ಸಮಗ್ರ ಸುದ್ದಿ

ಸರ್ಕಾರಿ ನೌಕರರ ವಿವಿಧ ಸೇವೆಗಳಿಗೆ ‘ಸಕಾಲ’ ಕಾಲಮಿತಿ: ರಾಜ್ಯ ಸರ್ಕಾರದಿಂದ ಮಹತ್ವದ ಅಧಿಸೂಚನೆ

Share

ಬೆಂಗಳೂರು :ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಂಬಂಧಿಸಿದ ಹಲವಾರು ಪ್ರಮುಖ ಸೇವೆಗಳನ್ನು ಈಗ ‘ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011’ರ ವ್ಯಾಪ್ತಿಗೆ ತರಲಾಗಿದೆ. ಆಡಳಿತ ಸುಧಾರಣಾ ಆಯೋಗ-2ರ ಏಳನೇ ವರದಿಯ ಶಿಫಾರಸುಗಳ ಅನುಸಾರ, ಈ ಸೇವೆಗಳನ್ನು ಎಲ್ಲಾ ಕ್ಷೇತ್ರ ಮಟ್ಟದ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.

ಸೇವೆಗಳು ಮತ್ತು ನಿಗದಿತ ಕೆಲಸದ ದಿನಗಳ ವಿವರ:

ಸಂಬಳ ಮತ್ತು ವೇತನಕ್ಕೆ ಸಂಬಂಧಿಸಿದ ಸೇವೆಗಳು:
ಸಂಬಳ ವಿತರಣೆ ಹಾಗೂ ವೇತನ ಪ್ರಮಾಣ ಪತ್ರ ನೀಡುವುದು — 3 ಕೆಲಸದ ದಿನಗಳು, ಕಾಲಮಿತಿ ವೇತನ ಬಡ್ತಿ ಮಂಜೂರಾತಿ, ವಾರ್ಷಿಕ ಬಡ್ತಿ ಮಂಜೂರಾತಿ, ವರ್ಗಾವಣೆ ಅಥವಾ ನಿಯೋಜನೆ ಮೇರೆಗೆ ಅಂತಿಮ ವೇತನ ಪ್ರಮಾಣಪತ್ರ ನೀಡುವುದು, ಆಧಾರಿತ ರಜೆಯ ವೇತನ ಮಂಜೂರಾತಿ, ವಾಹನ ಮತ್ತು ಗೃಹ ನಿರ್ಮಾಣ ಮುಂಗಡ ಮಂಜೂರಾತಿ ಹಾಗೂ ಅನ್ಯ ಸೇವಾ ನಿಯೋಜನೆಯಲ್ಲಿರುವ ಅಧಿಕಾರಿಗಳಿಗೆ ಷರತ್ತು/ನಿಬಂಧನೆ ನಿಗದಿ — 15 ಕೆಲಸದ ದಿನಗಳು, ಹಿರಿಯ ವೇತನ ಶ್ರೇಣಿ ಮಂಜೂರಾತಿ ಹಾಗೂ ಪ್ರಥಮ ವೇತನ ಪಡೆಯಲು ಅನುಮತಿ — 30 ಕೆಲಸದ ದಿನಗಳು (ಪ್ರಥಮ ವೇತನ ಪಡೆಯಲು ಅನುಮತಿಗೆ 7 ಕೆಲಸದ ದಿನಗಳು), ಫಾರ್ಮ್-16 ನೀಡುವುದು — 5 ಕೆಲಸದ ದಿನಗಳು, ಬಾಕಿ ವೇತನ ಮಂಜೂರಾತಿ — 90 ಕೆಲಸದ ದಿನಗಳು.

ರಜೆ ಮತ್ತು ಪ್ರವಾಸ ಭತ್ಯೆ ಸೇವೆಗಳು:

ವಿವಿಧ ಬಗೆಯ ರಜೆಗಳ ಮಂಜೂರಾತಿ (ಗಳಿಕೆ, ಪರಿವರ್ತಿತ, ಅರ್ಧ ವೇತನ ಹಾಗೂ ಅಸಾಧಾರಣ ರಜೆ) ಮತ್ತು ಪ್ರಭಾರ ಭತ್ಯೆ ಮಂಜೂರಾತಿ — 10 ಕೆಲಸದ ದಿನಗಳು, ಪ್ರವಾಸ ಭತ್ಯೆ ಕೋರಿಕೆ ಹಾಗೂ ಮಂಜೂರಾತಿ — 30 ಕೆಲಸದ ದಿನಗಳು.

ವೈದ್ಯಕೀಯ ಹಾಗೂ ನಿವೃತ್ತಿ/ಪಿಂಚಣಿ ಸೇವೆಗಳು:
ವೈದ್ಯಕೀಯ ವೆಚ್ಚ ಮರುಪಾವತಿ ಮಂಜೂರಾತಿ — 30 ಕೆಲಸದ ದಿನಗಳು, ಪಿಂಚಣಿ ಮತ್ತು ಉಪದಾನಗಳ ಇತ್ಯರ್ಥದ ಪ್ರಸ್ತಾವನೆಗಳನ್ನು ಮಹಾಲೇಖಪಾಲರಿಗೆ ಕಳುಹಿಸುವುದು — 30 ಕೆಲಸದ ದಿನಗಳು, ಸಾಮಾನ್ಯ ಭವಿಷ್ಯ ನಿಧಿ (GPF) ಮುಂಗಡ, ಭಾಗಶಃ ಮತ್ತು ಅಂತಿಮ ಹಿಂಪಡೆಯುವಿಕೆ ಮಂಜೂರಾತಿ — 30 ಕೆಲಸದ ದಿನಗಳು, ಮರಣ ಪ್ರಕರಣಗಳ ಇತ್ಯರ್ಥ — 30 ಕೆಲಸದ ದಿನಗಳು.

ಅನುಮತಿ ಮತ್ತು ಪತ್ರಗಳ ಸೇವೆಗಳು:

ಪಾಸ್ ಪೋರ್ಟ್ ಪಡೆಯಲು ನಿರಾಕ್ಷೇಪಣಾ ಪತ್ರ (NOC) ನೀಡುವುದು — 10 ಕೆಲಸದ ದಿನಗಳು, ವಿದೇಶ ಪ್ರವಾಸಕ್ಕೆ ಅನುಮತಿ — 15 ಕೆಲಸದ ದಿನಗಳು, ಉನ್ನತ ವ್ಯಾಸಂಗಕ್ಕೆ ಅನುಮತಿ — 7 ಕೆಲಸದ ದಿನಗಳು, ಮನೆ, ನಿವೇಶನ ಅಥವಾ ವಾಹನ ಖರೀದಿ/ಮಾರಾಟಕ್ಕೆ ಅನುಮತಿ — 30 ಕೆಲಸದ ದಿನಗಳು, ಅರ್ಜಿಗಳನ್ನು ಕೆ.ಜಿ.ಐ.ಡಿ, ಜಿ.ಐ.ಎಸ್, ಜಿ.ಪಿ.ಎಫ್ ಇತ್ಯಾದಿ ಸಮುಚಿತ ಮಾರ್ಗದಲ್ಲಿ ರವಾನಿಸುವುದು — 7 ಕೆಲಸದ ದಿನಗಳು.

ಇತರ ಪ್ರಮುಖ ಸಿಬ್ಬಂದಿ ಸೇವೆಗಳು:

ಹಬ್ಬದ ಮುಂಗಡ ಮಂಜೂರಾತಿ — 7 ಕೆಲಸದ ದಿನಗಳು, ಸೇವಾ ಪುಸ್ತಕ ಕಳುಹಿಸುವುದು ಹಾಗೂ ಸೇವಾ ಪುಸ್ತಕದ ನಕಲು ನೀಡುವುದು — 15 ಕೆಲಸದ ದಿನಗಳು, ಪರೀಕ್ಷಾರ್ಥ ಸೇವಾವಧಿ ಘೋಷಣೆ/ವಿಸ್ತರಣೆ, ಸ್ಥಾನಪನ್ನಾವಧಿ ಘೋಷಣೆ, ಕೆಸಿಎಸ್‌ಆರ್ 53(ಎಫ್) ರನ್ವಯ ಪ್ರಮಾಣ ಪತ್ರ, ಜೇಷ್ಠತಾ ಪಟ್ಟಿಯಲ್ಲಿ ಹೆಸರು ತಿದ್ದುಪಡಿ ಹಾಗೂ ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರಾತಿ — 30 ಕೆಲಸದ ದಿನಗಳು, ಅನುಕಂಪದ ಆಧಾರದ ಮೇಲೆ ನೇಮಕಾತಿ ಮತ್ತು ಅಂಗವಿಕಲ ಭತ್ಯೆ ಮಂಜೂರಾತಿ — 90 ಕೆಲಸದ ದಿನಗಳು, ಕುಟುಂಬ ಯೋಜನೆ ಅನುಸರಣೆಗೆ ವಿಶೇಷ ಭತ್ಯೆ ಮಂಜೂರಾತಿ — 30 ಕೆಲಸದ ದಿನಗಳು.

ವಿಶೇಷ ಸೂಚನೆಗಳು:

ಈಗಾಗಲೇ ಸಕಾಲ ವ್ಯಾಪ್ತಿಯಲ್ಲಿರುವ ಇಲಾಖೆಗಳು ತಮ್ಮ ಪೂರ್ವಾಸ್ತಿತ್ವದಲ್ಲಿದ್ದ ಅಧಿಕಾರಿಗಳ ವ್ಯವಸ್ಥೆಯನ್ನೇ ಮುಂದುವರಿಸಲಿದ್ದು, ಉಳಿದ ಇಲಾಖೆಗಳ ನೋಡಲ್ ಅಧಿಕಾರಿಗಳು ಅಧಿಸೂಚನೆ ಹೊರಬಿದ್ದ 15 ದಿನಗಳ ಒಳಗಾಗಿ ಸಕಾಲ ಮಿಷನ್‌ಗೆ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸಬೇಕಾಗಿದೆ. ಅಲ್ಲದೆ, ಮೊದಲನೇ ಹಾಗೂ ಎರಡನೇ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಸಕ್ಷಮ ಪ್ರಾಧಿಕಾರಗಳಿಗೆ ಏಕರೂಪವಾಗಿ 35 ಕೆಲಸದ ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ.

ಸಿಬ್ಬಂದಿ ಸೇವೆಗಳನ್ನು ನಿಯಮಿತ ಸಮಯದಲ್ಲೇ ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಕಾಲಮಿತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page