ಬೆಂಗಳೂರು: ಅಮೆರಿಕ, ಜಪಾನ್, ತೈವಾನ್, ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್ ದೇಶಗಳಿಂದ ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವುದಕ್ಕೆ ಪೂರಕವಾಗಿ ಆಯಾ ದೇಶಗಳಲ್ಲೇ ಇನ್ವೆಸ್ಟ್ ಕರ್ನಾಟಕ ಫೋರಂನ (ಐಕೆಎಫ್) ಕಚೇರಿಗಳನ್ನು ತೆರೆಯುವ ಚಿಂತನೆ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಇಲ್ಲಿ ತಿಳಿಸಿದರು.
ಖನಿಜ ಭವನದಲ್ಲಿ ನಡೆದ ಐಕೆಎಫ್ ನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ್ದು, ಸಾಧಕ-ಬಾಧಕ ಬಗ್ಗೆ ಸಮಾಲೋಚನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ದೇಶದ ಕೈಗಾರಿಕಾ ವಲಯದಲ್ಲಿ ಹೂಡಿಕೆಯನ್ನು ಸೆಳೆಯಲು ರಾಜ್ಯಗಳ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಕೆಲ ರಾಜ್ಯ ಸರಕಾರಗಳು ಈಗಾಗಲೇ ಹೂಡಿಕೆ ಸೆಳೆಯಲು ಮೇಲ್ಕಂಡ ರಾಷ್ಟ್ರಗಳಲ್ಲಿ ಕಚೇರಿ ತೆರೆಯಲು ಮುಂದಡಿ ಇಟ್ಟಿವೆ. ಕರ್ನಾಟಕ ಈ ವಿಚಾರದಲ್ಲಿ ಸುಮ್ಮನೆ ಕೂರಲಾಗದು. ಆದ್ದರಿಂದ ಒಂದೊಂದು ದೇಶಗಳಲ್ಲೂ ಇರುವ ಕೈಗಾರಿಕಾ ವಲಯವಾರು ಪ್ರಾಬಲ್ಯವನ್ನು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ’ ಎಂದಿದ್ದಾರೆ.
ತಯಾರಿಕೆ/ಉತ್ಪಾದನೆ, ಸೆಮಿಕಂಡಕ್ಟರ್, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಗಳತ್ತ ನಮ್ಮ ರಾಜ್ಯದ ಆರ್ಥಿಕತೆ ಹೊರಳು ಹಾದಿಯಲ್ಲಿದೆ. ಹೀಗಾಗಿ ಹೂಡಿಕೆ ಅತ್ಯಗತ್ಯವಾಗಿದೆ. ಆದ್ದರಿಂದ ನಾವು ಹಲವು ದೇಶಗಳಲ್ಲಿ ಐಕೆಎಫ್ ಕಚೇರಿಗಳನ್ನು ತೆರೆಯಲು ಅಥವಾ ಕೆಲವೆಡೆಗಳಲ್ಲಿ ಅಲ್ಲಲ್ಲಿ ಇರುವ ಸೂಕ್ತ/ತಜ್ಞ ವ್ಯಕ್ತಿಗಳನ್ನು ಮುಖ್ಯಸ್ಥರನ್ನಾಗಿ ನೇಮಿಸುವ ಕುರಿತು ಚರ್ಚಿಸಲಾಗಿದೆ. ಇನ್ನೊಂದಿಷ್ಟು ಕಡೆ ಐಕೆಎಫ್ ಮೂಲಕವೇ `ಕಂಟ್ರಿ ಲೀಡ್ಸ್ ಹೆಡ್’ಗಳನ್ನು ನೇಮಿಸುವ ಬಗ್ಗೆಯೂ ವಿಚಾರ ವಿನಿಮಯ ನಡೆಸಲಾಗಿದೆ. ಸದ್ಯದಲ್ಲೇ ಈ ಕುರಿತು ಮತ್ತೊಂದು ಸಭೆ ನಡೆಸಲಾಗುವುದು ಎಂದು ಅವರು ನುಡಿದಿದ್ದಾರೆ.
ಇನ್ವೆಸ್ಟ್ ಕರ್ನಾಟಕ ಫೋರಂ ಸಕ್ರಿಯವಾಗಿ ಇರಬೇಕೆಂದೇ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ಪುನಾರೂಪಿಸಿದೆ. ಬಂಡವಾಳ ಹೂಡಿಕೆಯಲ್ಲಿ ಈಗ ನಾವು ಜಾಗತಿಕ ಸ್ಪರ್ಧೆಯನ್ನು ಎದುರಿಸುತ್ತಿದ್ದೇವೆ. ಹೊಸ ಕೈಗಾರಿಕಾ ನೀತಿಯಲ್ಲಿ ಆದ್ಯತೆಯ ಕ್ಷೇತ್ರಗಳನ್ನು ಕೂಡ ಗುರುತಿಸಲಾಗಿದೆ. ಇದರಂತೆ ಐಕೆಎಫ್ ಮೂಲಕ ಈ ಹೊಸ ಉಪಕ್ರಮ ಕುರಿತು ಗಂಭೀರವಾಗಿ ಚಿಂತಿಸಲಾಗುತ್ತಿದೆ. ಹೂಡಿಕೆದಾರರು ಇರುವಲ್ಲಿಗೆ ನಾವೇ ಹೋಗಬೇಕಾದ್ದು ಅನಿವಾರ್ಯವಾಗಿದೆ. ಇಲ್ಲದೆ ಹೋದರೆ, ಅವರು ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಾರೆ ಎಂದು ಪಾಟೀಲ ಹೇಳಿದ್ದಾರೆ.
ಏಕಸ್ ಉದ್ಯಮ ಸಮೂಹದ ಸಿಇಒ ಅರವಿಂದ್ ಮೆಳ್ಳಿಗೇರಿ ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಐಕೆಎಫ್ ಸಿಓಓ ಪ್ರವೀಣ್ ಉಪಸ್ಥಿತರಿದ್ದರು.
