ಸಮಗ್ರ ಸುದ್ದಿ

ಹಳ್ಳಿಕಾರ್ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ: ಡಾ. ಜಿ. ಪರಮೇಶ್ವರ ಭರವಸೆ

Share

ಬೆಂಗಳೂರು:ಹಳ್ಳಿಕಾರ್ ಸಮುದಾಯವು ರಾಜ್ಯದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಸಮುದಾಯಗಳಲ್ಲಿ ಒಂದಾಗಿದ್ದು, ನನ್ನ ದೃಷ್ಟಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವಾಗಿದೆ. ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವ ಅಗತ್ಯವಿದೆ. ಹಿಂದುಳಿದ ವರ್ಗದ ಸೂಕ್ತ ಪ್ರವರ್ಗಕ್ಕೆ ಸೇರಿಸುವ ವಿಚಾರದಲ್ಲಿ ನನ್ನ ಸಂಪೂರ್ಣ ಸಹಮತಿ ಇದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕನ್ವೆನ್ಷನ್ ಹಾಲ್‌ನಲ್ಲಿ ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಅತ್ಯಧಿಕ ಅಂಕಗಳಿಸಿದ ಹಳ್ಳಿಕಾರ್ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ಸಮುದಾಯಗಳು ಒಂದಲ್ಲೊಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವುದನ್ನು ನಾವು ನೋಡಿದ್ದೇವೆ. ರಾಜ್ಯದಲ್ಲಿ ಅನೇಕ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಂತಹ ಸಮುದಾಯಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಚಿನ್ನಸ್ವಾಮಿ ಆಯೋಗ, ವೆಂಕಟಸ್ವಾಮಿ ಆಯೋಗ ಮತ್ತು ಕಾಂತರಾಜ್ ಆಯೋಗಗಳನ್ನು ರಚಿಸಲಾಗಿತ್ತು. ಯಾವ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂಬುದನ್ನು ಗುರುತಿಸಿ, ಅವುಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಆಯೋಗಗಳನ್ನು ರಚಿಸಲಾಗಿತ್ತು. ಆದರೂ ಬಹಳಷ್ಟು ಸಮುದಾಯಗಳು ಇನ್ನೂ ಹಿಂದುಳಿದಿವೆ ಎಂದರು.

ಹಳ್ಳಿಕಾರ್ ಸಮುದಾಯವು ನನ್ನ ದೃಷ್ಟಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವಾಗಿದೆ. ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕಿದೆ. ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗದ ಪ್ರವರ್ಗಕ್ಕೆ ಸೇರಿಸುವ ವಿಚಾರದಲ್ಲಿ ನಾನು ಸಂಪೂರ್ಣ ಸಹಮತಿ ವ್ಯಕ್ತಪಡಿಸುತ್ತೇನೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುತ್ತೇನೆ. ಮುಖ್ಯಮಂತ್ರಿ ಅವರು ಮನಸ್ಸಿಗೆ ತೆಗೆದುಕೊಂಡರೆ ಕೆಲಸ ಆದಂತೆಯೇ. ಅವರು ಒಪ್ಪುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ದೊರೆಯಬೇಕು. ಅದನ್ನೇ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಪಾದಿಸಿದ್ದಾರೆ. ಹಳ್ಳಿಕಾರ್ ಸಮುದಾಯವು ಹಿಂದುಳಿದ ವರ್ಗದ ಯಾವ ಪ್ರವರ್ಗಕ್ಕೆ ಸೇರಲು ಅರ್ಹವಾಗಿದೆಯೋ, ಆ ಪ್ರವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಕೆ.ಎಂ.ನಾಗರಾಜ ಅವರ ಸಮಾಜಮುಖಿ ಕಳಕಳಿಗೆ ಡಿಸಿಎಂ ಮೆಚ್ಚುಗೆ: ಸುಮಾರು 2,500 ವಿದ್ಯಾರ್ಥಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸುಮಾರು ₹2 ಕೋಟಿ ಹಣವನ್ನು ಕೆ.ಎಂ. ನಾಗರಾಜ ಅವರು ಪುರಸ್ಕಾರದ ರೂಪದಲ್ಲಿ ನೀಡುತ್ತಿದ್ದಾರೆ. ಇದಕ್ಕಿಂತ ಸಮಾಜದ ಮೇಲಿನ ಕಳಕಳಿಯನ್ನು ಇನ್ನೆಲ್ಲಿ ನೋಡಲು ಸಾಧ್ಯ ಎಂದರು.

ಸಾರ್ವಜನಿಕ ಬದುಕಿನಲ್ಲಿ ಸಮಾಜದ ಮೇಲಿನ ಕಳಕಳಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದಕ್ಕೆ ಇಂತಹ ಕಾರ್ಯಗಳು ಉದಾಹರಣೆಯಾಗುತ್ತವೆ. ಕೆಲವರು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಕಲ್ಯಾಣ ಮಂಟಪಗಳನ್ನು ನಿರ್ಮಿಸುತ್ತಾರೆ, ಇತರ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಆದರೆ ಕೆ.ಎಂ. ನಾಗರಾಜ ಅವರು ಸಮಾಜದ ಮೇಲಿನ ಕಳಕಳಿಯನ್ನೇ ತಮ್ಮ ಸೇವೆಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಯಾವ ಕ್ಷೇತ್ರದ ಮೂಲಕ ಸಮಾಜಕ್ಕೆ ಹೆಚ್ಚು ಒಳಿತಾಗುತ್ತದೆ, ಯಾವ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತು ಅವರು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ಕೆಲಸವನ್ನು ಕೆ.ಎಂ. ನಾಗರಾಜ ಅವರು ಮಾಡದೇ ಇದ್ದಿದ್ದರೆ ಯಾರೂ ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ನಾಲ್ಕು ಜನರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಕೆ.ಎಂ. ನಾಗರಾಜ ಅವರು ಸಮಾಜ ಸೇವೆಯ ನಿಟ್ಟಿನಲ್ಲಿ ನಮಗೆ ಮಾರ್ಗದರ್ಶನ ಮಾಡಿ ಬೆಳೆಸಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಅನೇಕ ಭಾಷಣಕಾರರು ಹೇಳಿರುವುದನ್ನು ಪ್ರಸ್ತಾಪಿಸಿದ ಅವರು, ತಮ್ಮ ರಾಜಕೀಯ ಜೀವನದಲ್ಲಿಯೂ ನಾಗರಾಜ ಅವರ ಸಲಹೆ ಮತ್ತು ಸಹಕಾರವನ್ನು ಸ್ಮರಿಸಿದರು.

2010ರಲ್ಲಿ ಸೋನಿಯಾ ಗಾಂಧಿಯವರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ಆ ಸಂದರ್ಭದಲ್ಲಿ ಕೆ.ಎಂ. ನಾಗರಾಜ ಅವರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋಗಿದ್ದೆ. ಇಡೀ ರಾಜ್ಯ ಪ್ರವಾಸ ಮಾಡಬೇಕು, ಪ್ರತಿಯೊಂದು ಕ್ಷೇತ್ರಕ್ಕೂ ತೆರಳಿ ಪಕ್ಷ ಸಂಘಟನೆ ಮಾಡಬೇಕು, ನನ್ನಿಂದ ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಅವರು ತಿಳಿಸಿದ್ದರು ಎಂದು ನೆನಪಿಸಿಕೊಂಡರು.

ನನ್ನ ಮೊದಲ ರಾಜ್ಯ ಪ್ರವಾಸಕ್ಕಾಗಿ ಪಕ್ಷದ ನಾಯಕರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಕರ್ಯಗಳಿದ್ದ ಬಸ್ ವ್ಯವಸ್ಥೆಯನ್ನು ಅವರು ಮಾಡಿಕೊಟ್ಟಿದ್ದರು. ಪಕ್ಷ ಸಂಘಟನೆಯ ಕುರಿತು ಸಲಹೆಗಳನ್ನು ನೀಡಿದ್ದರು. ರಾಜಕಾರಣದಲ್ಲಿ ನಾನು ಯಶಸ್ವಿಯಾಗಲು ಅಂತಹ ಸಲಹೆ-ಸೂಚನೆಗಳು ಸಹಾಯವಾಗಿವೆ ಎಂದು ಹೇಳಿದರು.

ಶಿಕ್ಷಣ ಬಹಳ ದೊಡ್ಡ ಕ್ಷೇತ್ರವಾಗಿದೆ. ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳು ಭಾರತವನ್ನು ಬಲಿಷ್ಠಗೊಳಿಸಿವೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶದಲ್ಲಿ ಶೇ.12ರಷ್ಟು ಮಾತ್ರ ಅಕ್ಷರಸ್ಥರಿದ್ದರು. ಇಂದು ಭಾರತದಲ್ಲಿ ಶೇ.80ಕ್ಕಿಂತ ಹೆಚ್ಚು ಜನ ಅಕ್ಷರಸ್ಥರಾಗಿದ್ದಾರೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಶಿಕ್ಷಣ ಪಡೆದ ಪದವೀಧರರು ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಪ್ರಪಂಚದ ಯಾವುದೇ ದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾವಂತರನ್ನು ಸೃಷ್ಟಿಸುವುದು ಸುಲಭವಲ್ಲ. ಅಮೆರಿಕ ಕೂಡ 15 ಲಕ್ಷ ಎಂಜಿನಿಯರ್‌ಗಳು ಮತ್ತು ಒಂದು ಲಕ್ಷ ವೈದ್ಯರನ್ನು ಉತ್ಪಾದಿಸುವುದಿಲ್ಲ. ಶಿಕ್ಷಣ ಕ್ಷೇತ್ರ ತಂದಿರುವ ಬದಲಾವಣೆಯ ಪರಿಣಾಮವೇ ಇದು ಎಂದರು.

ನಮಗೆ ಎರಡು ಪ್ರಮುಖ ವಿಚಾರಗಳು ಅಗತ್ಯವಾಗಿವೆ. ಮಾನವತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ತಂದೆ-ತಾಯಿ ನಮ್ಮನ್ನು ಯಾವ ರೀತಿಯಲ್ಲಿ ಬೆಳೆಸಿದ್ದಾರೆ ಎಂಬುದನ್ನು ಅರಿತು, ಅವರು ನೀಡಿರುವ ಸಂಸ್ಕಾರ ಮತ್ತು ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಯಾವ ಶಿಕ್ಷಣ ಪಡೆದರೆ ನನಗೂ ಮತ್ತು ಸಮಾಜಕ್ಕೂ ಉಪಯೋಗವಾಗುತ್ತದೆ ಎಂಬುದು ಬಹಳ ಮುಖ್ಯ. ಇದನ್ನು ಅರಿತು ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ದೇಶದಲ್ಲಿ ನಡೆಯುತ್ತಿರುವ ಬದಲಾವಣೆಯ ಭಾಗವಾಗಬೇಕು. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲು ಇರಬೇಕು. ಫೌಂಡೇಷನ್ ವತಿಯಿಂದ ನೀಡಲಾಗುತ್ತಿರುವ ಈ ಪುರಸ್ಕಾರ ನಿಮ್ಮ ಮುಂದಿನ ಕಲಿಕೆಗೆ ಸಹಾಯವಾಗಲಿ ಎಂದು ಹಾರೈಸಿದರು.

ಎಐ ಸೇರಿದಂತೆ ತಂತ್ರಜ್ಞಾನ ಬದಲಾವಣೆಗೆ ತಕ್ಕ ಶಿಕ್ಷಣ ಅಗತ್ಯ: ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಬಹಳ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕ್ಷಣಾರ್ಧದಲ್ಲಿ ತೀರ್ಮಾನ ಕೈಗೊಳ್ಳಲು ಅಗತ್ಯವಾದ ಮಾಹಿತಿಯನ್ನೂ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಜೆನೆಟಿಕ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸೃಷ್ಟಿಸುವ ಮಟ್ಟಿಗೆ ವಿಜ್ಞಾನಿಗಳು ಮುಂದುವರಿದಿದ್ದರು. ಆದರೆ ಅದನ್ನು ಮುಂದುವರಿಸುವ ಬದಲು ಸಂಶೋಧನೆಯ ಮಟ್ಟಕ್ಕೆ ಸೀಮಿತಗೊಳಿಸಬೇಕು ಎಂದು ಯೂರೋಪ್ ದೇಶಗಳಲ್ಲಿ ಚರ್ಚ್ ಸೂಚಿಸಿತ್ತು. ಅದೇ ರೀತಿಯಲ್ಲಿ ಇಂದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಂದಿದೆ. ಇದರ ಮೂಲಕ ಏನು ಬೇಕಾದರೂ ಕ್ಷಣಾರ್ಧದಲ್ಲಿ ಮಾಡುವಂತಹ ತಂತ್ರಜ್ಞಾನ ಅಭಿವೃದ್ಧಿಯಾಗಿದೆ ಎಂದರು.

ಎಐ ಆವಿಷ್ಕಾರದಲ್ಲಿ ಎಲ್ಲ ರೀತಿಯ ಬದಲಾವಣೆಗಳನ್ನು ಕೈಗೊಳ್ಳುವ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ನಾವು ಪಡೆಯುವ ಶಿಕ್ಷಣ ನಮಗೂ ಮತ್ತು ಸಮಾಜಕ್ಕೂ ಉಪಯೋಗವಾಗುವಂತಿರಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡೇ ಆಧುನಿಕತೆಯತ್ತ ಕೊಂಡೊಯ್ಯುವ ಶಿಕ್ಷಣ ನಮಗೆ ಬೇಕಾಗಿದೆ ಎಂದು ಹೇಳಿದರು.

ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳೂ ಸಾಗಬೇಕು. ನಿಮಗೆ ನೀಡಲಾಗುತ್ತಿರುವ ಈ ಉತ್ತೇಜನ ನಿಮ್ಮ ಭವಿಷ್ಯದ ಶಿಕ್ಷಣ ಮತ್ತು ಸಾಧನೆಗೆ ಉಪಯೋಗವಾಗಲಿ ಎಂದು ಡಾ. ಜಿ. ಪರಮೇಶ್ವರ ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಹೆಚ್.ಸಿ.ಬಾಲಕೃಷ್ಣ, ಟಿ.ರಘಮೂರ್ತಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಸಿ.ಪುಟ್ಟಣ್ಣ, ಆರ್.ಎಂ.ಅರ್.ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಂ.ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.


Share

You cannot copy content of this page