ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರು ಸರಿಯಾದ ತೆರಿಗೆ ಪಾವತಿಸದೆ ನಿಯಮ ಉಲ್ಲಂಘಿಸುತ್ತಿರುವುದನ್ನು ತಡೆಗಟ್ಟಲು ಹಾಗೂ ನಿಖರ ಆಸ್ತಿ ವಿಸ್ತೀರ್ಣವನ್ನು ಪತ್ತೆಹಚ್ಚಲು ಲೇಸರ್ ಮೀಟರ್ ಮತ್ತು ಸ್ಯಾಟಲೈಟ್ ಡೇಟಾ ಆಧಾರಿತ ಪ್ರಾಯೋಗಿಕ ಸರ್ವೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ತಿಳಿಸಿದರು.
ಲೇಸರ್ ಮೀಟರ್ ಮೂಲಕ ಕಟ್ಟಡದ ನಿಖರ ಸರ್ವೆ
ಕಟ್ಟಡದ ವಿಸ್ತೀರ್ಣ ಅಳೆಯಲು ಸಾಂಪ್ರದಾಯಿಕ ಟೇಪ್ ಅಥವಾ ವಿಡಿಯೋಗ್ರಫಿ ಬಳಸುವ ಬದಲು ಲೇಸರ್ ಉಪಕರಣವನ್ನು ಬಳಸಲಾಗುತ್ತಿದೆ. ಕಟ್ಟಡದ ಹೊರಭಾಗದಲ್ಲಿ ನಿಂತು ಕ್ಲಿಕ್ ಮಾಡಿದಾಗ ಲೇಸರ್ ಡಾಟ್ ಮೂಲಕ ಗೋಡೆ ಅಥವಾ ಜಾಗದ ನಿಖರ ದೂರ ಮತ್ತು ವಿಸ್ತೀರ್ಣವನ್ನು ತಕ್ಷಣವೇ ಲೆಕ್ಕಹಾಕಲು ಈ ಉಪಕರಣ ನೆರವಾಗಲಿದೆ ಎಂದು ಆಯುಕ್ತರು ವಿವರಿಸಿದರು.
ಗೂಗಲ್ ಸ್ಯಾಟಲೈಟ್ ಡೇಟಾ ಬಳಕೆ
ಮೊಬೈಲ್ ಆ್ಯಪ್ ಮೂಲಕ ಕಟ್ಟಡಗಳ ವಿವರಗಳನ್ನು ದಾಖಲಿಸುವ ಜತೆಗೆ ಗೂಗಲ್ ಸ್ಯಾಟಲೈಟ್ ಇಮೇಜ್ನಲ್ಲಿ ಪಾಲಿಗಾನ್ ರಚಿಸಿ ಕಟ್ಟಡದ ಹೊರಭಾಗದ ವಿಸ್ತೀರ್ಣವನ್ನು (Outer Area) ಗುರುತಿಸಲಾಗುತ್ತದೆ. ನಂತರ ಒಳಭಾಗದ ಕೊಠಡಿಗಳು ಹಾಗೂ ಮಹಡಿಗಳ ವಿಸ್ತೀರ್ಣವನ್ನು ಲೇಸರ್ ಡಿವೈಸ್ ಮೂಲಕ ಅಳೆದು ಆಸ್ತಿಯ ಒಟ್ಟು ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸಲಾಗುತ್ತದೆ.
ಪ್ರಾಯೋಗಿಕ ಪರೀಕ್ಷೆಯಷ್ಟೇ, ಅಂತಿಮ ತೀರ್ಮಾನವಲ್ಲ
ಈ ವಿಧಾನವು ಸದ್ಯಕ್ಕೆ ಕೇವಲ ಪ್ರಾಯೋಗಿಕವಾಗಿದ್ದು, ಇದರ ಕುರಿತು ಪಾಲಿಕೆಯಿಂದ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಆಸ್ತಿ ಮಾಲೀಕರು ನೈಜ ವಿಸ್ತೀರ್ಣಕ್ಕಿಂತ ಕಡಿಮೆ ತೆರಿಗೆ ಡಿಕ್ಲೇರ್ ಮಾಡಿದ್ದಾರೆಯೇ ಅಥವಾ ಸರಿಯಾಗಿ ತೆರಿಗೆ ಕಟ್ಟುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಈ ಪ್ರಾಯೋಗಿಕ ಸರ್ವೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಡ್ರೋನ್ ಮೂಲಕ ಸರ್ವೆ ನಡೆಸಲಾಗುತ್ತಿದ್ದು, ಇದೀಗ ಸುಲಭವಾಗಿ ಮೊಬೈಲ್ ಆ್ಯಪ್ ಮತ್ತು ಲೇಸರ್ ಮೀಟರ್ ಬಳಸಿ ಸರ್ವೆ ನಡೆಸುವ ವಿನೂತನ ಪ್ರಯತ್ನಕ್ಕೆ ಪಾಲಿಕೆ ಮುಂದಾಗಿದೆ. ಈ ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾದಲ್ಲಿ, ಮುಂದಿನ ದಿನಗಳಲ್ಲಿ ಪಾಲಿಕೆಗೆ ಈ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು.
