ಸಮಗ್ರ ಸುದ್ದಿ

ಗೃಹ ಜ್ಯೋತಿ ಸಮೀಕ್ಷೆ: ಬೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ದಾಖಲೆ ಸಲ್ಲಿಕೆಗೆ ಅವಕಾಶ

Share

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರು ಈ ತಿಂಗಳ 31ರೊಳಗೆ ಹತ್ತಿರದ ಬೆಸ್ಕಾಂ ಕಚೇರಿಗೆ ಖುದ್ದಾಗಿ ತೆರಳಿ ದಾಖಲೆಗಳನ್ನು ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

ಬೆಸ್ಕಾಂನ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ ಒಟ್ಟು 7429773 ಲಕ್ಷ ಗ್ರಾಹಕರು ಗೃಹ ಜ್ಯೋತಿ ಫಲಾನುಭವಿಗಳಿದ್ದು, ಈ ಪೈಕಿ 7240489 ಲಕ್ಷ ಗ್ರಾಹಕರ ಸಮೀಕ್ಷೆ (ಶೇ. 97.45) ಅಕ್ಟೋಬರ್‌ 14ಕ್ಕೆ ಪೂರ್ಣಗೊಂಡಿದೆ.

ಈ ಅಂಕಿ-ಅಂಶಗಳಲ್ಲಿ ಸಮೀಕ್ಷೆ ಸಂದರ್ಭದಲ್ಲಿ ಲಭ್ಯವಿಲ್ಲದ (ಬೀಗ ಹಾಕಿರುವ ಮನೆಗಳು, ಖಾಲಿ ಮನೆಗಳು) ಸುಮಾರು 16.37 ಲಕ್ಷ ಗ್ರಾಹಕರು ಕೂಡ ಸೇರಿದ್ದಾರೆ. ಈ ವರ್ಗದ ಗ್ರಾಹಕರಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಕೊನೆಯ ಅವಕಾಶ ಕಲ್ಪಿಸಲು ಅವಕಾಶ ನೀಡಬೇಕೆಂದು ಬೆಸ್ಕಾಂ ರಾಜ್ಯ ಸರ್ಕಾರಕ್ಕೆ ವಿನಂತಿಸಿತ್ತು.

ಗೃಹ ಜ್ಯೋತಿ ಸಮೀಕ್ಷೆ ಅವಧಿಯನ್ನು ಅಕ್ಟೋಬರ್‌ 31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಸಮೀಕ್ಷೆ ಸಂದರ್ಭದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 16.09 ಲಕ್ಷ ಮನೆಗೆ ಬೀಗ ಹಾಕಿರುವ ಮನೆಗಳು ಹಾಗೂ 28519 ಖಾಲಿ ಇರುವ ಮನೆಗಳನ್ನು ಗುರುತಿಸಲಾಗಿದೆ.

ಈ ಗ್ರಾಹಕರಿಗೆ ಒಂದು ಬಾರಿ ಅವಕಾಶ ಕಲ್ಪಿಸುವ ಸಲುವಾಗಿ ಈ ತಿಂಗಳ 31ರೊಳಗೆ ಖುದ್ದು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಬಂದು ದಾಖಲೆ ಸಲ್ಲಿಸಲು ವಿನಂತಿಸಲಾಗಿದ್ದು, ದಾಖಲೆಗಳ ಪರಿಶೀಲನೆಗೆ ಇದು ಕೊನೆಯ ಅವಕಾಶವಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


Share

You cannot copy content of this page