ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕಳೆದ 12 ರಿಂದ 15 ವರ್ಷಗಳಿಂದ ಮನರೇಗಾ ಯೋಜನೆಯ ಯಶಸ್ಸಿಗೆ ಶ್ರಮಿಸಿ, ಪ್ರಸ್ತುತ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) – ವಿಬಿ ಜಿ ರಾಮ್ಜಿ’ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಸುಮಾರು 3,657ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ತೀವ್ರ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ನೂತನ ಯೋಜನೆಯಡಿ ಸಿಬ್ಬಂದಿ ಮುಂದುವರಿಕೆ ಹಾಗೂ ಸಮಗ್ರ ಸೇವಾ ಭದ್ರತೆಗೆ ಆಗ್ರಹಿಸಿ ಅಕ್ಟೋಬರ್ 16 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
2008 ರಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಲ್ಲಾ ತಂತ್ರಾಂಶಗಳನ್ನು ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಇದುವರೆಗೂ ಯಾವುದೇ ಭದ್ರತೆ ಇಲ್ಲದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಮುಖ ಹಕ್ಕೊತ್ತಾಯಗಳು:
ವಿಬಿ-ಜಿರಾಮ್ಜಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮುಂದುವರಿಕೆಗೆ ತಕ್ಷಣವೇ ಅಧಿಕೃತ ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಸುದೀರ್ಘ ಸೇವೆಯನ್ನು ಪರಿಗಣಿಸಿ ಸೂಕ್ತ ಸೇವಾ ಭದ್ರತೆಯೊಂದಿಗೆ ಹುದ್ದೆಗಳನ್ನು ಖಾಯಂಗೊಳಿಸಬೇಕು.
ಕಾರ್ಮಿಕ ಇಲಾಖೆಯ ಸುತ್ತೋಲೆಯಂತೆ ಮುಂಬರುವ RDPR ನೇಮಕಾತಿಗಳಲ್ಲಿ ವೈಟೇಜ್, ಗರಿಷ್ಠ 30 ಅಂಕಗಳವರೆಗೆ ಕೃಪಾಂಕ (Grace marks) ಮತ್ತು ವಯೋಮಿತಿ ಸಡಿಲಿಕೆ ನೀಡಬೇಕು. ಪಂಚಾಯತ್ ರಾಜ್ ಅಧಿನಿಯಮ ಕಲಂ 113-ಎ ಅನ್ವಯ ಗ್ರಾಮ ಪಂಚಾಯತಿ ತಾಂತ್ರಿಕ ಸಿಬ್ಬಂದಿಗೆ ಮನ್ನಣೆ ನೀಡಬೇಕು.
ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಜಿ.ಪಂ. ನ DMIS, DIEC, DAM ರಂತೆ ತಾ.ಪಂ. ನ TMIS, TIEC ಹಾಗೂ ಆಡಳಿತ ಸಹಾಯಕರಿಗೂ ಸಮಾನ ವೇತನ ನಿಗದಿಪಡಿಸಬೇಕು. ಆಡಳಿತ ಸಹಾಯಕರಿಗೆ ತಾ.ಪಂ. ನ FDA/SDA ನೇಮಕಾತಿಯಲ್ಲಿ ಶೇ. 30 ಮೀಸಲಾತಿ ನೀಡಬೇಕು.
ಇಲಾಖೆಯ ಹೊಸ MIS ಹಾಗೂ IEC ನೇಮಕಾತಿಗಳಲ್ಲಿ ಹಾಲಿ ನೌಕರರಿಗೆ ಮೊದಲ ಆದ್ಯತೆ ನೀಡಬೇಕು ಮತ್ತು IEC ಸಿಬ್ಬಂದಿಯನ್ನು “ಆರ್ಡಿಪಿಆರ್ ಐಇಸಿ ಕಾರ್ಯಕ್ರಮ ವ್ಯವಸ್ಥಾಪಕರು/ಆರ್ಡಿಪಿಆರ್ PRO” ಎಂದು ಮರುನಾಮಕರಣ ಮಾಡಬೇಕು, ಮೂಲ ವೇತನಕ್ಕೆ ಶೇ. 25 ಹೆಚ್ಚಳ ಹಾಗೂ ವಾರ್ಷಿಕ ಶೇ. 10 ರಷ್ಟು ಕಡ್ಡಾಯ ವೇತನ ಏರಿಕೆ ನೀಡಬೇಕು.
ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕು ಮತ್ತು ಸಚಿವರು ಹಾಗೂ ಆಯುಕ್ತಾಲಯದ ಪ್ರಗತಿ ಪರಿಶೀಲನಾ ಸಭೆಯ ಅಜೆಂಡಾದಲ್ಲಿ ವೇತನ ವಿಚಾರ ಕಡ್ಡಾಯವಾಗಿ ಸೇರಿಸಬೇಕು.
ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಜಾರಿಗೊಳಿಸುವುದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸ್ಯಾಲರಿ ಪ್ಯಾಕೇಜ್ ಖಾತೆ ಕಡತಕ್ಕೆ ತಕ್ಷಣ ಅಂತಿಮ ಅನುಮೋದನೆ ನೀಡಬೇಕು ಎಂದು ಸಂಘವು ಒತ್ತಾಯಿಸಿದೆ.
ಪ್ರಯಾಣ ಭತ್ಯೆಯನ್ನು ರೂ. 5,000 ಕ್ಕೆ ಹೆಚ್ಚಿಸಿ ವೇತನದೊಂದಿಗೆ ಬಿಡುಗಡೆ ಮಾಡಬೇಕು. ಕ್ಷೇತ್ರ ಹಾಗೂ ಜಿ.ಪಂ. ಗೆ ಅಲೆದಾಡುವ TMIS ಮತ್ತು ಆಡಳಿತ ಸಹಾಯಕರಿಗೂ ಪ್ರಯಾಣ ಭತ್ಯೆ ವಿಸ್ತರಿಸಬೇಕು. ಏಜೆನ್ಸಿಗಳು ವೇತನ, PF, ESI ಪಾವತಿಸಿದ ರಸೀದಿ ನೀಡಿದ ನಂತರವೇ ಜಿ.ಪಂ. ನಿಂದ ಹಣ ಬಿಡುಗಡೆ ಮಾಡಬೇಕು ಹಾಗೂ ಈ ಹಿಂದೆ ಪಿಎಫ್ ಹಣ ದುರುಪಯೋಗಪಡಿಸಿಕೊಂಡ ಏಜೆನ್ಸಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
10 ವರ್ಷ ಸೇವೆ ಸಲ್ಲಿಸಿದವರಿಗೆ ಗ್ರಾಚ್ಯುಟಿ, ಅಂತರ-ಜಿಲ್ಲಾ ವರ್ಗಾವಣೆ ಸೌಲಭ್ಯ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಿಯಮಿತ ಕುಂದುಕೊರತೆ ಸಭೆಗಳನ್ನು ನಡೆಸಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಸರಿಯಾಗಿ ಸ್ಪಂದಿಸದ ಆರೋಗ್ಯ ವಿಮಾ ಸಂಸ್ಥೆಗೆ ಎಚ್ಚರಿಕೆ ನೀಡಿ ಕ್ಯಾಶ್ಲೆಸ್ ಮತ್ತು ಮರುಪಾವತಿ ಸೌಲಭ್ಯ ಖಾತರಿಪಡಿಸಬೇಕು. ಅನುಷ್ಠಾನ ಇಲಾಖೆಯ ಕಾಮಗಾರಿಗಳ ಪರಿಷ್ಕೃತ ಅಂತಿಮ ಆದೇಶ ಹೊರಡಿಸಿ, ತಾಂತ್ರಿಕ ಸಹಾಯಕರಿಗೆ ಪ್ರತ್ಯೇಕ SECURE ಮತ್ತು E-MB ಲಾಗಿನ್ ವ್ಯವಸ್ಥೆ ಮಾಡಬೇಕು.
ಇವುಗಳ ಜೊತೆಗೆ ವೈದ್ಯಕೀಯ ರಜೆ, ಪಿತೃತ್ವ ರಜೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 1 ದಿನದಂತೆ ವರ್ಷಕ್ಕೆ 12 ದಿನಗಳ ವೇತನ ಸಹಿತ ಋತುಚಕ್ರ ರಜೆ (Menstrual Leave) ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಸಂಘದಿಂದ ಅ.16ರಂದು ನಡೆಯುವ ಪ್ರತಿಭಟನೆಯಲ್ಲಿ ಒತ್ತಾಯಿಸಲು ತೀರ್ಮಾನಿಸಿದ್ದಾರೆ.
“ಗ್ರಾಮೀಣ ಜನರಿಗೆ ಕೆಲಸ ಕೊಟ್ಟು, ಸರ್ಕಾರಕ್ಕೆ ಪ್ರಶಸ್ತಿ ತಂದುಕೊಟ್ಟ ನಮ್ಮನ್ನು ನಿರ್ಲಕ್ಷಿಸಿದರೆ ನಾವು ಬದುಕುವುದಾದರೂ ಹೇಗೆ? ಇದು ಕೇವಲ ವೇತನದ ಪ್ರಶ್ನೆಯಲ್ಲ, ನಮ್ಮ ಅಸ್ತಿತ್ವ ಮತ್ತು ಸ್ವಾಭಿಮಾನದ ಹೋರಾಟ. ಅ.16 ರ ಹೋರಾಟ ಕೇವಲ ಸಾಂಕೇತಿಕ. ಸರ್ಕಾರ ತಕ್ಷಣ ಅಧಿಕೃತ ಆದೇಶ ಹೊರಡಿಸದಿದ್ದಲ್ಲಿ ರಾಜ್ಯಾದ್ಯಂತ ಯೋಜನೆ ಸಂಪೂರ್ಣ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು.”-ವಿನಯ್ ಕುಮಾರ್ ಆರ್. (ರಾಜ್ಯಾಧ್ಯಕ್ಷರು),ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು.
