ಸಮಗ್ರ ಸುದ್ದಿ

ಅನ್ನಸೇವೆ’ ಆ್ಯಪ್‌ ನಾಳೆಯಿಂದ ರಾಜ್ಯಾದ್ಯಂತ ಲಭ್ಯ

Share

ಬೆಂಗಳೂರು:ಅನ್ನ ಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಸ್ವತಃ e-KYC (Know Your Customer) ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ‘ಅನ್ನ ಸೇವೆ’ ಮೊಬೈಲ್ ಆ್ಯಪ್‌ ನಾಳೆಯಿಂದ  (ಅಕ್ಟೋಬರ್ 14) ರಾಜ್ಯಾದ್ಯಂತ ಲಭ್ಯವಾಗಲಿದೆ

ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಹಾಗೂ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಮೊಬೈಲ್ ಆ್ಯಪ್‌ ಅನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1 ರಂದು ಬಿಡುಗಡೆ ಮಾಡಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಲಭ್ಯವಿತ್ತು.  ನಾಳೆಯಿಂದ ಉಳಿದ ಜಿಲ್ಲೆಗಳ ಫಲಾನುಭವಿಗಳೂ ಸಹ Google Play Storeನಿಂದ ‘ಅನ್ನ ಸೇವೆ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, UIDAI Face Authentication ಮೂಲಕ ಸ್ವಯಂ e-KYC ಪೂರ್ಣಗೊಳಿಸಬಹುದಾಗಿದೆ. 

ಅನ್ನ ಭಾಗ್ಯದ ಬಹುತೇಕ ಫಲಾನುಭವಿಗಳು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದು, ಉದ್ಯೋಗಕ್ಕಾಗಿ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. KYC ಪೂರ್ಣಗೊಳಿಸಲು ತಮ್ಮ ಕೆಲಸದ ಸ್ಥಳದಿಂದ ಸ್ವಗ್ರಾಮಗಳಿಗೆ ತೆರಳಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ಇದಲ್ಲದೆ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಿತ್ತು.  ‘ಅನ್ನ ಸೇವೆ’ ಆ್ಯಪ್‌ ಈ ತೊಂದರೆಗಳನ್ನು ನಿವಾರಿಸುವುದರ ಜೊತೆಗೆ, e-KYC ಪ್ರಕ್ರಿಯೆಯನ್ನು ಸರಳ ಹಾಗೂ ಅನುಕೂಲಕರವಾಗಿಸಲಿದೆ. 

‘ಅನ್ನಸೇವೆ’ ಆ್ಯಪ್ ಗೆ ಫಲಾನುಭವಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಅಕ್ಟೋಬರ್ 1 ರಿಂದ ಅಕ್ಟೋಬರ್ 12 ರವರೆಗೆ ಎಂಟು ಜಿಲ್ಲೆಗಳ ಒಟ್ಟು 1,60,267 ಫಲಾನುಭವಿಗಳು ಈ ಆ್ಯಪ್ ಉಪಯೋಗಿಸಿ e-KYC ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಆ್ಯಪ್ ನಾಳೆಯಿಂದ ಎಲ್ಲ ಜಿಲ್ಲೆಗಳಲ್ಲೂ ಲಭ್ಯವಿರುವುದರಿಂದ e-KYC ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ. 

e-KYC ಮಾಡಿಸಬೇಕಾದ ರಾಜ್ಯದ 2.67,64,276 ಫಲಾನುಭವಿಗಳ ಪೈಕಿ ಅಕ್ಟೋಬರ್ 12 ರವರೆಗೆ 2,06,76,278 ಫಲಾನುಭವಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಒಂದು ವರ್ಷದ ಮೊದಲು e-KYC ಮಾಡಿಸಿದ್ದ ಫಲಾನುಭವಿಗಳೂ ಮತ್ತೊಮ್ಮೆ ಕಡ್ಡಾಯವಾಗಿ e-KYC ಮಾಡಿಸಬೇಕೆಂದು ಇಲಾಖೆ ತಿಳಿಸಿದೆ. 

 e-KYC ಮಾಡಿಸದೇ ಇರುವ ಉಳಿದ ಫಲಾನುಭವಿಗಳು ಕೂಡಲೇ  ‘ಅನ್ನಸೇವೆ’ ಆ್ಯಪ್ ನ ಲಾಭ ಪಡೆದು ಆದಷ್ಟು ಬೇಗನೆ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಆಹಾರ, ನಾಗರೀಕ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವರಾದ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ. 


Share

You cannot copy content of this page