ಸಮಗ್ರ ಸುದ್ದಿ

ವಿಧಾನಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಚಾಲನೆ

Share

ಬೆಂಗಳೂರು: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿರುವ ವಿಜಯ ಜ್ಯೋತಿ ಯಾತ್ರೆಗೆ, ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ವಿಧಾನಸೌಧದ ಪೂರ್ವ ದ್ವಾರದ ಭವ್ಯ ಮೆಟ್ಟಿಲುಗಳ ಮುಂಭಾಗದ ಬಳಿ ಚಾಲನೆ ನೀಡಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಬೆಳಗಾವಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅಕ್ಟೋಬರ್ 23ರಿಂದ 25ರವರೆಗೆ ನಡೆಯಲಿರುವ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವದ ಅಂಗವಾಗಿ ಈ ವಿಜಯ ಜ್ಯೋತಿ ಯಾತ್ರೆಯನ್ನು ಆಯೋಜಿಸಲಾಗಿದೆ.

ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಹೊರಹೊಮ್ಮಿದ ರಾಣಿ ಚೆನ್ನಮ್ಮ ಅವರ ಐತಿಹಾಸಿಕ ಹೋರಾಟವನ್ನು ಸ್ಮರಿಸುವುದು ಹಾಗೂ ಅವರ ಆದರ್ಶಗಳನ್ನು ಜನರಿಗೆ ಪರಿಚಯಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಶಾಸಕ ಬಾಬಾಸಾಹೇಬ್ ಪಾಟೀಲ್, ಕಲಮಠದ ಮಡಿವಾಳ ರಾಜೇಂದ್ರ ಸ್ವಾಮೀಜಿ ಹಾಗೂ ಪಂಚಾಕ್ಷರಿ ಮಹಾಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಬಿಜ್ಜರಗಿಯ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.


Share

You cannot copy content of this page