ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ಸೌಂದರ್ಯ ಹೆಚ್ಚಿಸುವ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ನಾಗರಿಕ ಜವಾಬ್ದಾರಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಚಟುವಟಿಕೆಗಳ ಅಡಿಯಲ್ಲಿ ಗೋಡೆಗಳ ಸೌಂದರ್ಯೀಕರಣ ಕಾರ್ಯವನ್ನು (ವಾಲ್ ಪೇಂಟಿಂಗ್) ಹಮ್ಮಿಕೊಂಡು ನಿರ್ವಹಿಸಲಾಗುತ್ತಿದೆ.
ಸುಂದರ ಮತ್ತು ಸ್ವಚ್ಛ ನಗರ ನಿರ್ಮಾಣಕ್ಕೆ ಕಲಾತ್ಮಕ ಹೆಜ್ಜೆ
ನಗರದ ಪ್ರಮುಖ ರಸ್ತೆ ಬದಿಗಳು, ಸಾರ್ವಜನಿಕ ಸ್ಥಳಗಳು ಹಾಗೂ ಬ್ಲಾಕ್‌ಸ್ಪಾಟ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ. ರಸ್ತೆ ಬದಿಯಲ್ಲಿರುವ ಬ್ಲಾಕ್‌ಸ್ಪಾಟ್ ಹಾಗೂ ವಿರೂಪಗೊಂಡಿರುವಂತಹ ಕಾಂಪೌಂಡ್ ಗೋಡೆಗಳ ಮೇಲೆ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಜಾಗೃತಿ ಮೂಡಿಸುವಂತಹ ಕಲಾತ್ಮಕ ವರ್ಣಚಿತ್ರಗಳನ್ನು ಬಿಡಿಸಲಾಗುತ್ತಿದೆ. ಇದರಿಂದ ರಸ್ತೆ ಬದಿಯಲ್ಲಿ ಸಂಚರಿಸುವವರಿಗೆ ನಾಗರಿಕ ಪ್ರಜ್ಞೆ ಮೂಡಿಸಲು ಹಾಗೂ ನಗರದ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ತಿಳಿಸಿದರು.
ಆರು ತಿಂಗಳಲ್ಲಿ 2,160 ಮೀಟರ್ ಉದ್ದಕ್ಕೂ ಆಕರ್ಷಕ ವರ್ಣಚಿತ್ರಗಳು
ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಚಟುವಟಿಕೆಗಳ ಭಾಗವಾಗಿ ಕಳೆದ ಆರು ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯ ಒಟ್ಟು 2,160 ಮೀಟರ್ ಉದ್ದದ 25 ಕಾಂಪೌಂಡ್ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಪರಿಸರ ಸಂರಕ್ಷಣೆ, ತ್ಯಾಜ್ಯ ವಿಂಗಡಣೆ, ಸ್ವಚ್ಛತೆ ಹಾಗೂ ನಾಗರಿಕ ಪ್ರಜ್ಞೆ ಮೂಡಿಸುವಂತಹ ಸಂದೇಶಗಳನ್ನು ಚಿತ್ರಗಳ ಮೂಲಕ ಸಾರಲಾಗಿದೆ ಎಂದು ತಿಳಿಸಿದರು.
ವಿವಿಧ ವಿಭಾಗಗಳಲ್ಲಿ ಕೈಗೊಂಡ ವಾಲ್ ಪೇಂಟಿಂಗ್ ವಿವರ
ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಕಾಂಪೌಂಡ್ ಗೋಡೆ ಸೌಂದರ್ಯೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಜಯನಗರ ವಿಭಾಗದಲ್ಲಿ 630 ಮೀಟರ್ ಉದ್ದದ ಒಟ್ಟು 9 ಗೋಡೆಗಳು, ಬಿಟಿಎಂ ವಿಭಾಗದಲ್ಲಿ ಒಟ್ಟು 650 ಮೀಟರ್ ಉದ್ದದ 3 ಗೋಡೆಗಳು, ಬೆಂಗಳೂರು ದಕ್ಷಿಣ ವಿಭಾಗದಲ್ಲಿ 380 ಮೀಟರ್ ಉದ್ದದ 4 ಗೋಡೆಗಳು, ಪದ್ಮನಾಭನಗರ ವಿಭಾಗದಲ್ಲಿ 250 ಮೀಟರ್ ಉದ್ದದ 6 ಗೋಡೆಗಳು ಹಾಗೂ ಬೊಮ್ಮನಹಳ್ಳಿ ವಿಭಾಗದಲ್ಲಿ 250 ಮೀಟರ್ ಉದ್ದದ 3 ಗೋಡೆಗಳಿಗೆ ವರ್ಣಚಿತ್ರಗಳ ಮೂಲಕ ಹೊಸ ರೂಪ ನೀಡಲಾಗಿದೆ.
ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶ
ಗೋಡೆಗಳ ಸೌಂದರ್ಯೀಕರಣದ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ, ಪರಿಸರ ಕಾಳಜಿ ಮತ್ತು ತ್ಯಾಜ್ಯಮುಕ್ತ ನಗರ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ ಈ ಸೌಂದರ್ಯವನ್ನು ಕಾಪಾಡಿಕೊಂಡು ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಆಯುಕ್ತರಾದ ಕೆ. ಎನ್. ರಮೇಶ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
