ಸಮಗ್ರ ಸುದ್ದಿ

ಏಷ್ಯನ್ ಗೇಮ್ಸ್ ಪದಕ ವಿಜೇತೆ ಎಂ.ಆರ್. ಪೂವಮ್ಮ ಅವರನ್ನು ಸನ್ಮಾನಿಸಿದ ಹೆಚ್.ಡಿ.ಕುಮಾರಸ್ವಾಮಿ

Share

ಬೆಂಗಳೂರು:ಏಷ್ಯನ್ ಗೇಮ್ಸ್ ರಿಲೆಯಲ್ಲಿ ಚಿನ್ನ ಪದಕ ಗೆದ್ದ ಹೆಮ್ಮೆಯ ಕನ್ನಡತಿ ಎಂ.ಆರ್. ಪೂವಮ್ಮ ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಸಚಿವರ ಆಹ್ವಾನದ ಮೇರೆಗೆ ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ ಪೂವಮ್ಮ ಅವರನ್ನು ಹೆಚ್ಎಂಟಿ ಭವನದಲ್ಲಿರುವ ತಮ್ಮ ಕಚೇರಿಗೆ ಬರಮಾಡಿಕೊಂಡ ಕೇಂದ್ರ ಸಚಿವರು; ರಾಜ್ಯ ಮತ್ತು ದೇಶಕ್ಕೆ ಹೆಮ್ಮೆ ಕೀರ್ತಿಯನ್ನು ತಂದ ರಾಜ್ಯದ ಅವರನ್ನು ಸತ್ಕರಿಸಿದರು.

ಪೂವಮ್ಮ ಅವರು ತಮ್ಮ ಪತಿ ಪೋಷಕರು ಹಾಗೂ ಇಡೀ ಕುಟುಂಬದೊಂದಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಚಿವರು ಅವರ ಇಡೀ ಕುಟುಂಬದ ಸದಸ್ಯರ ಜೊತೆ ಕೆಲಕಾಲ ಚರ್ಚೆ ನಡೆಸಿದರು.

ಪೂವಮ್ಮ ಸಾಧನೆಯ ಬಗ್ಗೆ ಅತ್ಯಂತ ಸಂತಸ ವ್ಯಕ್ತಪಡಿಸಿದ ಸಚಿವರು; ನಿಮ್ಮ ಸಾಧನೆ ಮತ್ತು ಪರಿಶ್ರಮ ಹೊಸ ತಲೆಮಾರಿನ ಯುವಜನರಿಗೆ ಸ್ಪೂರ್ತಿಯಾಗಲಿ. ನಿಮ್ಮಿಂದ ರಾಜ್ಯದ ಮತ್ತು ರಾಷ್ಟ್ರದ ಕ್ರೀಡೆಗೆ ದೊಡ್ಡ ಕೊಡುಗೆ ದೊರೆಯುವಂತೆ ಆಗಲಿ ಎಂದು ಹಾರೈಸಿದರು.

ಅಲ್ಲದೆ ಪೂವಮ್ಮ ಅವರ ಸಾಧನೆಯನ್ನು ಅವರಿಂದಲೇ ಕೇಳಿ ತಿಳಿದುಕೊಂಡ ಸಚಿವರು; ನಿಮ್ಮ ಸಾಧನೆಗೆ ಕೇಂದ್ರ ಸರ್ಕಾರವು ಹಾಗೂ ವೈಯಕ್ತಿಕವಾಗಿ ನಾವು ಸಹ ಪ್ರೋತ್ಸಾಹ ನೀಡುತ್ತೇವೆ. ನಿಮ್ಮ ಯಶಸ್ಸಿನ ದಾರಿ ಮುಂದುವರೆಯಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಪೂವಮ್ಮ ಅವರ ತಂದೆ ತಾಯಿಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸಚಿವರು ವಿಚಾರಿಸಿದರು. ಎಲ್ಲರಿಗೂ ಸಿಹಿ ತಿನಿಸಿ ಬೀಳ್ಕೊಟ್ಟರು. ಹಾಗೆಯೇ ಇಡೀ ಪರಿವಾರದೊಂದಿಗೆ ನವದೆಹಲಿಯ ತಮ್ಮ ನಿವಾಸಕ್ಕೆ ಆಗಮಿಸುವಂತೆ ಇದೇ ಸಂದರ್ಭದಲ್ಲಿ ಪೂವಮ್ಮ ಅವರಿಗೆ ಸಚಿವರು ಆಹ್ವಾನ ನೀಡಿದರು. ಅಲ್ಲದೆ ಹೆಚ್ಎಂಟಿ ಕೈಗಡಿಯಾರಗಳನ್ನು ಎಲ್ಲರಿಗೂ ಉಡುಗೊರೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು; ನರೇಂದ್ರ ಮೋದಿಯವರ ಕೇಂದ್ರ ಸರ್ಕಾರವು ಕ್ರೀಡೆಗೆ ಅತಿ ಹೆಚ್ಚು ಪ್ರೋತ್ಸಾಹ ಮತ್ತು ಆದ್ಯತೆಯನ್ನು ಕೊಡುತ್ತಿದೆ. ಅದರಲ್ಲಿಯೂ ದೇಶಿಯ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗವಂತೆ ಎಲ್ಲಾ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಮುಖ್ಯವಾಗಿ ರಾಷ್ಟ್ರದ ಉದ್ದಗಲಕ್ಕೂ ಕ್ರೀಡೆಗೆ ಬೇಕಾಗಿರುವ ಅತ್ಯಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮೋದಿ ಅವರ ಕಾಲದಲ್ಲಿ ಪರಿವರ್ತನಾತ್ಮಕ ಅಭಿವೃದ್ಧಿ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಚಿವರ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಪೂವಮ್ಮ ಅವರು; ನಾನು ಪದಕಾಗಿದ್ದ ಕೂಡಲೇ ಎಲ್ಲರಿಗಿಂತ ಮೊದಲೇ ನನ್ನನ್ನು ಅಭಿನಂದಿಸಿದವರು ಕುಮಾರಸ್ವಾಮಿ ಸರ್ ಅವರು. ಅವರಿಂದ ದೊರೆತ ಪ್ರೋತ್ಸಾಹ ಮತ್ತು ಉತ್ತೇಜನಕ್ಕೆ ನನ್ನ ಧನ್ಯವಾದಗಳು. ಅಲ್ಲದೆ ಇಂದು ಕೇಂದ್ರ ಸಚಿವರೆ ನನ್ನನ್ನು ಖುದ್ದಾಗಿ ಬರಮಾಡಿಕೊಂಡು ಗೌರವಿಸಿರುವುದು ನನ್ನ ಬದುಕಿನ ಆವಿಸ್ಮರಣೀಯ ಕ್ಷಣವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.


Share

You cannot copy content of this page