ಸಮಗ್ರ ಸುದ್ದಿ

ಜಂಬೂ ಸವಾರಿಯಲ್ಲಿ ವಿಜೃಂಭಿಸಿದ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಸಿಎಂ ಪುಷ್ಪಾರ್ಚನೆ

Share

ನೆರೆರಾಜ್ಯದ ಸಿಎಂಗಳಿಂದಲೂ ಪುಷ್ಪಾರ್ಚನೆಯ ಹೊಸ ಸಂಪ್ರದಾಯ; ರಾಜಮನೆತನದ ಸಂಸದ ಯದುವೀರ್ ಬಾಗಿ

ಮೈಸೂರು:ಹನ್ನೊಂದು ದಿನಗಳಿಂದ ದಿನಗಣನೆ ಮಾಡುತ್ತಿದ್ದ ಜಂಬೂಸವಾರಿಗೆ ಬುಧವಾರ ಸಂಜೆ 4.10 ರಿಂದ 4.35ರೊಳಗೆ ಮೀನ ಲಗ್ನದಲ್ಲಿ ಅಂಬಾವಿಲಾಸ ಅರಮನೆಯ ಒಳ ಆವರಣದಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರು, ವಿದೇಶಿ ರಾಯಬಾರಿಗಳ ಸಮ್ಮುಖದಲ್ಲಿ ನಾಡಿನ‌ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿಎಂ ಡಿ ಕೆ ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸಿದರು.

ಇದೇ ಮೊದಲ ಬಾರಿಗೆ ನೆರೆಯ ಕೇರಳ ಸಿಎಂ ವಿ ಡಿ ಸತೀಶನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು. ನಾವೆಲ್ಲರೂ ಒಂದು. ನಮಗೆ ಗಡಿ, ಭಾಷೆಗಳ ಹಂಗಿಲ್ಲ ಎನ್ನುವ ಸಂದೇಶವನ್ನು ಸಿಎಂ ಈ ಮೂಲಕ ನೀಡಿದರು.

ಮೈಸೂರು ಒಡೆಯರ್ ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೂ ಸಹ ಪುಷ್ಪಾರ್ಚನೆಯಲ್ಲಿ ಭಾಗವಹಿಸಿದ್ದು ‘ರಾಜ‌’ಕಳೆ‌ ಬಂತು. ರಾಜವಂಶಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ದಸರಾ ಆಚರಣೆ ಎಂದು ಹೇಳಿದ್ದ ಸಿಎಂ ತಮ್ಮ ಮಾತಿನಂತೆ ನಡೆದರು.

ಸಿಎಂ ಡಿ ಕೆ‌ ಶಿವಕುಮಾರ್ ಅವರು ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ಬಂದಿಳಿದವರೇ, ಅಲ್ಲಿಂದ ನೇರವಾಗಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಂತರ ಮಠದ ಹೋಮ ಹವನದಲ್ಲಿ ಪಾಲ್ಗೊಂಡರು. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ತಾಯಿ ಚಾಮುಂಡೇಶ್ವರಿಯ ಪಾದ ಪೂಜೆ ಮಾಡಿ ಕೃತಾರ್ಥರಾದರು.

ಮೈಸೂರು ಪೇಟ ಧರಿಸಿ ನಂದಿ ಧ್ವಜ ಪೂಜೆ

ಮಧ್ಯಾಹ್ನ 1:36 ರಿಂದ 1:56ರ ವರೆಗೆ ಸಂದ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ಇರುವ ಕೋಟೆ ಆಂಜನೇಯ ಸ್ವಾಮಿ ಮುಂಭಾಗದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಾಡಿನ‌ ಜನರ ಒಳಿತಿಗೆ ಪ್ರಾರ್ಥಿಸುವ ಮೂಲಕ ಮುಖ್ಯಮಂತ್ರಿಯಾಗಿ ಮೊದಲ‌ ದಸರಾ ಟ್ಯಾಬ್ಲೋಗಳು ಹಾಗೂ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು.‌ ಈ ಸಂದರ್ಭದಲ್ಲಿ ಮೈಸೂರಿನ ಶಿಲ್ಪಿ ರಾಜೇಶ್ ತಯಾರಿಸಿದ ಅಜ್ಯಯ್ಯನ ವಿಗ್ರಹವನ್ನು ಸಿಎಂ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಲಾಯಿತು.

ಸಿಎಂ ಈ ಮೊದಲೇ ಹೇಳಿದಂತೆ ದೇಶದ ನಾನಾ ರಾಜ್ಯಗಳ ಕಲಾ ಪ್ರಕಾರಗಳು ಪ್ರದರ್ಶನಗೊಂಡವು. ಒಂದೇ ರೀತಿಯ ಜನಪದ ವಾದ್ಯ, ನೃತ್ಯ ಪ್ರಕಾರಗಳು ಪುನರಾವರ್ತನೆ ಆಗುವುದನ್ನು ತಪ್ಪಿಸಲಾಗಿತ್ತು.
ಕನ್ನಡ ಚಿತ್ರರಂಗದ ನಟನಟಿಯರು ದಸರಾ‌ ಮೆರವಣಿಗೆಗೆ ಹೊಸ ರಂಗು ತಂದರೇ, ಭೂಸೇನೆ, ವಾಯುಸೇನೆ, ನೌಕಾದಳದ ಬ್ಯಾಂಡ್ ಗಳು ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಆನೆಗಳಿಗೆ ಕಬ್ಬಿನ ಜಲ್ಲೆ ತಿನ್ನಿಸಿ ನಮಿಸಿದ ಸಿಎಂ

6 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು ನಿಶಾನೆ ಆನೆಯಾಗಿ ಬಂದ‌ ತಕ್ಷಣ ಸಿಎಂ ಡಿ ಕೆ ಶಿವಕುಮಾರ್ ಅವರು ಆನೆಯ ಹಣೆಗೆ ಕೈಯಿಟ್ಟು ಪ್ರಾರ್ಥಿಸಿದರು. ದಂತಗಳನ್ನು ನೇವರಿಸಿ ನಮಸ್ಕರಿಸಿದರು.
ನಿಶಾನೆ ಆನೆಗಳಾದ ಗೋಪಿ, ಮಹೇಂದ್ರ, ಚೈತ್ರ, ಸುಗ್ರೀವ, ಏಕಲವ್ಯನಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಎಲ್ಲಾ ಆನೆಗಳಿಗೂ ಪತ್ನಿ ಸಮೇತರಾಗಿ ಕಬ್ಬಿನ ಜಲ್ಲೆ ನೀಡಿ ಆಶೀರ್ವಾದ ಪಡೆದರು. ಟ್ಯಾಬ್ಲೋ ಹಾಗೂ ಕಲಾ ತಂಡಗಳ ಮೆರವಣಿಗೆ ವೇಳೆ ಬಂದ ಎರಡು ಜೊತೆ ಹಳ್ಳಿಕಾರ ಹೋರಿಗಳ ತಲೆ ನೇವರಿಸಿ ಆಶೀರ್ವಾದ ಪಡೆದರು.

ವಿದೇಶಿ‌ ರಾಯಭಾರಿಗಳೊಂದಿಗೆ ಕುಶಲೋಪರಿ ವಿನಿಮಯ

ಸಚಿವರಾದ ಶಿವರಾಜ ತಂಗಡಗಿ, ಯತೀಂದ್ರ ಸಿದ್ದರಾಮಯ್ಯ, ಬಸವಂತಪ್ಪ, ಶಾಸಕ ತನ್ವೀರ್ ಸೇಠ್ ಅವರೊಂದಿಗೆ ತೆರೆದ ವಾಹನದಲ್ಲಿ ಬಲರಾಮ ದ್ವಾರದಿಂದ ಅರಮನೆ ಆವರಣಕ್ಕೆ ಆಗಮಿಸಿದ ಡಿ ಕೆ ಶಿವಕುಮಾರ್ ಅವರು ನೆರೆದಿದ್ದ ಕರುನಾಡ ಜನರಿಗೆ ನಮಸ್ಕರಿಸಿದರು. ವಿದೇಶಿ ರಾಯಬಾರಿಗಳ ಬಳಿ ತೆರಳಿ ಅವರ ಕುಶಲೋಪರಿ ವಿಚಾರಿಸಿದರು. ಸಂಸದ ಯದುವೀರ್ ಅವರನ್ನು ಕೇರಳ ಹಾಗೂ ತೆಲಂಗಾಣ ಸಿಎಂ ಅವರಿಗೆ ಪರಿಚಯಿಸಿದರು. ಪ್ರತಿಯೊಂದು ಕಲಾತಂಡಗಳ ಪ್ರದರ್ಶನ, ಸ್ಥಬ್ದಚಿತ್ರಗಳನ್ನು ಮೆಚ್ಚಿದ ಸಿಎಂ ಚಪ್ಪಾಳೆ ತಟ್ಟಿ ಜನಪದ ಕಲಾವಿದರನ್ನು ಹುರಿದುಂಬಿಸಿದರು.

ಅರಮನೆ‌ ಹೊರಗೆ ಜನಸಾಗರ

ವಿಜಯದಶಮಿ ಸೊಬಗನ್ನು, ವಿಶ್ವವಿಖ್ಯಾತ ಜಂಬೂ ಸವಾರಿ ವೈಭವವನ್ನು ಕಣ್ತುಂಬಿ ಕೊಳ್ಳಲು ದೇಶ ವಿದೇಶಗಳಿಂದ ಜನರು ಕಡಲಂತೆ ಹರಿದು ಬಂದಿದ್ದರು. ಅರಮನೆ ಸುತ್ತಮುತ್ತಲ 5 ಕಿ.ಮೀ. ಪಾಸಲೆಯಲ್ಲಿ, ಕಣ್ಣಿಟ್ಟ ಕಡೆಯೆಲ್ಲ‌ ಜನಸಾಗರ. ‘ಬಾ‌ ಇಲ್ಲಿ‌ ಸಂಭ್ರಮಿಸು’ ಅಂತ ಬಂದವರ ಸಂಭ್ರಮದ ಅಲೆ ಇಡೀ ಮೈಸೂರನ್ನೆಲ್ಲಾ ತುಂಬಿ ಹೋಗಿತ್ತು.

ಬಾನಂಗಳದಲ್ಲಿ ಡ್ರೋನ್ ಮೂಲಕ ಸಿಎಂ ಚಿತ್ತಾರ

ಮುಖ್ಯಮಂತ್ರಿಗಳು ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರೊಂದಿಗೆ ಪಂಜಿನ ಕವಾಯತು ವೀಕ್ಷಿಸುವ ಮೂಲಕ ವಿಶ್ವವಿಖ್ಯಾತ ವೈಭವ ದಸರಾಕ್ಕೆ ತೆರೆ ಎಳೆದರು. ಇದಕ್ಕೆ ಕೇರಳ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು ಸಾಕ್ಷಿಯಾದರು. ಡ್ರೋಣ್ ಗಳ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಅವರ ಬೃಹತ್ ಚಿತ್ತಾರ ಮೂಡಿದೊಡನೆ ನೆರೆದಿದ್ದ ಜನ ಶಿಳ್ಳೆ ಚಪ್ಪಾಳೆಗಳ ಮೂಲಕ ಸಂಭ್ರಮಿಸಿದರು. ಡ್ರೋಣ್ ಚಿತ್ತಾರಗಳನ್ನು ಕಂಡು ಸ್ವತಃ ಸಿಎಂ ಡಿ ಕೆ ಶಿವಕುಮಾರ್ ಅವರೇ ಹರ್ಷಚಿತ್ತರಾದರು.

ಸಿಎಂ ಆಶಯದಂತೆ ಎಲ್ಲರನ್ನು ಒಳಗೊಂಡೇ ಮೈಸೂರು ದಸರಾ ಯಶಸ್ವಿಯಾಗಿ ಸಂಪನ್ನವಾಯಿತು.


Share

You cannot copy content of this page