನ್ನು ದಾಖಲಿಸಲಾಗುತ್ತದೆ.
ಮೊದಲ ತಂಡ ಪೂರ್ಣಗೊಂಡ ನಂತರ ಎರಡನೇ ತಂಡಕ್ಕೆ ಅರ್ಜಿಗಳನ್ನು ಆಹ್ವಾನಿಸುವ ನಿರೀಕ್ಷೆಯಿದೆ.
